ಪ್ರತಿಭಟನೆ ಹತ್ತಿಕ್ಕಲು ಇಂಟರ್ನೆಟ್‌ ನಿರ್ಬಂಧ; ಪ್ರಚೋದನಾಕಾರಿ ಕಾರ್ಯಕ್ರಮಕ್ಕೆ ಮೌನವೇಕೆ? ಕೇಂದ್ರಕ್ಕೆ ಸುಪ್ರೀಂ ಚಾಟಿ

ಗಲಭೆ ನಿಯಂತ್ರಿಸಲು ದೆಹಲಿ ಪೊಲೀಸರು ಹೇಗೆ ಗಣರಾಜ್ಯೋತ್ಸವದ ದಿನ ಇಂಟರ್‌ನೆಟ್‌ ನಿರ್ಬಂಧಿಸಿದ್ದರೋ ಅದೇ ರೀತಿ ಟಿವಿಗಳಲ್ಲಿ ಪ್ರಚೋದನಕಾರಿ ಅಂಶಗಳ ಪ್ರಸಾರ ತಡೆಯಲು ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಸಿಜೆಐ ಹೇಳಿದ್ದಾರೆ.
CJI SA Bobde, Farmers Protest
CJI SA Bobde, Farmers Protest

ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆಯು ದೊಂಬಿಯಾಗಿ ಪರಿವರ್ತನೆಯಾಗಿದ್ದನ್ನು ನಿಯಂತ್ರಿಸಲು ಪ್ರತಿಭಟನಾ ಸ್ಥಳ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂಟರ್‌ನೆಟ್‌ ನಿರ್ಬಂಧಿಸಿದ್ದ ಕೇಂದ್ರ ಸರ್ಕಾರವು ಜನರನ್ನು ಕೆರಳಿಸುವ ಕಾರ್ಯಕ್ರಮ ಮತ್ತು ಮಾಹಿತಿ ಪ್ರಸಾರ ಮಾಡುವ ಟಿವಿ ಚಾನೆಲ್‌ಗಳ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಯುತ್ತಿದೆ ಎಂದು ಗುರುವಾರ ಸುಪ್ರೀಂ ಕೋರ್ಟ್‌ ಕಟುವಾಗಿ ಹೇಳಿದೆ.

ಟಿವಿಯಲ್ಲಿನ ಕಾರ್ಯಗಳು ಜನರನ್ನು ಪ್ರಚೋದಿಸುವುದು ಅಥವಾ ಸಮುದಾಯದ ಮೇಲೆ ಪರಿಣಾಮ ಬೀರುವುದನ್ನು ಮಾಡಿದರೂ ಸಹ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

“ಕೆಲವು ಕಾರ್ಯಕ್ರಮಗಳು ಸಮುದಾಯವನ್ನು ಪ್ರಚೋದಿಸುತ್ತವೆ ಅಥವಾ ಅದರ ಮೇಲೆ ಪರಿಣಾಮ ಬೀರುತ್ತವೆ. ದೆಹಲಿಗೆ ರೈತರು ಪ್ರವೇಶ ಮಾಡಿದ್ದರಿಂದ ನಿನ್ನೆ ನೀವು ಇಂಟರ್‌ನೆಟ್‌ ಮತ್ತು ಮೊಬೈಲ್‌ ಸೇವೆ ನಿರ್ಬಂಧಿಸಿದಿರಿ. ನಾನು ಇಲ್ಲಿ ವಿವಾದಾತೀತ ಪದ ಬಳಸುತ್ತಿದ್ದೇನೆ. ನೀವು ಇಂಟರ್‌ನೆಟ್‌, ಮೊಬೈಲ್‌ ನಿರ್ಬಂಧಿಸಿದಿರಿ. ಈ ತರಹದ ಸಮಸ್ಯೆಗಳು ಎಲ್ಲಿ ಬೇಕಾದರೂ ಉದ್ಭವಿಸಬಹುದು. ಅದರೆ, ನಿನ್ನೆ ಟಿವಿಯಲ್ಲಿ ಏನಾಯಿತು ಎನ್ನುವುದು ನನಗೆ ತಿಳಿದಿಲ್ಲ” ಎಂದು ಸಿಜೆಐ ಬೊಬ್ಡೆ ಇಡೀ ಘಟನೆಗಳ ಕುರಿತು ಅವಲೋಕಿಸಿದರು.

ಕಳೆದ ವರ್ಷದ ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಸಮಾವೇಶದ ಕುರಿತು ಮಾಧ್ಯಮಗಳು ವ್ಯಾಪಕವಾಗಿ ಕೋಮು ದ್ವೇಷದ ವರದಿಗಾರಿಕೆ ಮಾಡಿದನ್ನು ಪ್ರಶ್ನಿಸಿ ಜಾಮಿಯಾತ್ ಉಲೇಮಾ ಇ ಹಿಂದ್‌ ಸಲ್ಲಿಸಿದ್ದ ಮನವಿಯನ್ನು ಪೀಠ ನಡೆಸಿತು. ನಿಜಾಮುದ್ದೀನ್‌ ಸಮಾವೇಶದಿಂದ ಕೋವಿಡ್‌ ವ್ಯಾಪಿಸಿತ್ತು ಎಂದು ಮಾಧ್ಯಮಗಳು ಆರೋಪಿಸಿದ್ದವು.

ತಬ್ಲೀಘಿ ಜಮಾತ್‌ ಸಂಘಟನೆಯು ಕಳೆದ ಮಾರ್ಚ್‌ನಲ್ಲಿ ದೆಹಲಿಯಲ್ಲಿರುವ ನಿಜಾಮುದ್ದೀನ್‌ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಹಲವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಕಳೆದ ಮಾರ್ಚ್‌ 30 ರಂದು ಆ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಮಾರ್ಚ್‌ 13 ರಿಂದ 24ರ ಅವಧಿಯಲ್ಲಿ ಸುಮಾರು 16,500 ಮಂದಿ ತಬ್ಲೀಘಿ ಜಮಾತ್‌ ಪ್ರಧಾನ ಕಚೇರಿ ನಿಜಾಮುದ್ದೀನ್‌ಗೆ ಭೇಟಿ ನೀಡಿದ್ದರು.

Also Read
ಮಾಧ್ಯಮಗಳ ವಿರುದ್ಧದ ದೂರುಗಳನ್ನು ನಿರ್ಣಯಿಸಲು ಮಾಧ್ಯಮ ನ್ಯಾಯಮಂಡಳಿ ಸ್ಥಾಪನೆ: ಕೇಂದ್ರದ ಪ್ರತಿಕ್ರಿಯೆ ಬಯಸಿದ ಸುಪ್ರೀಂ

“ನ್ಯಾಯಯೋಚಿತ ಮತ್ತು ಸತ್ಯ ಸಂಗತಿಗಳನ್ನು ಒಳಗೊಂಡ ವರದಿಗಾರಿಕೆ ನಮ್ಮ ಸಹಮತವಿದೆ. ಆದರೆ, ಇತರರು ಪ್ರತಿಭಟನೆಯಲ್ಲಿ ನಿರತವಾಗುವಂತೆ ಮಾಡಿದರೆ ಅದು ಸಮಸ್ಯೆ. ಪೊಲೀಸರಿಗೆ ಲಾಠಿ ನೀಡುವುದರಷ್ಟೇ ಇದು ಸಹ ಮುಖ್ಯ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇದು ಪ್ರಮುಖ ಭಾಗವಾಗಿದೆ” ಎಂದು ಪ್ರಚೋದನಾಕಾರಿ ಸುದ್ದಿಗಳನ್ನು ನಿಯಂತ್ರಿಸುವ ಅಗತ್ಯತೆಯ ಬಗ್ಗೆ ಪೀಠ ಹೇಳಿತು.

ಪ್ರಚೋದನಾಕಾರಿ ಅಂಶಗಳನ್ನು ಬಿತ್ತಿರಿಸುತ್ತಿರುವುದರ ವಿಚಾರದಲ್ಲಿ ಕೇಂದ್ರ ಸರ್ಕಾರವು ಏಕೆ ಕಣ್ಣು ಮುಚ್ಚಿ ಕುಳಿತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಪೀಠವು ಮುಂದುವರೆದು, “ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮಕೈಗೊಳ್ಳುವುದು ಎಷ್ಟು ಮುಖ್ಯವೋ ಅದೇ ರೀತಿ ಕೆಲವು ಸುದ್ದಿಗಳ ಮೇಲೆ ನಿಯಂತ್ರಣ ಸಾಧಿಸುವುದೂ ಅಷ್ಟೇ ಮುಖ್ಯ" ಎಂದಿತು. "ನೀವು ಇದಕ್ಕೆ ಕುರುಡಾಗಿರುವುದು ಏಕೆ ಎಂಬುದೇ ನಮಗೆ ತಿಳಿಯುತ್ತಿಲ್ಲ. ನಿಮ್ಮನ್ನು ನೋಯಿಸುವ ಉದ್ದೇಶವಿಲ್ಲ. ಆದರೆ, ನೀವು ಅದನ್ನು (ಪ್ರಚೋದನಕಾರಿ ಸುದ್ದಿಗಳನ್ನು) ನಿಯಂತ್ರಿಸಲು ಏನೂ ಮಾಡುತ್ತಿಲ್ಲ,” ಎಂದು ತೀವ್ರ ಅಸಮಾಧಾನ ಹೊರಹಾಕಿತು.

ಪ್ರಕರಣದ ವಿಚಾರಣೆಯು ಮೂರು ವಾರಗಳ ಬಳಿಕ ಮುಂದುವರೆಯಲಿದೆ.

Related Stories

No stories found.
Kannada Bar & Bench
kannada.barandbench.com