ಆರೋಪಿಯನ್ನು ಖುಲಾಸೆಗೊಳಿಸಿದ ಪ್ರತಿಯೊಂದು ಪ್ರಕರಣದಲ್ಲಿಯೂ ತನಿಖಾಧಿಕಾರಿ ವಿರುದ್ಧ ಐಪಿಸಿ ಸೆಕ್ಷನ್ 211 ಎ ವಿಧಿಯಡಿ ಸುಳ್ಳು ಆರೋಪ ಹೊರಿಸಿದ ಪ್ರಕರಣ ದಾಖಲಿಸಿದರೆ ಅದರಿಂದ ತನಿಖಾಧಿಕಾರಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. (ಎ ರಾಧಿಕಾ ಮತ್ತು ವಿಲ್ಸನ್ ಸುಂದರಂ ನಡುವಣ ಪ್ರಕರಣ).
ದೂರುದಾರನನ್ನು ಖುಲಾಸೆಗೊಳಿಸಿದ ನಂತರ ಐಪಿಸಿ ಸೆಕ್ಷನ್ 211ರ ಅಡಿ ಅಪರಾಧ ಎಸಗಿದ್ದಾರೆ ಎಂದು ಸಿಬಿಸಿಐಡಿ ಅಧಿಕಾರಿಯೊಬ್ಬರ ವಿರುದ್ಧ ಸಮನ್ಸ್ ನೀಡಲಾಗಿತ್ತು. ಸಮನ್ಸ್ ರದ್ದುಪಡಿಸಿದ ನ್ಯಾಯಾಲಯ ಈ ಅವಲೋಕನಗಳನ್ನು ಮಾಡಿದೆ.
ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು “ಆರೋಪಿಗಳನ್ನು ಖುಲಾಸೆಗೊಳಿಸಿದ ಪ್ರತಿಯೊಂದು ಪ್ರಕರಣದಲ್ಲಿ ತನಿಖಾಧಿಕಾರಿ ಇಂತಹ ವಿಚಾರಣೆಗೆ ಒಡ್ಡಿಕೊಳ್ಳುತ್ತಿದ್ದರೆ ಅದರಿಂದ ತನಿಖೆ ನಡೆಸುವ ಅಧಿಕಾರಿಗಳ ಸ್ವಾತಂತ್ರ್ಯದ ಮೇಲೆ ನೇರ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಈ ಕಾರಣದಿಂದಾಗಿ ಸಂತೋಖ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸುಳ್ಳು ಆರೋಪ ಎಂಬುದನ್ನು ಕ್ರಿಮಿನಲ್ ಪ್ರಕ್ರಿಯೆ ಆರಂಭಿಸುವ ಮತ್ತು ಅಂತಿಮ ವರದಿಯ ನಂತರ ಮಾಡಲಾದ ಸುಳ್ಳು ಆರೋಪಗಳಿಗೆ ಎಂದಿಗೂ ಸಂಬಂಧವಿರದ ʼಕ್ರಿಮಿನಲ್ ಪ್ರಕ್ರಿಯೆಯ ನಿಗದಿಗೊಳಿಸುವಿಕೆʼ ಎಂಬುದರ ಜೊತೆಗೆ ಓದಿಕೊಳ್ಳಬೇಕು ಎಂದು ಹೇಳಿದೆ. ನೋಯಿಸುವ ಉದ್ದೇಶದಿಂದ ಸುಳ್ಳು ಆರೋಪ ಮಾಡಿದ ಪ್ರಕರಣವು ಕ್ರಿಮಿನಲ್ ವಿಚಾರಣೆ ಆರಂಭಿಸಿದ ವ್ಯಕ್ತಿ ವಿರುದ್ಧ ಮಾತ್ರ ಇರುತ್ತದೆ” ಎಂದು ತಿಳಿಸಿದ್ದಾರೆ.
“ಸುಳ್ಳು ಆರೋಪಕ್ಕೆ ಸಂಬಂಧಿಸಿದಂತೆ 211ನೇ ಸೆಕ್ಷನ್ ಅಡಿ ಬಳಸಲಾದ ಭಾಷೆ ಕ್ರಿಮಿನಲ್ ಕಾನೂನಿಗೆ ಚಾಲನೆ ನೀಡಿದ ಮೂಲ ಅಥವಾ ಆರಂಭಿಕ ಆರೋಪಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಅಂತೆಯೇ ಕ್ರಿಮಿನಲ್ ಕಾನೂನನ್ನು ಜಾರಿಗೊಳಿಸಿದ್ದು ಅರ್ಜಿದಾರನಲ್ಲ” ಎಂದು ನ್ಯಾಯಾಲಯ ಹೇಳಿದೆ. ಪ್ರಸ್ತುತ ಪ್ರಕರಣದಲ್ಲಿ ದುರುದ್ದೇಶಪೂರಿತ ಕಾನೂನು ಕ್ರಮಕ್ಕೆ ಹಾನಿ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಸಿವಿಲ್ ಮೊಕದ್ದಮೆ ಹೂಡಬಹುದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಆದರೆ ಸಿಆರ್‌ಪಿಸಿ ಸೆಕ್ಷನ್ 340ನ್ನು ತನಿಖಾಧಿಕಾರಿಯ ವಿರುದ್ಧ ಬಳಸಲಾಗದು” ಎಂದು ನ್ಯಾಯಾಲಯ ಹೇಳಿದ್ದು ಈ ಕಾರಣಕ್ಕೆ ಸಿಬಿಸಿಐಡಿ ಅಧಿಕಾರಿಯ ವಿರುದ್ಧ ಹೊರಡಿಸಲಾಗಿದ್ದ ಸಮನ್ಸ್ ಅನ್ನು ಅದು ರದ್ದುಪಡಿಸಿದೆ.
[ಆದೇಶವನ್ನು ಇಲ್ಲಿ ಓದಿ]