ನ್ಯಾಯಾಂಗದ ಸ್ವಾತಂತ್ರ್ಯ ನಾಗರಿಕರ ಮೂಲಭೂತ ಹಕ್ಕು: ನ್ಯಾ. ಹಿಮಾ ಕೊಹ್ಲಿ

ವಿಶೇಷವಾಗಿ ಭಾರತದಂತಹ ದೇಶದಲ್ಲಿ ನ್ಯಾಯಾಂಗ ಸ್ವಾತಂತ್ರ್ಯ ಕೇವಲ ಒಂದು ತತ್ವವಾಗಿರದೆ ನೈತಿಕ ಅವಶ್ಯಕತೆಯಾಗಿದೆ ಎಂದು ನ್ಯಾ. ಕೊಹ್ಲಿ ತಿಳಿಸಿದರು.
Justice Hima Kohli
Justice Hima Kohli

ನ್ಯಾಯಾಂಗದ ಸ್ವಾತಂತ್ರ್ಯವು ನಾಗರಿಕರ ಮೂಲಭೂತ ಹಕ್ಕು ಮಾತ್ರವಲ್ಲದೆ ಸದೃಢ ಪ್ರಜಾಸತ್ತಾತ್ಮಕ ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಅತ್ಯಗತ್ಯ ಸ್ಥಿತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದ್ದಾರೆ.

ಭಾರತ್‌ ವಾಣಿಜ್ಯ ಮಹಾಸಂಸ್ಥೆ ಮತ್ತು ಕೋಲ್ಕತ್ತಾದ ಭಾರತೀಯ ಮಧ್ಯಸ್ಥಿಕೆ ಮಂಡಲಿ ಸಹಯೋಗದಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಐಸಿಸಿಐ) ʼಸ್ವತಂತ್ರ ನ್ಯಾಯಾಂಗ: ಹುರುಪಿನ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯʼ ಎಂಬ ವಿಷಯದ ಕುರಿತು ಮಾರ್ಚ್ 4ರಂದು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಂವಿಧಾನ ಹಾಗೂ ಕಾನೂನುಗಳ ವ್ಯಾಖ್ಯಾನ ಆಧರಿಸಿ ತೀರ್ಪು ನೀಡಲು ನ್ಯಾಯಾಂಗಕ್ಕೆ ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ತನ್ನ ಮೂಲಭೂತ ಮೌಲ್ಯ ಮತ್ತು ತತ್ವಗಳಲ್ಲಿ ಬೇರೂರುತ್ತಾ ಸಂವಿಧಾನವು ಕಾಲಾನಂತರದಲ್ಲಿ ವಿಕಸನಗೊಳ್ಳುವ ಜೀವಂತ ದಾಖಲೆಯಾಗಿ ಉಳಿಯಲು ಈ ರೀತಿಯ ವ್ಯಾಖ್ಯಾನ ಖಾತರಿ ಒದಗಿಸುತ್ತದೆ ಎಂದು ಅವರು ಹೇಳಿದರು.

Also Read
ಪುರುಷ ಪ್ರಧಾನತೆ ತೊಡೆದುಹಾಕಲು ಸಶಸ್ತ್ರ ಪಡೆಗಳಲ್ಲಿನ ಲಿಂಗ ಸಮಾನತೆ ವೇಗ ಒದಗಿಸುತ್ತದೆ: ನ್ಯಾ. ಹಿಮಾ ಕೊಹ್ಲಿ

“ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿಯುವಲ್ಲಿ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಸ್ವತಂತ್ರ ನ್ಯಾಯಾಂಗ ಎಂಬುದು ನಿರ್ಣಾಯಕ ಪಾತ್ರ  ವಹಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನ್ಯಾಯಾಂಗವನ್ನು ಸಂವಿಧಾನದ ಆತ್ಮಸಾಕ್ಷಿಯ ಪಾಲಕ ಎಂದು ಕರೆಯಲಾಗುತ್ತದೆ. ಅದರ ಸ್ವಾತಂತ್ರ್ಯವು ಪ್ರಜಾಪ್ರಭುತ್ವ ವ್ಯವಸ್ಥೆಯ ಸುಗಮ ಆಡಳಿತಕ್ಕೆ ಮುಖ್ಯವಾದುದಾಗಿದೆ” ಎಂದು ಅವರು ಹೇಳಿದರು.

ಹಾಗಾಗಿ, ಚೈತನ್ಯಶೀಲ ಪ್ರಜಾಪ್ರಭುತ್ವಕ್ಕಾಗಿ ಪ್ರಭುತ್ವದ ಎಲ್ಲ ವಿಭಾಗಗಳೂ ಅರ್ಥಪೂರ್ಣ ಸಂವಾದದಲ್ಲಿ ತೊಡಗುವುದು, ಒಂದು ಮತ್ತೊಂದರ ಸ್ವಾತಂತ್ರ್ಯವನ್ನು, ಪಾತ್ರವನ್ನು ಗೌರವಿಸುವುದು ಅತ್ಯಗತ್ಯ ಎಂದರು.

ಸಮಗ್ರವಾಗಿ ಇಡೀ ನ್ಯಾಯಾಂಗಕ್ಕೆ ಅಗತ್ಯವಾದ ಸಾಂಸ್ಥಿಕ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ ನ್ಯಾಯಾಧೀಶರ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವ ವೈಯಕ್ತಿಕ ಸ್ವಾತಂತ್ರ್ಯ ಅತಿ ಮುಖ್ಯ ಎಂದು ಅವರು ನುಡಿದರು.

Related Stories

No stories found.
Kannada Bar & Bench
kannada.barandbench.com