ಅಧಿಕಾರಿಗಳ ನಿಷ್ಕ್ರಿಯತೆ ಅಕ್ರಮ ನಿರ್ಮಾಣಗಳಿಗೆ ಗುರಾಣಿಯಾಗಬಾರದು: ಸುಪ್ರೀಂ ಕೋರ್ಟ್

ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ಉಲ್ಲಂಘನೆ ಮತ್ತು ಅಕ್ರಮಗಳನ್ನು ಸಕ್ರಮಗೊಳಿಸುವ ಮೂಲಕ ಲಾಭಗಳಿಸಲು ಯತ್ನಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ.
Supreme Court
Supreme Court
Published on

ಅನಧಿಕೃತ ನಿರ್ಮಾಣಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಉಂಟಾಗುವ ವಿಳಂಬ ಅಥವಾ ಅಲಕ್ಷ್ಯವನ್ನು ಭವಿಷ್ಯದಲ್ಲಿ ಅಂತಹ ಅಕ್ರಮ ರಕ್ಷಿಸುವ ಗುರಾಣಿಯಾಗಿ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ [ರಾಜೇಂದ್ರ ಕುಮಾರ್ ಬರ್ಜಾತ್ಯಾ ಮತ್ತು ಉತ್ತರ ಪ್ರದೇಶ ಆವಾಸ್ ಏವಂ ವಿಕಾಸ್ ಪರಿಷತ್].

ಉತ್ತರ ಪ್ರದೇಶದ ಮೀರತ್‌ನಲ್ಲಿರುವ ವಸತಿ ಭೂಮಿಯೊಂದರಲ್ಲಿ ವಾಣಿಜ್ಯ ನಿರ್ಮಾಣ ಕೈಗೊಂಡಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
[ಅಕ್ರಮ ಕಟ್ಟಡ ನಿರ್ಮಾಣ] ಬಿಬಿಎಂಪಿ ಕಾಯಿದೆಯಲ್ಲಿ ಶಿಕ್ಷೆ ಉಲ್ಲೇಖಿಸಲು ಕೋರಿಕೆ; ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಸ್ಥಳೀಯ ಪ್ರಾಧಿಕಾರ ಅನುಮೋದಿಸಿದ ಕಟ್ಟಡದ ಯೋಜನೆಯನ್ನು ಉಲ್ಲಂಘಿಸಿ ಅಥವಾ ಅಂತಹ ಯೋಜನಾ ಅನುಮತಿ ಇಲ್ಲದೆ ಭಂಡ ಧೈರ್ಯದಿಂದ ನಿರ್ಮಿಸಲಾದ ಕಟ್ಟಡಗಳನ್ನು ಪ್ರೋತ್ಸಾಹಿಸುವಂತಿಲ್ಲ ಎಂದು ಅದು ಒತ್ತಿ ಹೇಳಿದೆ.

ಪ್ರತಿಯೊಂದು ಕಟ್ಟಡವನ್ನು ಸೂಕ್ಷ್ಮವಾಗಿ ಗಮನಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ಒತ್ತಿಹೇಳಿತು.

"ಯಾವುದೇ ಉಲ್ಲಂಘನೆಯನ್ನು ನ್ಯಾಯಾಲಯಗಳ ಗಮನಕ್ಕೆ ತಂದರೆ, ಅದನ್ನು ನಿಷ್ಠುರವಾಗಿ ನಿಗ್ರಹಿಸಬೇಕು ಮತ್ತು ಅವರೊಂದಿಗೆ ಮೆದುವಾಗಿ ನಡೆದುಕೊಳ್ಳುವುದು ಸುಳ್ಳೇ ಸಹಾನುಭೂತಿಯನ್ನು ತೋರಿಸುತ್ತದೆ” ಎಂದು ಪೀಠ ತಿಳಿಸಿದೆ.

ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ಉಲ್ಲಂಘನೆ ಮತ್ತು ಅಕ್ರಮಗಳನ್ನು ಸಕ್ರಮಗೊಳಿಸುವ ಮೂಲಕ ಲಾಭಗಳಿಸಲು ಯತ್ನಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ.

ಕ್ರಮಬದ್ಧ ನಗರಾಭಿವೃದ್ಧಿಯ ಮೇಲೆ ಉಂಟಾಗುವ ದುಷ್ಪರಿಣಾಮ ಮತ್ತು ಪರಿಸರದ ಮೇಲೆ ಆಗುವ ಬದಲಾಯಿಸಲಾಗದಂತಹ ಪ್ರತಿಕೂಲ ಪರಿಣಾಮಗಳ ದೀರ್ಘಕಾಲೀನ ಹಾನಿಗೆ ಹೋಲಿಸಿದರೆ ಇಂತಹ ಲಾಭ ಅತ್ಯಲ್ಪವಾಗಿದೆ ಎಂಬುದನ್ನು ಸರ್ಕಾರಗಳು ಗಮನಿಸುವುದಿಲ್ಲ ಎಂದು ಅದು ಹೇಳಿದೆ.

ಹೀಗಾಗಿ ಸಕ್ರಮಗೊಳಿಸುವ ಯೋಜನೆಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಪರಿಗಣಿಸಬೇಕು ಎಂದು ಪೀಠ ತಿಳಿಸಿದೆ.

Also Read
ಮಾನ್ಯತೆ ನವೀಕರಣಕ್ಕೆ ಕಟ್ಟಡ, ಅಗ್ನಿ ಸುರಕ್ಷತಾ ಪ್ರಮಾಣಪತ್ರ ಕಡ್ಡಾಯ: ಮುಂದಿನ ವರ್ಷದವರೆಗೆ ಸಮಯ ನೀಡಿದ ಹೈಕೋರ್ಟ್‌

ಅನಧಿಕೃತ ಕಟ್ಟಡಗಳು ನಿವಾಸಿಗಳು ಮತ್ತು ಸುತ್ತಮುತ್ತಲಿನ ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುವುದಲ್ಲದೆ, ವಿದ್ಯುತ್, ಅಂತರ್ಜಲ ಮತ್ತು ರಸ್ತೆ ಬಳಕೆಯಂತಹ ಸಂಪನ್ಮೂಲಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಒತ್ತಿ ಹೇಳಿತು.

ಮಾಸ್ಟರ್ ಪ್ಲಾನ್ ಅಥವಾ ವಲಯ ಅಭಿವೃದ್ಧಿ ಎಂಬುದು ಬರೀ ವ್ಯಕ್ತಿ ಕೇಂದ್ರಿತವಾಗಿರದೆ  ಸಾರ್ವಜನಿಕ ಮತ್ತು ಪರಿಸರದ ವಿಸ್ತೃತ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರೂಪುಗೊಳ್ಳಬೇಕು ಎಂದಿತು. ಅಂತೆಯೇ ಸಮಸ್ಯೆಯ ಪ್ರಾಮುಖ್ಯತೆಯನ್ನು ಪರಿಗಣಿಸಿ ನ್ಯಾಯಾಲಯ ವಿವಿಧ ನಿರ್ದೇಶನಗಳನ್ನು ನೀಡಿತು.

Kannada Bar & Bench
kannada.barandbench.com