ಇನ್‌ಸ್ಟಂಟ್‌ ನೂಡಲ್ಸ್ ಯುಗದಲ್ಲಿ ಜನ ಇನ್‌ಸ್ಟಂಟ್‌ ನ್ಯಾಯ ನಿರೀಕ್ಷಿಸುತ್ತಿದ್ದಾರೆ: ಸಿಜೆಐ ಎನ್ ವಿ ರಮಣ

"ಆದರೆ ತ್ವರಿತ ನ್ಯಾಯಕ್ಕಾಗಿ ಯತ್ನಿಸಿದರೆ ನೈಜ ನ್ಯಾಯ ದೊರೆಯುವುದಿಲ್ಲ ಎಂಬುದನ್ನು ಜನ ಅರ್ಥಮಾಡಿಕೊಳ್ಳುವುದಿಲ್ಲ" ಎಂದು ವಿವರಿಸಿದ ಸಿಜೆಐ.
ಇನ್‌ಸ್ಟಂಟ್‌ ನೂಡಲ್ಸ್ ಯುಗದಲ್ಲಿ ಜನ ಇನ್‌ಸ್ಟಂಟ್‌ ನ್ಯಾಯ ನಿರೀಕ್ಷಿಸುತ್ತಿದ್ದಾರೆ: ಸಿಜೆಐ ಎನ್ ವಿ ರಮಣ

ಇಂದು ಜನ ತ್ವರಿತ ನ್ಯಾಯವನ್ನು ನಿರೀಕ್ಷಿಸುತ್ತಾರೆ ಆದರೆ ತ್ವರಿತ ನ್ಯಾಯದ ಅನ್ವೇಷಣೆಯಲ್ಲಿ ನಿಜವಾದ ನ್ಯಾಯವು ಬಲಿಯಾಗಬಹುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅಭಿಪ್ರಾಯಪಟ್ಟರು.

ಮದ್ರಾಸ್ ಹೈಕೋರ್ಟ್‌ನ ಆಡಳಿತ ವಿಭಾಗ ಕಟ್ಟಡದ ಶಂಕುಸ್ಥಾಪನೆ ಮತ್ತು ನಾಮಕ್ಕಲ್ ಹಾಗೂ ವಿಲ್ಲುಪುರಂ ಜಿಲ್ಲೆಗಳಲ್ಲಿ ನ್ಯಾಯಾಲಯ ಕಟ್ಟಡ ಉದ್ಘಾಟನೆಯನ್ನು ಶನಿವಾರ ಅವರು ನೆರವೇರಿಸಿ ಮಾತನಾಡಿದರು.

"ಟೆಸ್ಟ್ ಪಂದ್ಯದಿಂದ ನಾವು 20-20 ಸ್ವರೂಪಕ್ಕೆ ಬದಲಾಗಿದ್ದೇವೆ. 3 ಗಂಟೆಗಳ ಅವಧಿಯ ಸಿನಿಮಾಗಿಂತಲೂ ಕಡಿಮೆ ಅವಧಿಯ ಮನರಂಜನೆಗೆ ಆದ್ಯತೆ ನೀಡುತ್ತೇವೆ. ನಾವು ಫಿಲ್ಟರ್ ಕಾಫಿಯಿಂದ ಇನ್‌ಸ್ಟಂಟ್‌ ಕಾಫಿಗೆ ಹೊರಳಿದ್ದೇವೆ. ಈ ದಿಢೀರ್ ನೂಡಲ್ಸ್ ಯುಗದಲ್ಲಿ, ಜನ ತ್ವರಿತ ನ್ಯಾಯ ಬೇಡುತ್ತಾರೆ. ಆದರೆ ತ್ವರಿತ ನ್ಯಾಯಕ್ಕಾಗಿ ಯತ್ನಿಸಿದರೆ ನೈಜ ನ್ಯಾಯ ದೊರೆಯುವುದಿಲ್ಲ ಎಂಬುದು ಜನರಿಗೆ ಅರ್ಥವಾಗುವುದಿಲ್ಲ, ”ಎಂದು ಅವರು ವಿವರಿಸಿದರು.

Also Read
ಮಿಸಲೇನಿಯಸ್ ದಿನಗಳಲ್ಲಿ ಆನ್‌ಲೈನ್‌ ವಿಚಾರಣೆ ಮುಂದುವರೆಸಲು ಸುಪ್ರೀಂ ಕೋರ್ಟ್ ನಿರ್ಧಾರ: ಸಿಜೆಐ

"ಜನ ಸಂಕಷ್ಟದ ಸಮಯದಲ್ಲಿ ನ್ಯಾಯಾಂಗದತ್ತ ನೋಡುತ್ತಾರೆ. ತಮ್ಮ ಹಕ್ಕುಗಳನ್ನು ನ್ಯಾಯಾಲಯಗಳು ರಕ್ಷಿಸುತ್ತವೆ ಎಂದು ದೃಢವಾಗಿ ನಂಬುತ್ತಾರೆ. ನ್ಯಾಯಾಂಗದ ಕಾರ್ಯನಿರ್ವಹಣೆಯನ್ನು ಹೇಗೆ ಸುಧಾರಿಸಬೇಕು ಮತ್ತು ನ್ಯಾಯದ ಅಗತ್ಯಗಳನ್ನು ಪೂರೈಸಲು ಜನರನ್ನು ಹೇಗೆ ತಲುಪಬೇಕು ಎಂಬುದನ್ನು ಆಲೋಚಿಸುವುದು ಮುಖ್ಯ . ಈ ದೃಷ್ಟಿಯಿಂದ ನಾನು ನ್ಯಾಯಾಂಗದ ಭಾರತೀಕರಣದ ಪ್ರತಿಪಾದಕ" ಎಂದು ಅವರು ಹೇಳಿದರು.

ನ್ಯಾಯಾಂಗದ ಭಾರತೀಕರಣ ಎಂಬುದು “ಬಹು ಆಯಾಮದ ಪರಿಕಲ್ಪನೆ. ಇದು ಸಮಾಜದ ಎಲ್ಲ ಜನರ ಒಳಗೊಳ್ಳುವಿಕೆ, ವಿಚಾರಣೆಯಲ್ಲಿ ಭಾಗವಹಿಸಲು ಜನರಿಗೆ ಅವಕಾಶ ನೀಡುವುದು, ಭಾಷಾ ತೊಡಕು ತೆಗೆದುಹಾಕುವುದು, ಪ್ರಾಕ್ಟೀಸ್‌ನಲ್ಲಿ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ, ಖಾಲಿ ಹುದ್ದೆ ಭರ್ತಿ, ನ್ಯಾಯಾಂಗದ ಬಲ ಹೆಚ್ಚಳದ ಬಗ್ಗೆ ಒತ್ತು ನೀಡುತ್ತದೆ” ಎಂದರು.

ನ್ಯಾಯಾಂಗ ಮೂಲಸೌಕರ್ಯ ಸುಧಾರಿಸುವುದರ ಮಹತ್ವವನ್ನು ಅವರು ಎತ್ತಿ ತೋರಿಸಿದರು."ನಾನು ಅಧಿಕಾರ ವಹಿಸಿಕೊಂಡಾಗಿನಿಂದ ನ್ಯಾಯಾಂಗ ಮೂಲಸೌಕರ್ಯ ಬಲಪಡಿಸುವುದಕ್ಕೆ ಪ್ರಮುಖ ಆದ್ಯತೆ ನೀಡಿದ್ದೇನೆ" ಎಂದ ಅವರು ಈ ನಿಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com