ಉ. ಪ್ರದೇಶದ ಮತಾಂತರ ವಿರೋಧಿ ಕಾಯಿದೆ ಅಂತರ್ಧರ್ಮೀಯ ವಿವಾಹ ಮತ್ತು ಸಹ ಜೀವನ ನಿಷೇಧಿಸಿಲ್ಲ: ಅಲಾಹಾಬಾದ್‌ ಹೈಕೋರ್ಟ್‌

ಹಿಂದೂ ಮುಸ್ಲಿಂ ಜೋಡಿಗಳ ಸಹಜೀವನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಒಟ್ಟು 12 ಅರ್ಜಿಗಳ ವಿಚಾರಣೆ ನಡೆಸಿತು.
Allahabad High Court , Anti- Conversion Law
Allahabad High Court , Anti- Conversion Law
Published on

ಉ. ಪ್ರದೇಶದ ಮತಾಂತರ ವಿರೋಧಿ ಕಾಯಿದೆ- 2021 ಅಂತರ್ಧರ್ಮೀಯ ವಿವಾಹವನ್ನು ನಿಷೇಧಿಸಿಲ್ಲ ಅಲ್ಲದೆ ಅಂತಹ ಜೋಡಿಗಳು ಸಹಜೀವನ ನಡೆಸುವುದನ್ನು ತಡೆಯುವುದಿಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ಮಹತ್ವದ ತೀರ್ಪು ನೀಡಿದೆ.

ನ್ಯಾಯಾಲಯಗಳು ಇಂತಹ ಜೋಡಿಗಳನ್ನು ಹಿಂದೂ ಮತ್ತು ಮುಸ್ಲಿಂ ಎಂದು ನೋಡುವುದಿಲ್ಲ; ಬದಲಾಗಿ ತಮ್ಮ ಸ್ವಂತ ಇಚ್ಛೆ ಮತ್ತು ಆಯ್ಕೆಯಿಂದ ಬಹುಕಾಲದಿಂದ ಶಾಂತಿಯುತವಾಗಿ ಹಾಗೂ ಸಂತೋಷದಿಂದ ಒಟ್ಟಿಗೆ ವಾಸಿಸುತ್ತಿರುವ ಇಬ್ಬರು ಪ್ರಾಪ್ತವಯಸ್ಕ ವ್ಯಕ್ತಿಗಳೆಂದು ಪರಿಗಣಿಸುತ್ತವೆ ಎಂದು ನ್ಯಾ. ವಿವೇಕ್‌ ಕುಮಾರ್‌ ಸಿಂಗ್‌ ತಿಳಿಸಿದರು.

Also Read
ಡಿಜಿಟಲ್‌ ಅರೆಸ್ಟ್‌: ಬ್ಯಾಂಕ್‌ಗಳ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ

“ಧರ್ಮ ಏನೇ ಆಗಿದ್ದರೂ, ತಮಗೆ ಇಷ್ಟವಾದ ವ್ಯಕ್ತಿಯೊಂದಿಗೆ ವಾಸಿಸುವ ಹಕ್ಕು ಜೀವಿತ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಅಂಗವಾಗಿದೆ. ವೈಯಕ್ತಿಕ ಸಂಬಂಧಗಳಲ್ಲಿ ಹಸ್ತಕ್ಷೇಪ ಮಾಡುವುದು, ಆ ಇಬ್ಬರು ವ್ಯಕ್ತಿಗಳ ಆಯ್ಕೆ ಸ್ವಾತಂತ್ರ್ಯದ ಹಕ್ಕಿನ ಮೇಲೆ ನಡೆಸುವ ಗಂಭೀರ ದೌರ್ಜನ್ಯವಾಗುತ್ತದೆ. ಕಾನೂನು ಸಲಿಂಗಿ ಇಬ್ಬರು ವ್ಯಕ್ತಿಗಳಿಗೇ ಶಾಂತಿಯುತವಾಗಿ ಒಟ್ಟಿಗೆ ವಾಸಿಸಲು ಅವಕಾಶ ನೀಡುತ್ತಿರುವಾಗ, ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿರುವ ಪ್ರಾಪ್ತವಯಸ್ಕ ವಿರುದ್ಧ ಲಿಂಗದ ವ್ಯಕ್ತಿಯತ್ತ ಆಕರ್ಷಿತರಾಗುವವರ ಸಂಬಂಧಕ್ಕೆ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಪ್ರಭುತ್ವ ವಿರೋಧ ಏಕೆ ವ್ಯಕ್ತಪಡಿಸಬೇಕು ಎಂಬುದನ್ನು ಈ ನ್ಯಾಯಾಲಯ ಅರ್ಥಮಾಡಿಕೊಳ್ಳಲು ವಿಫಲವಾಗಿದೆ,” ಎಂದು ಪೀಠ ತಿಳಿಸಿದೆ.

ಮತಾಂತರ ಕಾಯಿದೆ ಅನ್ವಯಿಸಬೇಕಿದ್ದರೆ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಬಲಾತ್ಕಾರ, ವಂಚನೆ, ಪ್ರಲೋಭನೆ, ಅನ್ಯಾಯದ ಪ್ರಭಾವ ಅಥವಾ ಮದುವೆಯ ಮೂಲಕ ಪರಿವರ್ತನೆ ನಡೆದಿರಬೇಕಾಗುತ್ತದೆ ಎಂದ ಅದು ಕೇವಲ ಅಂತರ್ಧರ್ಮ ಸಂಬಂಧದಲ್ಲಿರುವುದರಿಂದ ಕಾಯ್ದೆ ಉಲ್ಲಂಘನೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿತು.

ಅಲ್ಲದೆ ಅರ್ಜಿದಾರರ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಮತಾಂತರದ ಆರೋಪ ದಾಖಲಾಗಿಲ್ಲ. ಪ್ರಾಪ್ತವಯಸ್ಕ ವ್ಯಕ್ತಿಯು ತನ್ನ ಇಷ್ಟದ ವ್ಯಕ್ತಿಯೊಂದಿಗೆ ವಾಸಿಸುವುದು ಸಂವಿಧಾನದ 21ನೇ ವಿಧಿಯಡಿ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಾಗಿದೆ ಎಂದು ಅದು ತಿಳಿಸಿತು .

14 ಮತ್ತು 15ನೇ ವಿಧಿಗಳ ಪ್ರಕಾರ ಧರ್ಮ, ಜಾತಿ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಭೇದಭಾವ ಮಾಡುವಂತಿಲ್ಲ. ಒಂದೇ ಧರ್ಮದ ಇಬ್ಬರು ಸಹ ಜೀವನ ಸಂಬಂಧದಲ್ಲಿ ಇರಬಹುದಾದರೆ, ವಿಭಿನ್ನ ಧರ್ಮದ ಇಬ್ಬರೂ ಸಹ ಜೀವನ ನಡೆಸಬಹುದು. ಕಾನೂನು ಎಲ್ಲರಿಗೂ ಸಮಾನವಾದದು ಎಂದು ಅದು ಹೇಳಿತು.

ಪ್ರಾಪ್ತವಯಸ್ಕರ ಸ್ವತಂತ್ರ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದ ನ್ಯಾಯಾಲಯ ಅಂತರ್ಧರ್ಮೀಯರ ಡುವೆ ಸಂಭಂಧ ಇದೆ ಎಂದ ಮಾತ್ರಕ್ಕೆ ಅವರ ಮೂಲಭೂತ ಹಕ್ಕು ಕಳೆದುಹೋಗುವುದಿಲ್ಲ. ವ್ಯಕ್ತಿಯ ಆಯ್ಕೆಯನ್ನು ನಿರ್ಲಕ್ಷಿಸುವುದು ‘ಏಕತೆಯಲ್ಲಿ ವೈವಿಧ್ಯತೆ’ ಎಂಬ ಸಂವಿಧಾನಾತ್ಮಕ ತತ್ವಕ್ಕೆ ಮಾರಕವಾದುದು ಎಂದಿತು.

Also Read
ದಿ. ಸ್ಟ್ಯಾನ್‌ಸ್ವಾಮಿ ಬುಡಕಟ್ಟು ಹೋರಾಟಗಾರ ಎನ್ನಲಾಗುತ್ತದೆ; ವಾಸ್ತವದಲ್ಲಿ ಅವರು ಯುಎಪಿಎ ಆರೋಪಿ: ಮದ್ರಾಸ್ ಹೈಕೋರ್ಟ್

ಪ್ರತಿಯೊಬ್ಬ ನಾಗರಿಕನ ಜೀವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದು ಪ್ರಭುತ್ವದ ಕರ್ತವ್ಯವಾಗಿದೆ ಎಂಬುದಾಗಿ ನ್ಯಾಯಾಲಯ ತಿಳಿಸಿತು. ಅಲ್ಲದೆ ಜೋಡಿಗಳಿಗೆ ಬೆದರಿಕೆ ಎದುರಾದರೆ ಪೊಲೀಸರ ನೆರವು ಕೋರಬಹುದು. ಪೊಲೀಸ್ ಅಧಿಕಾರಿಗಳು ವಿಚಾರಣೆ ಮಾಡಿ ಅಗತ್ಯವಿದ್ದರೆ ಕಾನೂನು ಪ್ರಕಾರ ರಕ್ಷಣೆ ನೀಡಬೇಕು ಎಂದು ಅದು ತಿಳಿಸಿತು. ಯಾರಾದರೂ ಬಲವಂತವಾಗಿ ಅಥವಾ ವಂಚನೆಯ ಮೂಲಕ ಮತಾಂತರ ನಡೆಸಿದ್ದರೆ ಆಗ ದೂರು ದಾಖಲಿಸಬಹುದು ಎಂದು ಪೀಠ ನುಡಿಯಿತು.  

ನ್ಯಾಯಾಲಯ ಒಟ್ಟು 12 ಅರ್ಜಿಗಳ ವಿಚಾರಣೆ ನಡೆಸಿತು. ಅವುಗಳಲ್ಲಿ ಏಳು ಪ್ರಕರಣಗಳಲ್ಲಿ ಮುಸ್ಲಿಂ ಮಹಿಳೆಯರು ಹಿಂದೂ ಪುರುಷರೊಂದಿಗೆ ವಾಸಿಸುತ್ತಿದ್ದು, ಐದು ಪ್ರಕರಣಗಳಲ್ಲಿ ಹಿಂದೂ ಮಹಿಳೆಯರು ಮುಸ್ಲಿಂ ಪುರುಷರೊಂದಿಗೆ ವಾಸಿಸುತ್ತಿದ್ದರು.

[ತೀರ್ಪಿನ ಪ್ರತಿ]

Attachment
PDF
Noori_And_Another_v_State_of_UP_and_4_Others
Preview
Kannada Bar & Bench
kannada.barandbench.com