ವ್ಯಕ್ತಿಗಳು ತಮ್ಮ ಹೆಸರು ಬದಲಿಸಿಕೊಳ್ಳಲು 21ನೇ ವಿಧಿಯಡಿ ಮೂಲಭೂತ ಹಕ್ಕು ಹೊಂದಿದ್ದಾರೆ: ಅಲಾಹಾಬಾದ್ ಹೈಕೋರ್ಟ್

ನಾಮಧೇಯ ಎಂಬುದು ಸಾರ್ವತ್ರಿಕ ಮನವೀಯ ಮೌಲ್ಯವಾಗಿದ್ದು ಯಾವುದೇ ನ್ಯಾಯವ್ಯಾಪ್ತಿಯಡಿ ಪಾಲಿಸಬೇಕಾದ ಹಕ್ಕಾಗಿದೆ ಎಂದು ನ್ಯಾಯಮೂರ್ತಿ ಅಜಯ್ ಭಾನೋಟ್ ಅವರಿದ್ದ ಏಕಸದಸ್ಯ ಪೀಠ ಹೇಳಿತು.
Allahabad High Court
Allahabad High Court
Published on

ವ್ಯಕ್ತಿಗಳು ತಮ್ಮ ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ತಮ್ಮ ಹೆಸರು ಬದಲಿಸಿಕೊಳ್ಳುವ ಮೂಲಭೂತ ಹಕ್ಕು ಪಡೆದಿದ್ದು ಸಂವಿಧಾನದ 21ನೇ ವಿಧಿಯಡಿ ಅದು ಜೀವಿಸುವ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ನಾಮಧೇಯ ಎಂಬುದು ಸಾರ್ವತ್ರಿಕ ಮನವೀಯ ಮೌಲ್ಯವಾಗಿದ್ದು ಯಾವುದೇ ನ್ಯಾಯವ್ಯಾಪ್ತಿಯಡಿ ಪಾಲಿಸಬೇಕಾದ ಹಕ್ಕಾಗಿದೆ ಎಂದು ನ್ಯಾಯಮೂರ್ತಿ ಅಜಯ್ ಭಾನೋಟ್ ಅವರಿದ್ದ ಏಕಸದಸ್ಯ ಪೀಠ ಮೇ 25 ರಂದು ನೀಡಿದ ಆದೇಶದಲ್ಲಿ ಹೇಳಿದೆ.

“ವ್ಯಕ್ತಿಯ ಹೆಸರು, ಮಾನವ ಜೀವನದೊಂದಿಗೆ ಹೊಂದಿರುವ ಆತ್ಮೀಯತೆಯನ್ನು ನಿರಾಕರಿಸಲಾಗದು. ತಮ್ಮ ಆಯ್ಕೆಯ ಹೆಸರನ್ನು ಇಟ್ಟುಕೊಳ್ಳುವ ಅಥವಾ ವೈಯಕ್ತಿಕ ಆದ್ಯತೆಯ ಪ್ರಕಾರ ಹೆಸರನ್ನು ಬದಲಾಯಿಸಿಕೊಳ್ಳುವ ಹಕ್ಕು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಹಕ್ಕಿನ ಪ್ರಬಲ ವ್ಯಾಪ್ತಿಗೆ ಒಳಪಡುತ್ತದೆ. ನಾಮಧೇಯ ಎಂಬುದು ಸಾರ್ವತ್ರಿಕ ಮನವೀಯ ಮೌಲ್ಯವಾಗಿದ್ದು ನ್ಯಾಯವ್ಯಾಪ್ತಿಯಾದ್ಯಂತ ಪಾಲಿಸಬೇಕಾದ ಹಕ್ಕಾಗಿದೆ. ಸಂವಿಧಾನದ 19(1)(ಎ) ಮತ್ತು 21ನೇ ವಿಧಿಯಡಿ ಹೆಸರನ್ನು ಇಟ್ಟುಕೊಳ್ಳುವ ಅಥವಾ ಬದಲಾಯಿಸಿಕೊಳ್ಳುವ ಹಕ್ಕನ್ನು ಪ್ರತಿಯೊಬ್ಬ ನಾಗರಿಕನಿಗೂ ನೀಡಲಾಗಿದೆ. ಆದರೆ ಇದು ಆತ್ಯಂತಿಕ ಹಕ್ಕಲ್ಲ ಮತ್ತು ಕಾನೂನು ಸೂಚಿಸಬಹುದಾದ ಸೂಕ್ತ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ.

Also Read
ನ್ಯಾಯಾಂಗದ ಸ್ವಾತಂತ್ರ್ಯ ನಾಗರಿಕರ ಮೂಲಭೂತ ಹಕ್ಕು: ನ್ಯಾ. ಹಿಮಾ ಕೊಹ್ಲಿ

ಈ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮತ್ತು ಇಂಟರ್‌ಮೀಡಿಯೆಟ್‌ ಪ್ರಮಾಣಪತ್ರಗಳಲ್ಲಿನ ತನ್ನ ಹೆಸರು ಬದಲಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಉತ್ತರ ಪ್ರದೇಶದ ಬರೇಲಿಯ ಮಾಧ್ಯಮಿಕ ಶಿಕ್ಷಾ ಪರಿಷತ್ತಿನ ಪ್ರಾದೇಶಿಕ ಕಾರ್ಯದರ್ಶಿಯ ಆದೇಶವನ್ನು ಅದು ತಳ್ಳಿಹಾಕಿದೆ. ಹೆಸರು ಬದಲಾವಣೆ ಮಾಡಿದ ಪ್ರಮಾಣಪತ್ರಗಳನ್ನು ನೀಡುವಂತೆ ಸೂಚಿಸಿದೆ.

ಶಾನವಾಜ್‌ ಎಂದು ಪ್ರಮಾಣಪತ್ರಗಳಲ್ಲಿ ದಾಖಲಾಗಿದ್ದ ತಮ್ಮ ಹೆಸರನ್ನು ಮೊಹಮದ್ ಸಮೀರ್ ರಾವ್ ಎಂದು ವ್ಯಕ್ತಿಯೊಬ್ಬರು ಬದಲಿಸಿಕೊಂಡಿದ್ದರು, ಅದು ಗೆಜೆಟ್‌ನಲ್ಲಿ ಪ್ರಕಟವಾಗಿತ್ತು. ನಂತರ ಶಾಲಾ ಪ್ರಮಾಣಪತ್ರದಲ್ಲಿಯೂ ಆ ಹೆಸರನ್ನು ದಾಖಲಿಸುವ ಸಲುವಾಗಿ ಸಲ್ಲಿಸಿದ್ದ ಅರ್ಜಿಯನ್ನು ಶಿಕ್ಷಣ ಮಂಡಳಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com