ರಾಮ ಮಂದಿರ ಕುರಿತ ಜಾಗೃತಿ ಮೆರವಣಿಗೆಯನ್ನು ಸೂಕ್ತ ಕೋವಿಡ್ ನಿರ್ಬಂಧಗಳೊಂದಿಗೆ ನಡೆಸಬಹುದು: ಮದ್ರಾಸ್‌ ಹೈಕೋರ್ಟ್‌

ಅಯೋಧ್ಯೆಯ ರಾಮ ಮಂದಿರದ ಕುರಿತು ಜಾಗೃತಿ ಮೂಡಿಸುವುದಕ್ಕೆ ಪೊಲೀಸರು ಅನುಮತಿ ನಿರಕಾರಿಸಿದ್ದನ್ನು ಪ್ರಶ್ನಿಸಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಂಚಾಲಕರು‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
Ayodhya Ram Mandir
Ayodhya Ram Mandir
Published on

ತಮಿಳುನಾಡಿನ ಮಧುರೈ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದ ಸಹಾಯಕ ಪೊಲೀಸ್‌ ಆಯುಕ್ತರ (ಎಸಿಪಿ) ತೀರ್ಮಾನವನ್ನು ಈಚೆಗೆ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ರದ್ದುಪಡಿಸಿದೆ (ಎನ್‌ ಸೆಲ್ವಕುಮಾರ್‌ ವರ್ಸಸ್‌ ಪೊಲೀಸ್‌ ಆಯುಕ್ತ).

ರಾಮ ದೇವಾಲಯದ ಕುರಿತು ಜಾಗೃತಿ ಮೂಡಿಸುವ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಜಿಲ್ಲಾ ಸಂಚಾಲಕ ಅನುಮತಿ ಕೋರಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ ಅವರ ವ್ಯಾನ್‌ಗೆ ಅನುಮತಿ ನಿರಾಕರಿಸಲಾಗಿತ್ತು. ಕೆಲವು ಕೋವಿಡ್‌ ನಿರ್ಬಂಧಗಳನ್ನು ವಿಧಿಸಿ ಜಾಗೃತಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಹುದಾಗಿತ್ತು ಎಂದು ನ್ಯಾಯಮೂರ್ತಿ ಆರ್‌ ಹೇಮಲತಾ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.

“ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಶ್ರೀರಾಮ ಹಿಂದೂಗಳ ಹೃದಯಕ್ಕೆ ಹತ್ತಿರ ಎಂದು ಹೇಳುವುದು ಪ್ರಸ್ತುತವಾಗಿದೆ. ಮಾಸ್ಕ್‌ ಧರಿಸುವುದು ಮತ್ತು ಸ್ಯಾನಿಟೈಸರ್‌ ಬಳಕೆ ಮಾಡುವ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಚಿತ್ರಮಂದಿರ ಮತ್ತು ಇತರೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಜನರಿಗೆ ಅವಕಾಶ ಮಾಡಿಕೊಟ್ಟಿರುವಾಗ ಸದರಿ ಪ್ರಕರಣದಲ್ಲಿ ಎಸಿಪಿ ತೆಗೆದುಕೊಂಡಿರುವ ನಿಲುವನ್ನು ಊರ್ಜಿತಗೊಳಿಸಲು ಯಾವುದೇ ತೆರನಾದ ಸಕಾರಣಗಳಿಲ್ಲ” ಎಂದು ಪೀಠ ಹೇಳಿದೆ.

“… ಸಂಬಂಧಿತ ಅಧಿಕಾರಿಯು ಅರ್ಜಿದಾರರ ವಾಹನದ ಓಡಾಟವನ್ನು ನಿಯಂತ್ರಿಸಬಾರದಿತ್ತು. ಇದು ಅತಿರೇಕದ ಕ್ರಮವಾಗಿ ಕಾಣಿಸುತ್ತಿದೆ. ಕೆಲವು ನಿರ್ಬಂಧಗಳನ್ನು ವಿಧಿಸಿ ಜಾಗೃತಿ ಮೂಡಿಸಲು ಅನುಮತಿ ನೀಡಬಹುದಿತ್ತು” ಎಂದು ನ್ಯಾಯಾಲಯ ಹೇಳಿದೆ.

Also Read
[ಬ್ರೇಕಿಂಗ್] ಬಾಬರಿ ಮಸೀದಿ ಧ್ವಂಸ ಪ್ರಕರಣ: ಎಲ್ಲ 32 ಆರೋಪಿತರನ್ನೂ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅಯೋಧ್ಯಾದಲ್ಲಿ ಶ್ರೀರಾಮನ ದೇವಾಲಯ ನಿರ್ಮಿಸುವುದಕ್ಕಾಗಿ ಟ್ರಸ್ಟ್‌ ಸ್ಥಾಪಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ವಿವರಿಸಿದ್ದರು.

ಮದುರೈನ ಎಲ್ಲಾ ವಾರ್ಡ್‌ಗಳು ತನ್ನ ವ್ಯಾಪ್ತಿಗೆ ಬರದೇ ಇರುವುದರಿಂದ ಅವುಗಳಲ್ಲಿ ಜಾಗೃತಿ ನಡೆಸಲು ಅನುಮತಿ ನೀಡುವ ಅಧಿಕಾರ ತನಗೆ ಇಲ್ಲ ಎಂಬ ಎಸಿಪಿ ವಾದವನ್ನು ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಸಮರ್ಥಿಸಿದರು. ಎರಡನೇ ಪ್ರತಿವಾದಿಗೆ ಆದೇಶ ಹೊರಡಿಸಲು ಅಧಿಕಾರವಿಲ್ಲ ಎಂಬುದನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಎಂದು ಪೀಠ ಹೇಳಿತು.

ಒಂದೊಮ್ಮೆ ಎಸಿಪಿಗೆ ಅನುಮತಿ ನೀಡುವ ಅಧಿಕಾರ ಇಲ್ಲ ಎಂದಾದರೆ ಅವರು ಅರ್ಜಿದಾರರ ಮನವಿಯನ್ನು ವಜಾಗೊಳಿಸುವ ಬದಲು ಅದನ್ನು ಪೊಲೀಸ್‌ ಆಯುಕ್ತರಿಗೆ ವರ್ಗಾಯಿಸಬೇಕಿತ್ತು. ಅಲ್ಲದೇ, ಮದುರೈ ಸುತ್ತಮುತ್ತಲು ವ್ಯಾನ್‌ ಮೂಲಕ ಜಾಗೃತಿ ನಡೆಸಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಹೇಗೆ ಸಂಭವಿಸುತ್ತದೆ ಎಂಬುದನ್ನು ಪೊಲೀಸರು ವಿವರಿಸಿಲ್ಲ ಎಂದಿರುವ ನ್ಯಾಯಾಲಯವು ಎಸಿಪಿಯ ಆದೇಶವನ್ನು ವಜಾಗೊಳಿಸಿತು. ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಸೂಕ್ತವಾದ ಆದೇಶ ಹೊರಡಿಸವಂತೆ ಮದುರೈ ನಗರದ ಪೊಲೀಸ್‌ ಆಯುಕ್ತರಿಗೆ ನ್ಯಾಯಮೂರ್ತಿ ಹೇಮಲತಾ ನಿರ್ದೇಶಿಸಿದ್ದಾರೆ.

Kannada Bar & Bench
kannada.barandbench.com