ಸಮೂಹ ವಸತಿ ಯೋಜನೆಗಳಿಗೆ ಸಂಬಂಧಿಸಿದ ದಿವಾಳಿತನ ಪ್ರಕ್ರಿಯೆಯಲ್ಲಿ ತನ್ನನ್ನು ಆರ್ಥಿಕ ಸಾಲದಾತ (ಫೈನಾನ್ಷಿಯಲ್ ಕ್ರೆಡಿಟರ್) ಎಂದು ಘೋಷಿಸುವಂತೆ ʼನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರʼ (ನೋಯ್ಡಾ) ಮಾಡಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. [ನೋಯ್ಡಾ ಮತ್ತು ಆನಂದ್ ಸೋನಭದ್ರ ನಡುವಣ ಪ್ರಕರಣ].
ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆಯ ಈಗಿನ ನಿಯಮಾವಳಿ ಪ್ರಕಾರ ನೋಯ್ಡಾವನ್ನು ಆರ್ಥಿಕ ಸಾಲದಾತ ಎಂದು ಪರಿಗಣಿಸಲಾಗದು. ಬದಲಿಗೆ ಅದನ್ನು ಕಾರ್ಯಾಚರಣಾ ಸಾಲದಾತ ಎಂದು ಮಾತ್ರ ಕರೆಯಬಹುದು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ತಿಳಿಸಿತು.
ಐಬಿಸಿಯಡಿ ನೋಯ್ಡಾ ಕಾರ್ಪೊರೇಟ್ ಸಾಲಗಾರನ ಕಾರ್ಯಾಚರಣಾ ಸಾಲದಾತನಾಗಿದ್ದು ಅದನ್ನು ಆರ್ಥಿಕ ಸಾಲದಾತನೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಈ ಹಿಂದೆ ತೀರ್ಪು ನೀಡಿತ್ತು. ಇದನ್ನು ʼನೋಯ್ಡಾʼ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಸಮೂಹ ವಸತಿ ಯೋಜನೆಗಳ ದಿವಾಳಿತನ ಪ್ರಕ್ರಿಯೆಯಲ್ಲಿ ₹ 1,473 ಕೋಟಿಗಳಷ್ಟು ಮೊತ್ತದ ಬಾಕಿಗೆ ಸಂಬಂಧಿಸಿದಂತೆ ಆರಂಭದಲ್ಲಿ ಐಬಿಸಿಯಡಿ ಮೇಲ್ಮನವಿದಾರ ನೋಯ್ಡಾ ಕಾರ್ಯಾಚರಣೆಯ ಸಾಲದಾತನಾಗಿ ಬಿ ಫಾರ್ಮ್ ಸಲ್ಲಿಸಿತ್ತು. ನಂತರ ಆರ್ಥಿಕ ಸಾಲಗಾರನಾಗಿ ಸಿ ಫಾರ್ಮ್ ಸಲ್ಲಿಸಿತು.
ಅರ್ಜಿಯ ವಿಚಾರಣೆ ನಡೆಸಿದ್ದ ಎನ್‌ಸಿಎಲ್‌ಟಿ, ಭಾರತೀಯ ಲೆಕ್ಕಪತ್ರ ಮಾನದಂಡಗಳ ಪ್ರಕಾರ ಯಾವುದೇ ಹಣಕಾಸಿನ ಗುತ್ತಿಗೆ ಇಲ್ಲ ಮತ್ತು ಯಾವುದೇ ಹಣಕಾಸಿನ ಸಾಲವಿಲ್ಲ ಎಂದಿತ್ತು. ಈ ತೀರ್ಪನ್ನು ಎನ್‌ಸಿಎಲ್‌ಎಟಿ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ನೋಯ್ಡಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.