
ಐಪಿಎಲ್ ಟೂರ್ನಿಯ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಕ್ರಿಕೆಟ್ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿ, ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.
ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನೀಡಿದ್ದ ದೂರು ಆಧರಿಸಿ ಬೆಳ್ಳಂದೂರು ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಯಮಲೂರಿನ ಓಂ ಶಕ್ತಿ ರೆಸಿಡೆನ್ಸಿ ನಿವಾಸಿ ಸೋಮರಪು ವಂಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ರಜಾಕಾಲೀನ ಏಕಸದಸ್ಯ ಪೀಠ ಪುರಸ್ಕರಿಸಿದೆ.
“₹1,200ಕ್ಕೆ ಐಪಿಎಲ್ ಪಂದ್ಯದ ಟಿಕೆಟ್ ಖರೀದಿಸಿ ಅದನ್ನು ₹6 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಸಂಬಂಧ ಬಿಎನ್‌ಎಸ್ ಸೆಕ್ಷನ್ 318(4)ರ ಅಡಿ ಪ್ರಕರಣ ದಾಖಲಿಸಲಾಗಿದೆ. ಕ್ರಿಕೆಟ್ ಪಂದ್ಯದ ಟಿಕೆಟ್ ಮಾರಾಟದ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗಾಗಿ, ಅರ್ಜಿದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ. ಹೀಗಾಗಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿರುವ ಕಾನೂನು ಪ್ರಕ್ರಿಯೆ ರದ್ದುಪಡಿಸಲಾಗಿದೆ” ಎಂದು ಪೀಠ ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು “ನಿರ್ಬಂಧಿತ ಕಾರಣದಿಂದ ಪಂದ್ಯ ವೀಕ್ಷಿಸಲು ಹೋಗಲಾಗದಿದ್ದ ಕಾರಣಕ್ಕೆ ಅರ್ಜಿದಾರರು ಟಿಕೆಟ್ ಮಾರಾಟ ಮಾಡಿದ್ದಾರೆ. ಕ್ರಿಕೆಟ್ ಪಂದ್ಯದ ಟಿಕೆಟ್ ಮರು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ. ಈ ಸಂಬಂಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪಿದೆ” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಸಿಸಿಬಿಯ ವಿಶೇಷ ಸ್ಕ್ವಾಡ್ ಸಿಬ್ಬಂದಿ ಜಿ ಟಿ ಶ್ರೀನಿವಾಸ್ ಅವರು ಪ್ರಕರಣದ ಕುರಿತು ದೂರು ದಾಖಲಿಸಿದ್ದರು. 2025ರ ಮೇ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯ ಆಯೋಜನೆಯಾಗಿತ್ತು. ಯಮಲೂರಿನಲ್ಲಿ ಸನ್ ಸಿಟಿ ಅಪಾರ್ಟ್‌ಮೆಂಟ್ ಬಳಿಯ ರಸ್ತೆಯಲ್ಲಿ ತೆಲಂಗಾಣ ಮೂಲದ ಸೋಮರಪು ವಂಶಿ ಎಂಬ ಯುವಕ ಮತ್ತು ಆತನ ಸ್ನೇಹಿತ ಮಂಜು ನಡೆದುಕೊಂಡು ಬರುತ್ತಿದ್ದರು. ಆತನನ್ನು ತಪಾಸಣೆ ನಡೆಸಿದಾಗ 10 ಐಪಿಎಲ್ ಟಿಕೆಟ್‌ಗಳು ದೊರೆತಿದ್ದವು ಎಂದು ಬೆಳ್ಳಂದೂರು ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ಸೋಮರಪು ವಂಶಿಯನ್ನು ಟಿಕೆಟ್ ಕುರಿತು ವಿಚಾರಿಸಿದಾಗ ಪ್ರತಿ ಟಿಕೆಟ್ ಮುಖಬೆಲೆ ತಲಾ ₹1,200 ಆಗಿದೆ. ಅವುಗಳನ್ನು ಮತ್ತೊಬ್ಬರಿಂದ ತಲಾ ₹5,000 ನೀಡಿ ಖರೀದಿಸಿದ್ದೇನೆ. ಆ ಪ್ರತಿ ಟಿಕೆಟ್ ಅನ್ನು ತಾನು ಮತ್ತೊಬ್ಬರಿಗೆ ₹6,000ಕ್ಕೆ ಮಾರಾಟ ಮಾಡುವುದಾಗಿ ವಂಶಿ ತಿಳಿಸಿದ್ದಾನೆ. ಇದರಿಂದ ಆರೋಪಿ ವಂಶಿಯು ಕ್ರಿಕೆಟ್ ಪಂದ್ಯಾವಳಿಯ ಟಿಕೆಟ್‌ಗಳನ್ನು ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅಧಿಕ ಬೆಲೆಗೆ ಖರೀದಿಸಿ, ಕಾನೂನುಬಾಹಿರವಾಗಿ ಸಾರ್ವಜನಿಕರಿಗೆ ದುಬಾರಿಗೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ. ಆ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದರು.