ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ಅವರ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಎಂ ಎಸ್ ಧೋನಿ ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. 2013ರ ಐಪಿಎಲ್ ಋತುವಿಗೆ ಸಂಬಂಧಿಸಿದ ಹಗರಣ ಇದಾಗಿದೆ. [ಮಹೇಂದ್ರ ಸಿಂಗ್ ಧೋನಿ ಮತ್ತು ಜಿ ಸಂಪತ್ ಕುಮಾರ್ ಐಪಿಎಸ್ ನಡುವಣ ಪ್ರಕರಣ].
ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಲಿಖಿತ ಸಲ್ಲಿಕೆಗಳಲ್ಲಿ ಅಧಿಕಾರಿ ಕೆಲ ಮಾನಹಾನಿಕರ ಟೀಕೆ ಮಾಡಿದ್ದು ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಧೋನಿ ದೂರಿದ್ದಾರೆ. ಪ್ರಕರಣವನ್ನು ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತಾದರೂ ಸಮಯಾವಕಾಶದ ಕೊರತೆಯಿಂದಾಗಿ ಅದನ್ನು ಕೈಗೆತ್ತಿಕೊಳ್ಳಲಿಲ್ಲ.
2013 ರಲ್ಲಿ ಐಪಿಎಲ್ ಪಂದ್ಯಗಳ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಧೋನಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ದೋಷಪೂರಿತ ಹೇಳಿಕೆ ಹಾಗೂ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ ಎಂದು ಆಕ್ಷೇಪಿಸಿ ಸಂಪತ್ ಸೇರಿದಂತೆ, ಒಂದು ಟಿವಿ ಚಾನೆಲ್ ಕಂಪೆನಿ ಹಾಗೂ ಇನ್ನಿತರರ ವಿರುದ್ಧ ಧೋನಿ 2021ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆರಂಭದಲ್ಲಿ ಐಪಿಎಲ್ ಹಗರಣದ ತನಿಖೆ ನಡೆಸಿದ್ದ ಸಂಪತ್ ಅವರೂ ಸೇರಿದಂತೆ ಪ್ರತಿವಾದಿಗಳು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಿಸಬೇಕು ಎಂದು ಕೋರಿದ್ದರು. ಮಾನನಷ್ಟ ಉಂಟುಮಾಡುವಂತಹ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಆಗ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಪ್ರಸ್ತುತ, ನ್ಯಾಯಾಂಗ ನಿಂದನೆ ಮೊಕದ್ದಮೆ ನಡೆಸುವ ಸಲುವಾಗಿ ಸಂಪತ್ ವಿರುದ್ಧ ಕ್ರಮ ಕೈಗೊಳ್ಳಲು ಈ ವರ್ಷ ಜುಲೈನಲ್ಲಿ ತಮಿಳುನಾಡು ಅಡ್ವೊಕೇಟ್ ಜನರಲ್ ಅವರ ಒಪ್ಪಿಗೆ ಪಡೆದಿರುವುದಾಗಿ ಧೋನಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಸಂಪತ್ ಅವರಿಗೆ ಸಮನ್ಸ್ ಜಾರಿ ಮಾಡುವಂತೆ ಅವರು ಹೈಕೋರ್ಟನ್ನು ಕೋರಿದ್ದಾರೆ.
ಇದೇ ವೇಳೆ ಮಾನನಷ್ಟ ಮೊಕದ್ದಮೆ ರದ್ದುಪಡಿಸುವಂತೆ ಕೋರಿ ಈ ಹಿಂದೆ ಸಂಪತ್ ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ಲಿಖಿತ ಹೇಳಿಕೆಗಳನ್ನು ನೀಡಿದ್ದ ಅವರು ತಮ್ಮ ಬಾಯಿ ಮುಚ್ಚಿಸಲು ಧೋನಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮಿಳುನಾಡು ನಿವಾಸಿಯಲ್ಲದಿದ್ದರೂ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಹೂಡಲು ನಿರ್ಧರಿಸಿದ್ದು ಅವರು ಹಾಗೂ ಇನ್ನಿತರರು ಪಿತೂರಿ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕುವ ಯತ್ನ ಮಾಡಿದ್ದಾರೆ ಎಂದು ದೂರಿದ್ದರು.
ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಮತ್ತಿತರರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಯ ವಿವರ ಒಳಗೊಂಡಿರುವ ಮುದ್ಗಲ್ ಸಮಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸೂಚಿಸಿದ್ದ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಕೂಡ ಅವರು ಪ್ರಶ್ನಿಸಿದ್ದರು.