ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ವಿರುದ್ಧ ತಾರತಮ್ಯವನ್ನು ತಡೆಗಟ್ಟಲು ಮಹಿಳೆಯರನ್ನು ಏಕರೂಪದಲ್ಲಿಡುವುದು ಮತ್ತು ಲಿಂಗಾಧಾರಿತವಾಗಿ ಪುರುಷರು ಹಾಗೂ ಮಹಿಳೆಯರಿಗೆ ಪಾತ್ರಗಳನ್ನು ನೀಡುವುದು ಬದಲಾಗಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ತಿಳಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ನಡೆದ ʼ ಬ್ರೇಕಿಂಗ್ ದಿ ಬಯಾಸ್- ಎ ಕಾನ್‌ಸ್ಟಿಟ್ಯೂಷನಲ್, ಲೀಗಲ್ ಅಂಡ್ ಪಾಲಿಸಿ ಲೆನ್ಸ್ʼ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ಪ್ರಸ್ತುತ ಸರ್ವೋಚ್ಚ ನ್ಯಾಯಾಲಯ ಮತ್ತು ಇತರ ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಐತಿಹಾಸಿಕವಾಗಿ ಅತ್ಯಧಿಕ ಸಂಖ್ಯೆಯ ಮಹಿಳಾ ನ್ಯಾಯಮೂರ್ತಿಗಳು ಇದ್ದರೂ ಅವರ ಶೇಕಡಾವಾರು ಪ್ರಮಾಣ ಬಹುತೇಕ ನಗಣ್ಯವಾಗಿದೆ" ಎಂದು ಸುಪ್ರೀಂ ಕೋರ್ಟ್‌ನ 8ನೇ ಮಹಿಳಾ ನ್ಯಾಯಮೂರ್ತಿಯಾಗಿರುವ ಅವರು ತಿಳಿಸಿದರು.
“ಮನೆಯಲ್ಲಿ ಮಹಿಳೆಯರ ಮೇಲಿನ ತಾರತಮ್ಯ ಮತ್ತು ದೌರ್ಜನ್ಯ ತಡೆಯಲು ನಮ್ಮಲ್ಲಿ ಕಾನೂನು ಜಾರಿಯಲ್ಲಿದೆ. ಆದರೆ ಮೊದಲಿನಿಂದಲೂ ಹೆಣ್ಣು ಮಗುವನ್ನು ಒಪ್ಪಿಕೊಳ್ಳಲು ಮತ್ತು ಹೆಣ್ಣು ಮಗುವಿಗೆ ಶಿಕ್ಷಣ ನೀಡಲು ಪೋಷಕರನ್ನು ಜಾಗೃತಗೊಳಿಸಬೇಕು. ಮಹಿಳೆಗೆ ಅಧಿಕಾರದಲ್ಲಿದ್ದರೆ ಇಂತಹ ಅನೇಕ ಸಮಸ್ಯೆಗಳು ಹೊರಟುಹೋಗುತ್ತವೆ. ಮಹಿಳೆಯರನ್ನು ಏಕರೂಪದಲ್ಲಿಡುವುದು ಮತ್ತು ಲಿಂಗಾಧಾರಿತವಾಗಿ ಪುರುಷರು ಹಾಗೂ ಮಹಿಳೆಯರಿಗೆ ಪಾತ್ರಗಳನ್ನು ನೀಡುವುದು- ಇಂತಹ ಮನಸ್ಥಿತಿ ಬದಲಾಗಬೇಕು. ಅಲ್ಲಿಯವರೆಗೆ ಮಾತ್ರ ಕಾನೂನು ತಲುಪಬಲ್ಲದು” ಎಂದು ಅವರು ತಿಳಿಸಿದರು.
ಕುಟುಂಬದ ಮೂರನೇ ಹೆಣ್ಣುಮಗುವಾಗಿ, ಕಿರಿಯ ವಕೀಲಳಾಗಿ ನಾಲ್ಕು ವರ್ಷಗಳ ಕಾಲ ಮದ್ರಾಸ್ ಹೈಕೋರ್ಟ್‌ನ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ತರತಮನ್ನು ನಿಭಾಯಿಸಿದ ತಮ್ಮ ವೈಯಕ್ತಿಕ ಅನುಭವವನ್ನು ನ್ಯಾ. ಇಂದಿರಾ ಈ ಸಂದರ್ಭದಲ್ಲಿ ವಿವರಿಸಿದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಹಿರಿಯ ನ್ಯಾಯವಾದಿ ಗೀತಾ ಲೂತ್ರಾ, ವಕೀಲರಾದ ಕರುಣಾ ನಂದಿ, ತನ್ವಿ ದುಬೆ, ಮಹಾರಾಷ್ಟ್ರ ಸರ್ಕಾರದ ಸಚಿವೆ ಯಶೋಮಿ ಥಾಕೂರ್ ಮತ್ತಿತರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.