ದೇಶಕ್ಕೆ ಬಲಿಷ್ಠ, ಸ್ವತಂತ್ರ ನ್ಯಾಯಾಂಗದ ಅಗತ್ಯವಿದೆ: ಪ್ರಧಾನಿ ನರೇಂದ್ರ ಮೋದಿ

ಭಾರತೀಯ ಕಾನೂನುಗಳನ್ನು ಎರಡು ರೀತಿಯಲ್ಲಿ ಪ್ರಸ್ತುತಪಡಿಸಲು ನಾನು ಕೆಲಸ ಮಾಡುವೆ- ಒಂದು ಕಾನೂನು ಪರಿಭಾಷೆಯಲ್ಲಿ ಇನ್ನೊಂದು ಜನಸಾಮಾನ್ಯರಿಗೂ ಅರ್ಥವಾಗುವಂತಹ ಭಾಷೆಯಲ್ಲಿ ಎಂದು ಅವರು ಹೇಳಿದರು.
PM Narendra Modi
PM Narendra Modi
Published on

ಭಾರತೀಯ ನ್ಯಾಯಾಂಗವು ಸದಾ ಕಾನೂನಿನ ಆಡಳಿತವನ್ನು ಎತ್ತಿಹಿಡಿದಿದ್ದು ದೇಶಕ್ಕೆ ಶಕ್ತಿಯುತ ಮತ್ತು ಸ್ವತಂತ್ರ ನ್ಯಾಯಾಂಗದ ಅಗತ್ಯವಿದೆ ಎಂದು ಪ್ರಧಾನಿ  ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ವಕೀಲರ ಪರಿಷತ್‌ ನವದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಉಪಸ್ಥಿತರಿದ್ದರು.

"ಭಾರತೀಯ ನ್ಯಾಯಾಂಗವು ಸದಾ ಕಾನೂನಿನ ಆಡಳಿತವನ್ನು ಎತ್ತಿಹಿಡಿದಿದೆ... ಭಾರತಕ್ಕೆ ಈಗ ಶಕ್ತಿಯುತ ಮತ್ತು ಸ್ವತಂತ್ರ ನ್ಯಾಯಾಂಗದ ಅಗತ್ಯವಿದೆ.. ಈ ಸಮ್ಮೇಳನದ ಸಮಯದಲ್ಲಿ ಎಲ್ಲಾ ರಾಷ್ಟ್ರಗಳು ಪರಸ್ಪರರ ಉತ್ತಮ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆಯುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.

ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಆ ದೇಶದಲ್ಲಿ ನ್ಯಾಯಾಂಗದ ಪಾತ್ರ ಬಹುಮುಖ್ಯವಾಗಿದೆ ಎಂದು ಕೂಡ ಪ್ರಧಾನಿ ತಿಳಿಸಿದರು.  ಇದೇ ವೇಳೆ ಬರೋಬ್ಬರಿ 75 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಿದ್ದಕ್ಕೆ ಸಿಜೆಐ ಚಂದ್ರಚೂಡ್‌ ಅವರನ್ನು ಪ್ರಧಾನಿ ಶ್ಲಾಘಿಸಿದರು.

ಭಾರತೀಯ ಕಾನೂನುಗಳನ್ನು ಎರಡು ರೀತಿಯಲ್ಲಿ ಪ್ರಸ್ತುತಪಡಿಸಲು ನಾನು ಕೆಲಸ ಮಾಡುವೆ- ಒಂದು ಕಾನೂನು ಪರಿಭಾಷೆಯಲ್ಲಿ ಇನ್ನೊಂದು ಜನಸಾಮಾನ್ಯರಿಗೂ ಅರ್ಥವಾಗುವಂತಹ ಭಾಷೆಯಲ್ಲಿ. ಯಾವ ಭಾಷೆಯಲ್ಲಿ ಕಾನೂನು ರಚಿತವಾಗಿರುತ್ತದೆ ಎಂಬುದು ನ್ಯಾಯದಾನದಲ್ಲಿಯೂ ಪ್ರಧಾನ ಪಾತ್ರವಹಿಸುತ್ತದೆ ಎಂದು ಅವರು ಹೇಳಿದರು.

ದತ್ತಾಂಶ ಸಂರಕ್ಷಣಾ ಕಾನೂನನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರವನ್ನು ಶ್ಲಾಘಿಸಿದರು. ಮಹಾತ್ಮ ಗಾಂಧಿ, ಲೋಕಮಾನ್ಯ ತಿಲಕ್, ವೀರ್ ಸಾವರ್ಕರ್, ಬಾಬಾ ಸಾಹೇಬ್ ಅಂಬೇಡ್ಕರ್ ರೀತಿಯ ಹೋರಾಟಗಾರರೆಲ್ಲಾ ವಕೀಲರಾಗಿದ್ದರು ಎಂದು ಅವರು ನೆನೆದರು.

Kannada Bar & Bench
kannada.barandbench.com