ನ್ಯಾಯಾಂಗದ ಸ್ವಾತಂತ್ರ್ಯ ಎಂಬುದು ಕೇವಲ ಕಾರ್ಯಾಂಗದ ಒತ್ತಡಗಳಿಂದ ಮುಕ್ತವಾಗಿರುವುದು ಮಾತ್ರವಲ್ಲದೆ, ಬಾಹ್ಯ ಶಕ್ತಿಗಳಿಂದಲೂ ಮುಕ್ತವಾಗಿರುವುದರಲ್ಲಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಒತ್ತಿ ಹೇಳಿದೆ [ಕೃಷ್ಣ ಕುಮಾರ್ ರಘುವಂಶಿ ಮತ್ತು ಮಧ್ಯಪ್ರದೇಶ ಹೈಕೋರ್ಟ್ ನಡುವಣ ಪ್ರಕರಣ].
ಪ್ರಕರಣಗಳ ಮೇಲೆ ಪ್ರಭಾವ ಬೀರಲು ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅಪರಾಧಿಗಳು ಜೈಲು ಶಿಕ್ಷೆಗೆ ಅರ್ಹರು ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ರಜಾಕಾಲೀನ ಪೀಠ ಟೀಕಿಸಿತು.
"ನ್ಯಾಯಾಂಗ ಅಧಿಕಾರಿಯ ವಿರುದ್ಧ ಆರೋಪಗಳನ್ನು ಮಾಡಿದ್ದೀರಾ? ನೀವು ಕಠಿಣ ಪಾಠ ಕಲಿಯಲು ಅರ್ಹರು. ಸ್ವತಂತ್ರ ನ್ಯಾಯಾಂಗ ಎಂಬುದು ಕಾರ್ಯಾಂಗದಿಂದ ಸ್ವಾತಂತ್ರ್ಯ ಮಾತ್ರವಲ್ಲದೆ ಬಾಹ್ಯ ಶಕ್ತಿಗಳಿಂದಲೂ ಸ್ವತಂತ್ರವಾಗಿದೆ. ನ್ಯಾಯವನ್ನು ಈ ರೀತಿ ಖರೀದಿಸಲು ಸಾಧ್ಯವಿಲ್ಲ. ಕೆಳ ನ್ಯಾಯಾಲಯಗಳ ನ್ಯಾಯಾಧೀಶರು ಪ್ರಕರಣಗಳನ್ನು ಮುಕ್ತವಾಗಿ ತೀರ್ಮಾನಿಸಬೇಕು. ಖಂಡಿತವಾಗಿ ಜೈಲು ಶಿಕ್ಷೆ ಅರ್ಹವಾಗಿದೆ. ನ್ಯಾಯಾಂಗ ಅಧಿಕಾರಿಯ ವ್ಯಕ್ತಿತ್ವವನ್ನು ಸಾಮಾಜಿಕ ಮಾಧ್ಯಮದಲ್ಲಿ ಅವರು ಹೇಗೆ ಹೀಗಳೆಯಲು ಸಾಧ್ಯ?" ಎಂದು ನ್ಯಾ. ಬೇಲಾ ಕಿಡಿಕಾರಿದರು.
ಆಗ ತಮ್ಮ ಕಕ್ಷಿದಾರರನ್ನು ಜೈಲಿಗೆ ಕಳಿಸುವ ಬದಲು ದಂಡದ ಮೊತ್ತವನ್ನು ಹೆಚ್ಚಿಸಿ ಎಂದು ಅರ್ಜಿದಾರರ ಪರ ವಕೀಲರು ಕೋರಿದರು. ಇದಕ್ಕೂ ಪೀಠ ಜಗ್ಗಲಿಲ್ಲ.
“ಇಲ್ಲವೇ ಇಲ್ಲ. ಇವರನ್ನು ಈವರೆಗೆ ಜೈಲಿಗೆ ಹಾಕಿಲ್ಲವಾದರೆ ಈಗಲಾದರೂ ಹಾಕಬೇಕು. ವಾಟ್ಸಾಪ್ ಸಂದೇಶ ಮತ್ತಿತರ ಸಂಗತಿಗಳ ಪ್ರಸರಣ ಮಾಡಿದ್ದಾರೆ. ನಾವಿಲ್ಲಿ ಇರುವುದು ನ್ಯಾಯ ಕೊಡಿಸುವುದಕ್ಕಾಗಿ ಕರುಣೆ ತೋರುವುದಕ್ಕಾಗಿ ಅಲ್ಲ! ಸಾಮಾನ್ಯ ಮನುಷ್ಯನಾದರೂ ಸರಿ ಕಠಿಣ ಪಾಠಗಳನ್ನು ಕಲಿಯಬೇಕು. ಮನವಿ ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ನುಡಿಯಿತು.
ಮಧ್ಯಪ್ರದೇಶದ ರೈಸೆನ್ ಜಿಲ್ಲೆಯಲ್ಲಿನ ಸಣ್ಣ ದೇವಾಲಯವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ವಾಟ್ಸಾಪ್ ಸಂದೇಶದ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಆತನಿಗೆ 10 ದಿನಗಳ ಸಾದಾ ಜೈಲು ಶಿಕ್ಷೆ ಹಾಗೂ ₹2,000 ದಂಡ ವಿಧಿಸಿತ್ತು ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.