ಬಂಧಿತನಿಗೆ ಅರ್ಥವಾಗುವ ಭಾಷೆಯಲ್ಲಿ ಬಂಧನಕ್ಕೆ ಕಾರಣವಾದ ಅಂಶಗಳನ್ನು ಲಿಖಿತವಾಗಿ ತಿಳಿಸಬೇಕು: ದೆಹಲಿ ಹೈಕೋರ್ಟ್

ಮೌಖಿಕವಾಗಿ ವಿವರಣೆ ನೀಡುವುದು ಸಾಂವಿಧಾನಿಕ ಆದೇಶವನ್ನು ಈಡೇರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಬಂಧನಕ್ಕೆ ಕಾರಣವಾದ ಅಂಶಗಳನ್ನು ಬಂಧಿತರಿಗೆ ಅರ್ಥವಾಗುವ ಭಾಷೆಯಲ್ಲಿ ಲಿಖಿತವಾಗಿ ತಿಳಿಸಬೇಕು ಎಂದಿತು.
Justices Siddharth Mridul and Anup J Bhambhani, Delhi High Court

Justices Siddharth Mridul and Anup J Bhambhani, Delhi High Court

Published on

ಬಂಧಿತನಿಗೆ ಅರ್ಥವಾಗುವ ಭಾಷೆಯಲ್ಲಿ ಬಂಧನಕ್ಕೆ ಕಾರಣವಾದ ಅಂಶಗಳನ್ನು ಲಿಖಿತವಾಗಿ ತಿಳಿದುಕೊಳ್ಳುವುದು ಸಂವಿಧಾನದ 22 (5) ರ ಅಡಿಯಲ್ಲಿ ಆತನ ಮೂಲಭೂತ ಹಕ್ಕು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ [ಜಸ್ವಿಂದರ್ ಕೌರ್ ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ಆದೇಶದ ಮೌಖಿಕ ವಿವರಣೆ ಅಥವಾ ಮೌಖಿಕ ಭಾಷಾಂತರವು ಬಂಧನಕ್ಕೆ ಕಾರಣವಾದ ಅಂಶಗಳ ಕುರಿತ ಸಂವಹನಕ್ಕೆ ಸಮನಾಗಿರುವುದಿಲ್ಲ. ಅದನ್ನು ಲಿಖಿತವಾಗಿ ಬಂಧಿತನಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನುಪ್ ಜೈರಾಮ್ ಭಂಭಾನಿ ಅವರಿದ್ದ ಪೀಠ ತಿಳಿಸಿದೆ.

“ದೋಷರಹಿತತೆಗಾಗಿ ಒಬ್ಬ ಬಂಧಿತನು ಅನಕ್ಷರಸ್ಥನಾಗಿದ್ದರೆ, ಆತನಿಗೆ ಅರ್ಥವಾಗುವ ಭಾಷೆಯಲ್ಲಿ ಬಂಧನಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದರೆ 22(5) ನೇ ವಿಧಿಯನ್ನು ಪೂರೈಸಿದಂತಾಗುತ್ತದೆ ಇದರಿಂದ ಮನವಿ ಸಲ್ಲಿಸುವ ಮೂಲಭೂತಹಕ್ಕನ್ನು ಆತನಿಗೆ ನೀಡಲು ಅನುವು ಮಾಡಿಕೊಟ್ಟಂತಾಗುತ್ತದೆ” ಎಂದು ಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ ಪೀಠದಲ್ಲಿ ಪ್ರಶ್ನಿಸಲಾಗಿದ್ದ ಬಂಧನ ಆದೇಶವನ್ನು ರದ್ದುಗೊಳಿಸಿ ಬಂಧಿತನನ್ನು ಬಿಡುಗಡೆಗೊಳಿಸಲು ನಿರ್ದೇಶಿಸಲಾಯಿತು.

ವಿದೇಶಿ ವಿನಿಮಯ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (COFEPOSA) ಸುಂಕಾಧಿಕಾರಿಗಳು ವಶಕ್ಕೆ ಪಡೆದಿದ್ದ ತನ್ನ ಮಗ ಹರ್ಮೀತ್‌ ಸಿಂಗ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಕೋರಿ ಜಸ್ವಿಂದರ್‌ ಕೌರ್‌ ಎಂಬ ಮಹಿಳೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ವಿಚಾರಣೆ ನಡೆಸಿತು.

Also Read
ಲಖಿಂಪುರ್‌ ಖೇರಿ ಹತ್ಯಾಕಾಂಡ: ಹೊಸ ಆರೋಪ ನಿಗದಿಗೆ ಉತ್ತರಪ್ರದೇಶ ನ್ಯಾಯಾಲಯ ಅನುಮತಿ

ನಿಷಿದ್ಧ ವಸ್ತುಗಳ ಜೊತೆ ಮೂವರು ವ್ಯಕ್ತಿಗಳೊಂದಿಗೆ ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಿಂಗ್‌ನನ್ನು ಬಂಧಿಸಿದ್ದ ಸುಂಕಾಧಿಕಾರಿಗಳು ಆತನ ಬಂಧನ ಕಾರಣಗಳನ್ನು ಇಂಗ್ಲಿಷ್‌ನಲ್ಲಿ ಲಿಖಿತವಾಗಿ ನೀಡಿ ಭಾಷಾಂತರಕಾರರ ಮೂಲಕ ಅದನ್ನು ಅನುವಾದಿಸಿ ಮೌಖಿಕವಾಗಿ ವಿವರಿಸಿದ್ದರು. ಆದರೆ ತನಗೆ ಇಂಗ್ಲಿಷ್‌ ಅರ್ಥವಾಗುವುದಿಲ್ಲ. ಬದಲಿಗೆ ಹಿಂದಿ ಅಥವಾ ಪಂಜಾಬಿಯಲ್ಲಿ ಬಂಧನ ಆದೇಶದ ಪ್ರತಿ ಒದಗಿಸಬೇಕೆಂದು ಆತ ಕೋರಿದ್ದ. ಇದನ್ನು ಅಧಿಕಾರಿಗಳು ನಿರಾಕರಿಸಿದ್ದರು.

Kannada Bar & Bench
kannada.barandbench.com