
ಅಮೆರಿಕದ ಸಂವಿಧಾನ ಮತ್ತು ನ್ಯಾಯಾಂಗವು ಮನುಷ್ಯ ಕೇಂದ್ರಿತವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಭಾರತದ ಸಂವಿಧಾನ ಮತ್ತು ನ್ಯಾಯಾಂಗವು ಈ ನೆಲದ ಮೇಲಿನ ಪ್ರತಿಯೊಂದು ಜೀವಿಗಳ ಬಗ್ಗೆ ಅಂತಃಕರಣ ಹೊಂದಿದೆ. ದಯೆ ಮತ್ತು ಅವುಗಳ ಅಸ್ತಿತ್ವದ ಹಕ್ಕುಗಳ ರಕ್ಷಣೆ ಮಾಡುತ್ತಾ ಮುನ್ನಡೆಯುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟರು.
ಅಮೆರಿಕದ 10 ಮಂದಿ ಸುಪ್ರೀಂ ಕೋರ್ಟ್ ಮತ್ತು ಫೆಡರಲ್ ಕೋರ್ಟ್ ನ್ಯಾಯಮೂರ್ತಿಗಳ ಜೊತೆಗೆ ಶುಕ್ರವಾರ ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್‌ನಲ್ಲಿ ನಡೆದ, ‘ಭಾರತ ಮತ್ತು ಅಮೆರಿಕ ಸಂವಿಧಾನಗಳಲ್ಲಿನ ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ಒಂದು ಇಣುಕು ನೋಟ‘ ಎಂಬ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಗಳ ಭಾಷಣವನ್ನು ಕ್ರೋಢೀಕರಿಸಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮಾತನಾಡಿದರು.
ಹದಿನೈದು ಪೈಸೆಯ ಅಂಚೆ ಕಾರ್ಡ್‌ನಲ್ಲಿ ಬರೆದ ಅಹವಾಲು ಮತ್ತು ಪತ್ರಿಕೆಯಲ್ಲಿ ಪ್ರಕಟವಾದ ಪುಟ್ಟ ಲೇಖನವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿ ಶ್ರೀಸಾಮಾನ್ಯರ ದುಃಖಕ್ಕೆ ನೆರವಾಗುವ ಅವಕಾಶವನ್ನು ಭಾರತೀಯ ಸಂವಿಧಾನ ಕಲ್ಪಿಸಿದೆ. ಆದರೆ, ಅಮೆರಿಕ ನ್ಯಾಯಾಂಗವು ದಾವೆಯ ಶಿಷ್ಟಾಚಾರಕ್ಕೆ ಒಗ್ಗಿ ಕೆಲಸ ಮಾಡುವ ಪ್ರವೃತ್ತಿ ಹೊಂದಿದೆ ಎಂದರು.
ದೇಶದ ಪರಿವರ್ತನೆಗೆ ಕಾರಣವಾದಂತಹ ತೀರ್ಪುಗಳನ್ನು ಬರೆದ ನ್ಯಾಯಮೂರ್ತಿಗಳು ಅತ್ಯಂತ ಸುರಕ್ಷಿತವಾಗಿ ಬಾಳಿ ಬದುಕುವಂತಹ ಮುಕ್ತ ವಾತಾವರಣ ಭಾರತದಲ್ಲಿದೆ. ಇದನ್ನು ಬೇರಾವ ಬೃಹತ್ ಪ್ರಜಾಪ್ರಭುತ್ವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಭಾರತದ ಸಂವಿಧಾನವು ನಾಗರಿಕ ಹಕ್ಕು, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತ್ರವೇ ಅಲ್ಲದೆ ಈ ನೆಲದಲ್ಲಿ ಹರಿವ ನದಿ, ಮರ ಗಿಡಗಳನ್ನು ಜೀವಂತ ವ್ಯಕ್ತಿಗೆ ಸಮನಾಗಿ ಪರಿಗಣಿಸಿದೆ. ಈ ಬಗ್ಗೆಗಿನ ಕಾಳಜಿಯನ್ನು ದೇಶದ ಹಲವು ಹೈಕೋರ್ಟ್‌ಗಳು ತಮ್ಮ ತೀರ್ಪುಗಳಲ್ಲಿ ಉಲ್ಲೇಖಿಸಿವೆ ಎಂದರು.
ಅಂಬೇಡ್ಕರ್ ಅವರು ನಮ್ಮ ಸಂವಿಧಾನ ರೂಪಿಸುವ ಮುನ್ನ ಅದರಲ್ಲಿ ಅಡಕಗೊಳಿಸಬಹುದಾದ ಬಹಳಷ್ಟು ಅಂಶಗಳನ್ನು ಅಮೆರಿಕದ ನೆಲದಲ್ಲೇ ಕುಳಿತು ರೂಪಿಸಿದ್ದರು ಎಂಬುದು ಅಮೆರಿಕ ಮತ್ತು ಭಾರತದ ಮಧ್ಯೆ ಇರುವ ಆರೋಗ್ಯಕರ, ಸೌಹಾರ್ದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಆದಾಗ್ಯೂ, ಭಾರತದಲ್ಲಿರುವ ವರ್ಣರಹಿತ ಮತ್ತು ಜಾತಿರಹಿತ ಸಮಾನತೆ ಬೇರೆಲ್ಲೂ ಕಾಣಸಿಗದು ಎಂದು ಪ್ರತಿಪಾದಿಸಿದರು.
ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಪ್ರಸಾದ್ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ, ಹಿಂದಿನ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರು ಇದ್ದರು.