ಎಪಿಪಿ ನೇಮಕಾತಿಯಲ್ಲಿ ಅಕ್ರಮ: ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಲು ಹೈಕೋರ್ಟ್‌ ಆದೇಶ

ನೇಮಕಾತಿಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆ ಮಾಡಲು ತನಿಖಾ ಸಮಿತಿ ರಚಿಸಲು ಗೃಹ ಇಲಾಖೆಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Karnataka High Court
Karnataka High Court
Published on

ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ನ್ಯಾಯಾಲಯ ಆದೇಶ ನೀಡಿ ಐದು ವರ್ಷ ಕಳೆದರೂ ಆ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಕರ್ನಾಟಕ ಹೈಕೋರ್ಟ್ ಗುರುವಾರ ಪರಿವರ್ತಿಸಿದೆ.

ಬೆಂಗಳೂರಿನ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಈ ಅರ್ಜಿಯಲ್ಲಿ ಅರ್ಜಿದಾರರು ವೈಯುಕ್ತಿಕ ಪರಿಹಾರ ಕೇಳುತ್ತಿಲ್ಲ. ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯವು ಸಾರ್ವಜನಿಕ ಮಹತ್ವದ್ದಾಗಿದೆ. ಆದ್ದರಿಂದ, ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿ ಸಂಬಂಧಪಟ್ಟ ಪೀಠದ ಮುಂದೆ ಇರಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿತು. ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ ವಾದಿಸಿದರು.

ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಬೇಕು. ಅಕ್ರಮ ನೇಮಕಾತಿಗೆ ಕಾರಣರಾದ ಅಧಿಕಾರಿಗಳಿಂದ 10 ಲಕ್ಷ ರೂಪಾಯಿ ವಸೂಲಿ ಮಾಡಬೇಕು. 6 ತಿಂಗಳಲ್ಲಿ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು 2020ರ ಫೆಬ್ರವರಿ 7ರಂದು ಹೈಕೋರ್ಟ್ ಆದೇಶ ನೀಡಿತ್ತು. ಐದು ವರ್ಷ ಕಳೆದರೂ ನ್ಯಾಯಾಲಯದ ಆದೇಶ ಪಾಲಿಸಲಾಗಿಲ್ಲ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿದೆ.

Also Read
ಎಪಿಪಿ ನೇಮಕಾತಿ ಹಗರಣ: ಪ್ರಮುಖ ಆರೋಪಿಗೆ ಮಹತ್ವದ ಹುದ್ದೆ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ನ್ಯಾಯಾಲಯದ ಆದೇಶವನ್ನು ಪಾಲಿಸಿ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ನೇಮಕಾತಿಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆ ಮಾಡಲು ತನಿಖಾ ಸಮಿತಿ ರಚಿಸಲು ಗೃಹ ಇಲಾಖೆಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. 

Kannada Bar & Bench
kannada.barandbench.com