
ವ್ಯಾಪಕ ಭ್ರಷ್ಟಾಚಾರ ತಡೆಯಲು ಫೋನ್ ಕರೆ ಕದ್ದಾಲಿಸಿದರೆ ಅದು ಕಾನೂನು ಸಮ್ಮತ ಸಂಗತಿಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಆಕಾಶ್ ದೀಪ್ ಚೌಹಾಣ್ ಮತ್ತು ಸಿಬಿಐ ಇನ್ನಿತರರ ನಡುವಣ ಪ್ರಕರಣ] .
ಎಲ್ಲಾ ಭ್ರಷ್ಟಾಚಾರ ಆರೋಪಗಳು ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವುದಿಲ್ಲವಾದರೂ ಭ್ರಷ್ಟಾಚಾರದಲ್ಲಿ ವ್ಯಾಪಕ ಪ್ರಮಾಣದ ಹಣ ಬಳಕೆಯಾಗಿದ್ದಾಗ ಕರೆ ಕದ್ದಾಲಿಸುವುದು 1885ರ ಟೆಲಿಗ್ರಾಫ್ ಕಾಯಿದೆಯಡಿ ಸಾರ್ವಜನಿಕ ಸುರಕ್ಷತೆಯ ವ್ಯಾಪ್ತಿಗೆ ಒಳಪಡುವ ವಿಚಾರವಾಗುತ್ತದೆ ಎಂದು ನ್ಯಾಯಮೂರ್ತಿ ಅಮಿತ್ ಮಹಾಜನ್ ಹೇಳಿದರು.
"ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳು ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಸಾಮಾನ್ಯೀಕರಿಸಲಾಗದಿದ್ದರೂ, ಇಲ್ಲಿರುವ (ಪ್ರಕರಣದಲ್ಲಿರುವ) ಆರೋಪಗಳು ಕ್ಷುಲ್ಲಕ ಯೋಜನೆಗೆ ಸಂಬಂಧಿಸಿಲ್ಲ, ಬದಲಿಗೆ ಪ್ರಭಾವ ಬಳಸಿ ಪಡೆದ ₹2149.93 ಕೋಟಿ ಮೊತ್ತದ ಯೋಜನೆಯೊಂದಕ್ಕೆ ಸಂಬಂಧಿಸಿದ್ದಾಗಿವೆ. ಈ ನ್ಯಾಯಾಲಯದ ಅಭಿಪ್ರಾಯದಲ್ಲಿ, ಅಪರಾಧದ ಆರ್ಥಿಕ ಪ್ರಮಾಣ ಸಾರ್ವಜನಿಕ ಸುರಕ್ಷತೆಯ ವ್ಯಾಪ್ತಿಗೆ ಬರುವ ವಿಚಾರವಾಗುತ್ತದೆ” ಎಂದು ಪೀಠ ವಿವರಿಸಿದೆ.
ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆಕಾಶ್ ದೀಪ್ ಚೌಹಾಣ್ ಎಂಬವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಗಳ ಪ್ರಕಾರ, ಚೌಹಾಣ್ ಅವರು ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್‌ಜಿ ಪಲ್ಲೊಂಜಿ ಕಂಪೆನಿಯಿಂದ ಉಪ-ಗುತ್ತಿಗೆ ಪಡೆಯಲು ಪ್ರಯತ್ನಿಸಿದ ಕಂಪನಿಯೊಂದಿಗೆ ಶಾಮೀಲಾಗಿದ್ದರು. ಪಲ್ಲೋಂಜಿ ಕಂಪೆನಿಗೆ ಪ್ರಗತಿ ಮೈದಾನದಲ್ಲಿರುವ ದೆಹಲಿಯ ಏಕೀಕೃತ ವಸ್ತುಪ್ರದರ್ಶನ ಮತ್ತು ಸಮ್ಮೇಳನ ಕೇಂದ್ರದ ಪುನರಾಭಿವೃದ್ಧಿ ಕಾಮಗಾರಿ ವಹಿಸಲಾಗಿತ್ತು. ಆರೋಪಿಗಳ ನಡುವೆ ನಡೆದ ಫೋನ್ ಸಂಭಾಷಣೆಯನ್ನು ಸಿಬಿಐ ಕದ್ದಾಲಿಸಿತ್ತು. ಪಿತೂರಿ ನಡೆದಿರುವುದು ಸಾಬೀತಾಗಿತ್ತು.
ವಾದ ಆಲಿಸಿದ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿದು ಚೌಹಾಣ್ ಅವರ ಮನವಿ ತಿರಸ್ಕರಿಸಿತು.
[ತೀರ್ಪಿನ ಪ್ರತಿ]