'ಎಸ್ಐಆರ್ ಪ್ರಕ್ರಿಯೆ ಕೈಗೊಳ್ಳುವ ಇಸಿಐ ಅಧಿಕಾರ ಅನಿಯಂತ್ರಿತವೇ? ನ್ಯಾಯಾಂಗ ಪರಿಷ್ಕರಣೆಗೆ ಒಳಪಡದೇ?' ಸುಪ್ರೀಂ ಪ್ರಶ್ನೆ

ವಿವಿಧ ರಾಜ್ಯಗಳ ಮತದಾರರ ಪಟ್ಟಿಗಳ ವಿಶೇಷ ಆಮೂಲಾಗ್ರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ತೆಗೆದುಕೊಂಡ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅನೇಕ ಅರ್ಜಿಗಳನ್ನು ನ್ಯಾಯಾಲಯ ಆಲಿಸಿತು.
SIR of electoral rolls
SIR of electoral rolls
Published on

ಮತದಾರರ ಪಟ್ಟಿಗಳ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸುವ ಅಧಿಕಾರ ಸಂಪೂರ್ಣ ನಿಯಂತ್ರಣರಹಿತವಾದುದ್ದೇ? ಅದು ನ್ಯಾಯಾಂಗ ಪರಿಷ್ಕರಣೆಗೆ ಹೊರತಾದದ್ದೇ? ಎಂದು ಭಾರತೀಯ ಚುನಾವಣಾ ಆಯೋಗವನ್ನು ಸುಪ್ರೀಂ ಕೋರ್ಟ್‌ ಬುಧವಾರ ಪ್ರಶ್ನಿಸಿದೆ.

ಮತದಾರರ ಪಟ್ಟಿಗಳ ಪರಿಷ್ಕರಣೆ ನಾಗರಿಕರ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ಸಿಜೆಐ ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿತು.

Also Read
ಚುನಾವಣಾ ಆಯೋಗ ಪೌರತ್ವ ಪರೀಕ್ಷೆ ನಡೆಸುವಂತಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಎಸ್ಐಆರ್‌ಗೆ ಅರ್ಜಿದಾರರ ವಿರೋಧ

“ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಯ ಮೇಲೆ ವಿಶೇಷ ಆಮೂಲಾಗ್ರ ಪರಿಷ್ಕರಣೆ ಪರಿಣಾಮ ಬೀರಬಹುದು. ಹೀಗಾಗಿ ನಾಗರಿಕ ಹಕ್ಕುಗಳ ಮೇಲೆ ಪರಿಣಾಮ ಬೀರುವ ಪ್ರಕ್ರಿಯೆ ಇದಾಗಿರುವಾಗ, ಉಪ ಸೆಕ್ಷನ್‌ (2)ರಲ್ಲಿ ನಿರ್ದಿಷ್ಟಪಡಿಸಿರುವ ವಿಧಾನಕ್ಕೆ ಅನುಗುಣವಾಗಿ ಪ್ರಕ್ರಿಯೆ ನಡೆಸಬಾರದೆ?” ಎಂದು ಸಿಜೆಐ ಪ್ರಶ್ನಿಸಿದರು.

ಮತದಾರರ ಪಟ್ಟಿಗಳ ತಯಾರಿ ಹಾಗೂ ಪರಿಷ್ಕರಣೆ ನಿಗದಿತ ವಿಧಾನದಲ್ಲಿ ನಡೆಯಬೇಕು ಎಂದು ಹೇಳುವ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್‌ 21(2)ನ್ನು ನ್ಯಾಯಾಲಯ ಪ್ರಸ್ತಾಪಿಸಿತು.

ಯಾವುದೇ ಅಧಿಕಾರವೂ ಸಂಪೂರ್ಣವಾಗಿ ನಿಯಂತ್ರಣರಹಿತವಾಗಿರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಾಗ್ಚಿ ಅವರು ಸ್ಪಷ್ಟಪಡಿಸಿದರು. ಸೆಕ್ಷನ್‌ 21ರ ಪ್ರಕಾರ, ಆಮೂಲಾಗ್ರ ಪರಿಷ್ಕರಣೆ ನಡೆಸುವ ವೇಳೆ ನಿಯಮಗಳು ಹೊಸದಾಗಿ ರೂಪುಗೊಳ್ಳಬೇಕು ಹಾಗೂ ನಿಯಮ 4ರಿಂದ 13ರವರೆಗೆ ಅನ್ವಯವಾಗಬೇಕು ಎಂದು ಅವರು ಹೇಳಿದರು. ಹೀಗಾಗಿ ಆಯೋಗಕ್ಕೆ ಇರುವ ಅಧಿಕಾರವನ್ನು ನ್ಯಾಯಾಂಗ ಪರಿಷ್ಕರಣೆಗೆ ಮೀರಿದದ್ದೆಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಕಾನೂನಿನ ಪ್ರಕಾರ ಆಯೋಗಕ್ಕೆ ಎಸ್‌ಐಆರ್‌ ನಡೆಸುವ ಅಧಿಕಾರವಿದೆ ಎಂದು ವಾದಿಸಿದರು. ಆದರೆ, ಆ ಪ್ರಕ್ರಿಯೆಯಲ್ಲೂ ನ್ಯಾಯಸಮ್ಮತತೆ, ವಿವೇಚನೆ ಮತ್ತು ಅಗತ್ಯ ಪ್ರಕ್ರಿಯೆ ಪಾಲನೆ ಅನಿವಾರ್ಯ ಎಂದು ಅವರು ಒಪ್ಪಿಕೊಂಡರು. ಮತದಾರರ ಹಕ್ಕುಗಳನ್ನು ಉಲ್ಲಂಘಿಸುವಂತಾಗಬಾರದು ಮತ್ತು ಸಂವಿಧಾನದ 326ನೇ ವಿಧಿಗೆ ವಿರುದ್ಧವಾಗುವಂತಿಲ್ಲ ಎಂದು ಅವರು ಹೇಳಿದರು.

Also Read
ಎಸ್‌ಐಆರ್‌: ಇಡೀ ಪ್ರಕಿಯೆಯನ್ನು ಚುನಾವಣಾ ಆಯೋಗ ಸಮರ್ಥಿಸಬೇಕಿದೆ ಎಂದ ಸುಪ್ರೀಂ ಕೋರ್ಟ್‌

ಬಿಹಾರದಲ್ಲಿ ಆಯೋಗ ಮತದಾರರ ಪಟ್ಟಿ ಆಮೂಲಾಗ್ರ ಪರಿಷ್ಕರಣೆಗೆ ಮುಂದಾದಾಗ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಮತ್ತು ನ್ಯಾಷನಲ್ ಫೆಡರೇಷನ್ ಫಾರ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯೂ) ಸೇರಿದಂತೆ ಹಲವು ಸಂಸ್ಥೆಗಳು ಪ್ರಶ್ನಿಸಿದ್ದವು. ಆದರೆ ಸುಪ್ರೀಂ ಕೋರ್ಟ್‌ ಪರಿಷ್ಕರಣೆಗೆ ತಡೆ ನೀಡದೆ ಇದ್ದುದರಿಂದ ಪ್ರಕ್ರಿಯೆ ಮುಂದುವರೆದಿತ್ತು. ಬಳಿಕ 2025ರ ಅಕ್ಟೋಬರ್ 27ರಂದು, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್‌ಐಆರ್‌ ಪ್ರಕ್ರಿಯೆ ವಿಸ್ತರಿಸಲಾಗಿತ್ತು. ಹೀಗಾಗಿ ಇನ್ನಷ್ಟು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾದವು.

ವಿಚಾರಣೆಯ ವೇಳೆ, ನ್ಯಾಯಮೂರ್ತಿ ಬಾಗ್ಚಿ ಅವರು ಸ್ವಾತಂತ್ರ್ಯ ಮತ್ತು ದೇಶ ವಿಭಜನೆಯ ನಂತರ ಜನರ ವಲಸೆ ಹೆಚ್ಚಾಗಿದ್ದರಿಂದ ಮತದಾರರ ಪಟ್ಟಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿತ್ತು ಎಂದು ವಿವರಿಸಿದರು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಪ್ರದೇಶದ ಇತಿಹಾಸವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ವಿಭಜನೆಯ ಪರಿಣಾಮಗಳನ್ನು ವಿವರಿಸಿದರು. ಪ್ರಕರಣದ ವಿಚಾರಣೆ ಇಂದು (ಗುರುವಾರ) ಕೂಡ ಮುಂದುವರೆಯಲಿದೆ.

Kannada Bar & Bench
kannada.barandbench.com