ಈಶ ಪ್ರತಿಷ್ಠಾನದ ಬಗ್ಗೆ ಸುಪ್ರೀಂ ಮೆಚ್ಚುಗೆ: ಮಧ್ಯಸ್ಥಿಕೆ ಮೂಲಕ ವಿದ್ಯುತ್‌ ಚಿತಾಗಾರ ವಿವಾದ ಬಗೆಹರಿಸಿಕೊಳ್ಳಲು ಆದೇಶ

ವಿದ್ಯುತ್‌ ಚಿತಾಗಾರಗಳು ಸೃಷ್ಟಿಸುತ್ತಿರುವ ದುರ್ವಾಸನೆಯಿಂದ ತೊಂದರೆಗೊಳಗಾದ ಆದಿವಾಸಿ ಗ್ರಾಮಸ್ಥರಿಗೆ ಪರ್ಯಾಯ ಭೂಮಿ ಮತ್ತು ಪರಿಹಾರ ನೀಡುವಂತೆ ಪೀಠ ಸೂಚಿಸಿತು.
Sadhguru, Supreme Court
Sadhguru, Supreme Court
Published on

ಪಾರ್ಥಿವ ಶರೀರಗಳನ್ನು ಸಾಂಪ್ರದಾಯಿಕ ಅಂತ್ಯ ಸಂಸ್ಕಾರ ನಡೆಸಲು ಅನುವು ಮಾಡಿಕೊಡುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಈಶ ಪ್ರತಿಷ್ಠಾನ ನಡೆಸುತ್ತಿರುವ ವಿದ್ಯುತ್‌ ಚಿತಾಗಾರಗಳಿಗೆ ಸಂಬಂಧಿಸಿದಂತೆ ಕೊಯಮತ್ತೂರಿನ ಗ್ರಾಮಸ್ಥರು ಹೂಡಿದ್ದ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ.

ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಮದ್ರಾಸ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರನ್‌ ಅವರನ್ನು ಸಿಜೆಐ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ ಪಂಚೋಲಿ ಅವರಿದ್ದ ಪೀಠ ಕೋರಿತು.

Also Read
ಈಶ ಪ್ರತಿಷ್ಠಾನ, ಜಗ್ಗಿ ವಾಸುದೇವ್ ವಿರುದ್ಧದ ವಿಡಿಯೋ ತೆಗೆದುಹಾಕಲು ಯೂಟ್ಯೂಬರ್‌ಗೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ

ಇದೇ ವೇಳೆ, ಇಶಾ ಫೌಂಡೇಶನ್ ಪವಿತ್ರ ಕಾರ್ಯಗಳನ್ನು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಗ್ರಾಮಸ್ಥರಿಗೆ ಪರ್ಯಾಯ ಭೂಮಿ ಮತ್ತು ಪರಿಹಾರ ನೀಡಬಹುದು ಎಂದಿತು.

“ಇತ್ತೀಚೆಗೆ ಅಂತ್ಯಕ್ರಿಯೆ ದುಬಾರಿ ವಿಷಯವಾಗಿದೆ. ಇಶಾ ಪ್ರತಿಷ್ಠಾನ ಕೇವಲ ಧಾರ್ಮಿಕ ಸೇವೆ ಸಲ್ಲಿಸುವ ಸಂಸ್ಥೆಯಲ್ಲ; ಅವರು ಕೆಲವು ಪವಿತ್ರ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಇದು ಒಳ್ಳೆಯ ಕೆಲಸವೂ ಹೌದು. ಅರ್ಜಿದಾರರು ಭೂಮಿಯನ್ನು ಅವರಿಗೆ ಮಾರಿದ್ದೀರಿ ಅಲ್ಲವೇ? ಕಾನೂನುಬದ್ದ ಚಟುವಟಿಕೆಗಾಗಿ ಮಾರಿದ್ದೀರಿ ಎಂದು ಮಾತ್ರ ಹೇಳಬಹುದು; ಆದರೆ ಅವರು ಏನು ಮಾಡಬೇಕು ಅಥವಾ ಮಾಡಬಾರದು ಎಂದು ಗ್ರಾಮಸ್ಥರು ನಿರ್ದೇಶಿಸಲು ಸಾಧ್ಯವಿಲ್ಲ. ಹಳ್ಳಿಗರ ಜೀವನಮಟ್ಟ ಉತ್ತಮವಾಗಲು ಅವರಿಗೆ ಸೂಕ್ತ ಸ್ಥಳವನ್ನು ಒದಗಿಸಿ ಹಾಗೂ ಪರಿಹಾರ ನೀಡಿ,” ಎಂದು ಸಿಜೆಐ ಕಾಂತ್ ಹೇಳಿದರು.

ಸ್ಥಳೀಯ ನಿವಾಸಿಗಳ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್‌ ಭೂಷಣ್‌, “ಅಲ್ಲಿ ವಾಸಿಸುವ ಸಮುದಾಯವು ಶವಗಳನ್ನು ದಹನ ಮಾಡುವುದಿಲ್ಲ, ಸಮಾಧಿ ಮಾಡುತ್ತಾರೆ. ಈಗ ಇಶಾ ಫೌಂಡೇಶನ್ ‘ಈ ಜಾಗಕ್ಕೆ ಬನ್ನಿ, ಶವವನ್ನು ದಹನ ಮಾಡಿ ಮೋಕ್ಷವನ್ನು ಪಡೆಯಿರಿ’ ಎಂದು ಹೇಳುತ್ತಿದೆ. ಕೊಯಂಬತ್ತೂರಿನಿಂದ ಶವಗಳನ್ನು ಇಲ್ಲಿ ತಂದು ದಹನ ಮಾಡಲಾಗುತ್ತಿದೆ. ಅರ್ಜಿದಾರರು ಸ್ಥಳೀಯ ಆದಿವಾಸಿಗಳು,” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ ಶವ ಸಂಸ್ಕಾರ ತಡೆಯುವಂತೆ ನಿವಾಸದಿಗಳು ಹಠ ಹಿಡಿಯಬಹುದೇ ಎಂದು ಪೀಠ ಪ್ರಶ್ನಿಸಿತು. ವರ ಜೀವನಮಟ್ಟಕ್ಕೆ ಹಾನಿಯಾಗದಂತೆ ಪರಿಹಾರ ನೀಡುವುದು ಅಥವಾ ಪರ್ಯಾಯ ವಸತಿ ಒದಗಿಸುವುದನ್ನು ಪರಿಗಣಿಸಬಹುದು.

Also Read
ಗ್ರಾಹಕರ ಹಕ್ಕು ಮುಕ್ಕಾಗುವಂತೆ ವಿಮಾ ಕಂಪೆನಿ ಗುಪ್ತ ಷರತ್ತು ಬಳಸುವಂತಿಲ್ಲ: ಕಾಶ್ಮೀರ ಹೈಕೋರ್ಟ್

ಬೇರೆಡೆ ಮನಸೋಇಚ್ಛೆಯಿಂದ ದಹನ ಕಾರ್ಯ ನಡೆಸುವುದನ್ನು ತಡೆಯುವುದಕ್ಕಾಗಿ ಈ ವಿದ್ಯುತ್‌ ಚಿತಾಗಾರ ನಿರ್ಮಿಸಲಾಗಿದೆ ಎಂದು ನ್ಯಾ. ಬಾಗ್ಚಿ ಅಭಿಪ್ರಾಯಪಟ್ಟರು. ಆದರೆ ಇದಕ್ಕೆ ಆಕ್ಷೇಪಿಸಿದ ವಕೀಲ ಭೂಷಣ್‌ ದುರ್ವಾಸನೆಯಿಂದಾಗಿ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದರು. ಈ ಹಂತದಲ್ಲಿ ಸಿಜೆಐ ಸೂರ್ಯ ಕಾಂತ್‌ ಅವರು ಈಶ ಸಂಸ್ಥೆಯ ಉತ್ತಮ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಇಬ್ಬರೂ ಪಕ್ಷಕಾರರು ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ವಿವಾದ ಬಗೆಹರಿಸಿಕೊಳ್ಳುವಂತೆ ಪೀಠ ಕಿವಿಮಾತು ಹೇಳಿತು.

ಈಶ ಪ್ರತಿಷ್ಠಾನದ ಪರವಾಗಿ ಹಿರಿಯ ನ್ಯಾಯವಾದಿಗಳಾದ ಮುಕುಲ್ ರೋಹಟಗಿ,ಕೆ ಪರಮೇಶ್ವರ್ , ಬಾಲಾಜಿಶ್ರೀನಿವಾಸನ್ ಮತ್ತು ವಕೀಲ ಕೆ ಗೌತಮ್ ಕುಮಾರ್ ವಾದ ಮಂಡಿಸಿದರು.

Kannada Bar & Bench
kannada.barandbench.com