ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ವಿದೇಶ ಪ್ರಯಾಣದ ಮಾಹಿತಿ ಬಹಿರಂಗಗೊಳಿಸುವಂತೆ ನಿರ್ದೇಶಿಸಿ ಆದೇಶಿಸಿದ್ದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ಪ್ರಧಾನಿ ಮತ್ತು ಮಾಜಿ ಪ್ರಧಾನಿಯವರ ವಿದೇಶಗಳ ಭೇಟಿಗೆ ಸಂಬಂಧಿಸಿದಂತೆ ಜುಲೈ 8ರ ಆದೇಶದಲ್ಲಿ ಸಿಐಸಿಯು ಸಿಬ್ಬಂದಿ ಇಲಾಖೆಯ ನಿರ್ದೇಶನಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ), ವಾಯುಪಡೆ ಪ್ರಧಾನ ಕಚೇರಿ, ಭಾರತೀಯ ವಾಯು ಪಡೆಗೆ ವಿಶೇಷ ವಿಮಾನಗಳ ಓಡಾಟದ ಪ್ರತಿಗಳನ್ನು ಸಿದ್ಧಪಡಿಸುವಂತೆ ಸೂಚಿಸಿತ್ತು.
ಮಾಹಿತಿ ಕೋರಿರುವುದರಲ್ಲಿ ಪ್ರಧಾನ ಮಂತ್ರಿಯ ಭದ್ರತಾ ವಿಚಾರಗಳು ಮತ್ತು ಅಧಿಕೃತ ದಾಖಲೆಗಳು ಸೇರಿರುವುದರಿಂದ ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ ಎಂದು ಹೈಕೋರ್ಟ್‌ನಲ್ಲಿ ಸಿಪಿಐಒ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ. ರಕ್ಷಣೆ ಮತ್ತು ಭದ್ರತೆಯ ವಿಚಾರದ ಹಿನ್ನೆಲೆಯಲ್ಲಿ ಅದನ್ನು ಸಾರ್ವಜನಿಕಗೊಳಿಸಲಾಗದು ಎಂದು ಸಿಪಿಐಒ ಮನವಿಯಲ್ಲಿ ಹೇಳಿದೆ.
“ಮಹತ್ವದ ವ್ಯಕ್ತಿಯನ್ನು ಸುತ್ತುವರಿದಿರುವವರ ಹೆಸರು, ವಿದೇಶ ಪ್ರಯಾಣದ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ರಕ್ಷಣೆ ನೀಡುವ ವಿಶೇಷ ಭದ್ರತಾ ಪಡೆಯ (ಎಸ್‌ಪಿಜಿ) ಸದಸ್ಯರ ಹೆಸರುಗಳನ್ನು ಬಹಿರಂಗಗೊಳಿಸುವಂತೆ ಕೋರಲಾಗಿದೆ. ಇದನ್ನು ಬಹಿರಂಗಪಡಿಸಿದರೆ ಅದು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭದ್ರತೆ, ಕಾರ್ಯತಂತ್ರ, ವೈಜ್ಞಾನಿಕ ಮತ್ತು ಆರ್ಥಿಕ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಬಹುದು” ಎಂದು ಹೇಳಲಾಗಿದೆ.
ಎಸ್‌ಪಿಜಿ ಹುಟ್ಟುಹಾಕಿದ ಇತಿಹಾಸವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರು 1984ರಲ್ಲಿ ಗುಂಡಿಟ್ಟು ಕೊಲೆ ಮಾಡಿದ ಬಳಿಕ ಅತಿಗಣ್ಯರ ಭದ್ರತೆಗಾಗಿ ಎಸ್‌ಪಿಜಿ ಹುಟ್ಟುಹಾಕಲಾಯಿತು ಎಂದು ವಿವರಿಸಲಾಗಿದೆ.
ಈ ಕುರಿತಾದ ಮಾಹಿತಿಯು ಸಿಪಿಐಒ ಬಳಿ ವಿಶ್ವಾಸಾರ್ಹತೆಯ ಕಾರಣದಿಂದಾಗಿ ಲಭ್ಯವಿದ್ದು ಅದನ್ನು ಕಾಯಿದೆಯ ಸೆಕ್ಷನ್ 8(1)(g)ರ ಅಡಿ ಬಹಿರಂಗಪಡಿಸುವುದಕ್ಕೆ ವಿನಾಯಿತಿ ನೀಡಲಾಗಿದೆ. ಈ ಮಾಹಿತಿಯನ್ನು ಬಹಿರಂಗಗೊಳಿಸುವುದರಿಂದ ಯಾವುದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಈಡೇರುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ. ಈ ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ಸಿಐಸಿ ಆದೇಶವನ್ನು ವಜಾಗೊಳಿಸುವಂತೆ ಕೋರಿರುವ ಸಿಪಿಐಒ, ಮಾಹಿತಿಯನ್ನು ಕೋರಿರುವ ಮನವಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪ್ರಸ್ತುತಪಡಿಸುವಂತೆ ಕೋರಿದೆ. ಕೇಂದ್ರ ಸರ್ಕಾರದ ವಕೀಲ ರಾಹುಲ್ ಶರ್ಮಾ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಭಾರತೀಯ ನೌಕಾದಳದ ಮಾಜಿ ಕಮಾಂಡರ್ ಲೋಕೇಶ್ ಬಾತ್ರಾ ಎನ್ನುವವರು ಈ ಇಬ್ಬರು ಪ್ರಧಾನಿಗಳ ವಿದೇಶ ಭೇಟಿಯ ವಿವರಗಳನ್ನು ಮಾಹಿತಿ ಹಕ್ಕಿನ ಅಡಿ ಕೋರಿದ್ದರು. 2013ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮಾಹಿತಿಯನ್ನು ಕೋರಲಾಗಿತ್ತು. ಜೂನ್ 2018ರಲ್ಲಿ ಬಾತ್ರಾ ಮಾಹಿತಿ ಕೋರಿ ಅರ್ಜಿ ದಾಖಲಿಸಿದ್ದರು.