ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೆ ಗಂಭೀರ ಹಾನಿ; ನಿಬಂಧನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಐಎಂಎ

ತಿದ್ದುಪಡಿಯ ನಂತರ 200 ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು ಶಾಲ್ಯ ತಂತ್ರ ಮತ್ತು ಶಾಲಕ್ಯ ತಂತ್ರದ ಸ್ನಾತಕೋತ್ತರ ಪದವೀಧರರ ಪ್ರಾಯೋಗಿಕ ತರಬೇತಿಯ ಭಾಗವಾಗಿವೆ. ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ ಅಭ್ಯಾಸಿಸಲು ಅವರು ಅರ್ಹರಾಗಿರುತ್ತಾರೆ.
Doctors
Doctors

ಆಯುರ್ವೇದ ನಿಬಂಧನೆ-2020 ಮೂಲಕ ಸ್ನಾತಕೋತ್ತರ ಆಯುರ್ವೇದ ಪದವೀಧರರಿಗೆ ಆಧುನಿಕ ಶಸ್ತ್ರಚಿಕಿತ್ಸಾ ಪ್ರಕ್ರಿಯೆ ನಡೆಸಲು ಅನುವು ಮಾಡಿಕೊಟ್ಟಿರುವುದನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯೆ ಬಯಸಿದೆ.

ಭಾರತೀಯ ವೈದ್ಯಕೀಯ ಕೇಂದ್ರ ಒಕ್ಕೂಟ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಬಂಧನೆಗಳು 2016 ಅನ್ನು ಭಾರತೀಯ ವೈದ್ಯಕೀಯ ಕೇಂದ್ರ ಒಕ್ಕೂಟ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ತಿದ್ದುಪಡಿ ನಿಬಂಧನೆಗಳು 2020 ಎಂದು ತಿದ್ದುಪಡಿ ಮಾಡಿರುವುದರ ಸಿಂಧುತ್ವವನ್ನು ಐಎಂಎ ಪ್ರಶ್ನಿಸಿದೆ.

ಶಾಲ್ಯ ತಂತ್ರ (ಶಸ್ತ್ರಚಿಕಿತ್ಸೆ) ಮತ್ತು ಶಾಲ್ಯಕ ತಂತ್ರ (ಇಎನ್‌ಟಿ ಸಮಸ್ಯೆಗಳು) ಸ್ನಾತಕೋತ್ತರ ಪದವಿ ಪೂರೈಸಿರುವವರು ಶಸ್ತ್ರಚಿಕಿತ್ಸೆ ನಡೆಸಲು ನಿಬಂಧನೆಗಳಲ್ಲಿಅವಕಾಶ ಮಾಡಿಕೊಡಲಾಗಿದೆ.

“ಆಕ್ಷೇಪಾರ್ಹವಾದ ನಿಬಂಧನೆಗಳು ಕಾರ್ಯನಿರ್ವಹಿಸುವಂತಾದರೆ ಅದು ದೇಶದಲ್ಲಿ ಅನಾಹುತ ಸೃಷ್ಟಿಸಲಿದೆ. ತಿಳಿವಳಿಕೆಯಿಲ್ಲದ ಮತ್ತು ನಿರಾಶಾದಾಯಕ ಸ್ಥಿತಿಯಲ್ಲಿರುವ ರೋಗಿಗಳು ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ಬಗ್ಗೆ ಅನುಭವ ಅಥವಾ ತರಬೇತಿ ಹೊಂದಿಲ್ಲದ ವ್ಯಕ್ತಿಗಳ ಮರ್ಜಿಗೆ ಸಿಲುಕಲಿದ್ದಾರೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದರಿಂದ ದೇಶಾದ್ಯಂತ ರೋಗಿಗಳಿಗೆ ಕಲ್ಪಿಸಲಾಗುತ್ತಿರುವ ವೈದ್ಯಕೀಯ ಆರೋಗ್ಯ ಮತ್ತು ಚಿಕಿತ್ಸೆಗೆ ಗಂಭೀರವಾದ ಹಾನಿ ಉಂಟು ಮಾಡಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ನಿಯಮಗಳು "ಭಾರತೀಯ ಔಷಧ ಪದ್ಧತಿ ಅಭ್ಯಾಸ ಮಾಡುವವರಿಗೆ ಆಧುನಿಕ ಔಷಧ ಪದ್ಧತಿಯನ್ನು ಅತಿಕ್ರಮಿಸಲು ಅಕ್ರಮವಾಗಿ ಅನುಮತಿ ನೀಡುವುದಲ್ಲದೆ, ಕಾನೂನುಬದ್ಧಗೊಳಿಸುತ್ತವೆ" ಎಂದು ಮನವಿಯಲ್ಲಿ ಹೇಳಲಾಗಿದೆ. ಇದನ್ನು ಜಾರಿಗೊಳಿಸಲು ಅನುಮತಿಸಿದರೆ, ಸ್ಥಾಪಿತ ವೈದ್ಯಕೀಯ ವ್ಯವಸ್ಥೆಯ ಜೊತೆಗೆ ನಾಗರಿಕರಿಗೆ ನೀಡಲಾಗುವ ವೈದ್ಯಕೀಯ ಶುಶ್ರೂಷೆ ಮತ್ತು ಚಿಕಿತ್ಸೆಗೆ ಗಂಭೀರ ಹಾನಿ ಉಂಟಾಗುತ್ತದೆ” ಎಂದು ಮನವಿಯಲ್ಲಿ ಹೇಳಲಾಗಿದೆ.

Also Read
ಪೃಷ್ಠ ʼಖಾಸಗಿ ಭಾಗವಲ್ಲʼ ಎಂಬ ಗೂಗಲ್ ವ್ಯಾಖ್ಯಾನ ಭಾರತೀಯ ಸಂದರ್ಭದಲ್ಲಿ ಸ್ವೀಕಾರಾರ್ಹವಲ್ಲ: ಮುಂಬೈ ವಿಶೇಷ ನ್ಯಾಯಾಲಯ

ಅರ್ಜಿದಾರರ ಆತಂಕಗಳು ಅತಿರೇಕದಿಂದ ಕೂಡಿವೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದು, ಈ ಸಂಬಂಧ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ಸಲ್ಲಿಸಲಿದೆ ಎಂದಿದ್ದಾರೆ.

ಆಲೋಪಥಿಗೆ ಸಂಬಂಧಿಸಿದ ಭಾರತೀಯ ವೈದ್ಯಕೀಯ ಒಕ್ಕೂಟ 1956ರ ಕಾಯಿದೆ ಅಡಿ (ಈಗ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯಿದೆ 2019) ವೈದ್ಯಕೀಯ ಎಂಬ ವ್ಯಾಖ್ಯಾನದಲ್ಲಿ ಸಂಸತ್‌ ನಿರ್ದಿಷ್ಟವಾಗಿ ಶಸ್ತ್ರಚಿಕಿತ್ಸೆ ಎಂದು ಸೇರಿಸಿದೆ. ಆಯುರ್ವೇದಕ್ಕೆ ಸಂಬಂಧಿಸಿದ ಭಾರತೀಯ ವೈದ್ಯಕೀಯ ಕೇಂದ್ರ ಒಕ್ಕೂಟ ಕಾಯಿದೆ 1970ರಲ್ಲಿ ಭಾರತೀಯ ವೈದ್ಯಕೀಯ ಎಂಬ ವ್ಯಾಖ್ಯಾನದಿಂದ ಶಸ್ತ್ರಚಿಕಿತ್ಸೆಯನ್ನು ನಿರ್ದಿಷ್ಟವಾಗಿ ಕೈಬಿಟ್ಟಿದೆ ಎಂದು ಹೇಳಲಾಗಿದೆ. “ಶಸ್ತ್ರಚಿಕಿತ್ಸೆಯು ಯಾವಾಗಲೂ ಆಧುನಿಕ ವೈದ್ಯಕೀಯದ ಭಾಗವಾಗಿದ್ದು, ಅದು ಎಂದಿಗೂ ಭಾರತೀಯ ವೈದ್ಯಕೀಯದ ಭಾಗವಲ್ಲ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com