ಕನ್ನಡ ಭಾಷೆಯ ಅವಹೇಳನ: ನಟ ಕಮಲ್‌ ಹಾಸನ್‌ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದ ಬೆಂಗಳೂರು ನ್ಯಾಯಾಲಯ

ಕನ್ನಡ ಭಾಷೆಯ ಮೇಲೆ ಭಾಷಾಶಾಸ್ತ್ರಜ್ಞರ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಯಾವುದೇ ಹೇಳಿಕೆ ಅಥವಾ ಟೀಕೆಗಳನ್ನು ಪೋಸ್ಟ್ ಮಾಡುವುದು, ನೀಡುವುದು, ಬರೆಯುವುದು, ಪ್ರಕಟಿಸುವುದು ಅಥವಾ ವಿತರಿಸುವುದನ್ನು ನಿರ್ಬಂಧಿಸಲಾಗಿದೆ.
Kamal Haasan and Bengaluru City civil court
Kamal Haasan and Bengaluru City civil court
Published on

ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನಟ ಕಮಲ ಹಾಸನ್ ವಿರುದ್ಧ ಬೆಂಗಳೂರು ಸತ್ರ ನ್ಯಾಯಾಲಯವು ಶುಕ್ರವಾರ ತಾತ್ಕಾಲಿಕ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆಯನ್ನು 31ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎನ್‌ ಆರ್‌ ಮಧು ಅವರು ನಡೆಸಿದರು.

“ಕನ್ನಡ ಭಾಷೆಯ ಮೇಲೆ ಭಾಷಾಶಾಸ್ತ್ರಜ್ಞರ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಯಾವುದೇ ಹೇಳಿಕೆ ಅಥವಾ ಟೀಕೆಗಳನ್ನು ಪೋಸ್ಟ್ ಮಾಡುವುದು, ನೀಡುವುದು, ಬರೆಯುವುದು, ಪ್ರಕಟಿಸುವುದು ಅಥವಾ ವಿತರಿಸುವುದನ್ನು ನಿರ್ಬಂಧಿಸಲಾಗಿದೆ” ಎಂದು ಆದೇಶಿಸಿರುವ ನ್ಯಾಯಾಲಯವು ಪ್ರತಿವಾದಿ ಕಮಲ್‌ಗೆ ಸಮನ್ಸ್‌ ಜಾರಿಗೊಳಿಸಲು ಆದೇಶಿಸಿದೆ.

“ಪ್ರತಿವಾದಿ ಅಥವಾ ಅವರ ಏಜೆಂಟರು, ನಿಯೋಜಕರು, ಪ್ರತಿನಿಧಿಗಳು ಅಥವಾ ಅವರ ಅಡಿಯಲ್ಲಿ ಅಥವಾ ಅವರ ಮೂಲಕ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಗಳಿಗೆ ಈ ತಾತ್ಕಾಲಿಕ ನಿರ್ಬಂಧಕಾಜ್ಞೆ ಅನ್ವಯವಾಗುತ್ತದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಜೋಶಿ ಅವರ ಪರವಾಗಿ ವಕೀಲ ಚಿಂತನ್‌ ಚಿನ್ನಪ್ಪ ವಾದಿಸಿದರು. ವಿಚಾರಣೆಯನ್ನು ಆಗಸ್ಟ್‌ 30ಕ್ಕೆ ಮುಂದೂಡಲಾಗಿದೆ.

ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಥಗ್‌ ಲೈಫ್‌ ಚಿತ್ರದ ಆಡಿಯೊ ಬಿಡುಗಡೆ ವೇಳೆ ನಟ ಕಮಲ್‌ ಹಾಸನ್‌ ಹೇಳಿಕೆ ನೀಡಿದ್ದರು. ಇದರಿಂದ ಥಗ್‌ ಲೈಫ್‌ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಕನ್ನಡಪರ ಸಂಘಟನೆಗಳು ಮತ್ತು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ವಿರೋಧ ವ್ಯಕ್ತಪಡಿಸಿದ್ದವು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿ ಚಿತ್ರ ಬಿಡುಗಡೆಗೆ ಅನುವು ಮಾಡಿತ್ತು.

Kannada Bar & Bench
kannada.barandbench.com