

ಗ್ರಾಹಕರ ಕಾನೂನುಬದ್ಧ ಹಕ್ಕನ್ನು ನಿರಾಕರಿಸುವುದಕ್ಕಾಗಿ ವಿಮಾ ಕಂಪೆನಿಯು ಮರೆಮಾಚಿದ ಇಲ್ಲವೇ ಅಸ್ಪಷ್ಟವಾಗಿರುವ ಷರತ್ತನ್ನು ಅವಲಂಬಿಸಬಾರದು ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ತಿಳಿಸಿದೆ [ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಮಾಲಾ ಬಶೀರ್ ನಡುವಣ ಪ್ರಕರಣ].
ವಿಮಾ ಒಪ್ಪಂದಗಳು ಸಂಪೂರ್ಣ ಬಹಿರಂಗಪಡಿಸುವ ತತ್ವದಿಂದ ನಿಯಂತ್ರಿತವಾಗಿವೆ ಎಂದು ನ್ಯಾಯಮೂರ್ತಿ ಸಂಜೀವ್ ಕುಮಾರ್ ಮತ್ತು ನ್ಯಾಯಮೂರ್ತಿ ಸಂಜಯ್ ಪರಿಹಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿತು.
ವಿಮೆ ಪಡೆದ ವ್ಯಕ್ತಿ ಅಥವಾ ಸಂಸ್ಥೆ ಅಪಾಯಕ್ಕೆ ಸಂಬಂಧಿಸಿದ ಪ್ರಮುಖ ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕಾದುದು ಕರ್ತವ್ಯವಾಗಿರುವಂತೆ ವಿಮೆ ಪಡೆದವರನ್ನು ಹೊರಗಿಡುವ ಷರತ್ತನ್ನು ಸ್ಪಷ್ಟವಾಗಿ ತಿಳಿಸುವ ಗಂಭೀರ ಕರ್ತವ್ಯ ವಿಮಾ ಕಂಪೆನಿಯದ್ದಾಗಿರುತ್ತದೆ ಎಂದು ನ್ಯಾಯಾಲಯ ಹೇಳಿತು.
ಗ್ರಾಹಕರ ಮೇಲೆ ಪರಿಣಾಮ ಬೀರುವ ಸಂದರ್ಭಗಳಲ್ಲಿ, ವಿಮಾ ಸಂಸ್ಥೆಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವಂತಹ ಒಪ್ಪಂದದ ಷರತ್ತುಗಳನ್ನು ರದ್ದುಪಡಿಸಬೇಕೆಂದು ಕೂಡ ಅದು ತಿಳಿಸಿತು.
“ಗ್ರಾಹಕ ಸಂರಕ್ಷಣಾ ಕಾಯಿದೆಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು, ಒಪ್ಪಂದದಲ್ಲಿ ಇಂತಹ ಷರತ್ತು ಅಸ್ತಿತ್ವದಲ್ಲಿದೆ ಎಂದು ತೋರಿಸಿದ್ದು, ಅದನ್ನು ಜಾರಿಗೊಳಿಸಿದಲ್ಲಿ ವಿಮಾ ಸಂಸ್ಥೆ ಪ್ರೀಮಿಯಂ ಹಣ ಪಡೆಯುವ ಲಾಭ ಗಳಿಸಿಕೊಂಡೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಅಂತಹ ಷರತ್ತನ್ನು ಅನ್ಯಾಯಕರವೆಂದು ರದ್ದುಪಡಿಸಬೇಕು. ಒಪ್ಪಂದದ ಮೂಲ ಉದ್ದೇಶವನ್ನೇ ನಿರಾಕರಿಸುವ ಷರತ್ತು ಅನೂರ್ಜಿತ ಎನಿಸಿಕೊಳ್ಳಲಿದ್ದು ಅದನ್ನು ಜಾರಿಗೊಳಿಸುವಂತಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.
2014ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ಭಾರೀ ಪ್ರವಾಹದಿಂದ ಮಾಲಾ ಬಶೀರ್ ಎಂಬುವವರ ಮನೆಗೆ ಹಾನಿಯಾದ ಹಿನ್ನೆಲೆಯಲ್ಲಿ, ಅವರಿಗೆ ₹4.76 ಲಕ್ಷ ಪರಿಹಾರ ಪಾವತಿಸುವಂತೆ ಶ್ರೀನಗರದ ಜಮ್ಮು–ಕಾಶ್ಮೀರ ಗ್ರಾಹಕ ಪರಿಹಾರ ಆಯೋಗ ಆದೇಶಿಸಿತ್ತು. ಈ ಆದೇಶ ನ್ಯಾಷನಲ್ ಇನ್ಶೂರೆನ್ಸ್ ಪ್ರಶ್ನಿಸಿ ವಿಮಾ ಸಂಸ್ಥೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಮನೆಗೆ ಸ್ಟ್ಯಾಂಡರ್ಡ್ ಫೈರ್ ಅಂಡ್ ಸ್ಪೆಷಲ್ ಪೆರಿಲ್ಸ್ ಪಾಲಿಸಿ ಅಡಿಯಲ್ಲಿ ವಿಮೆ ಮಾಡಲಾಗಿತ್ತು. ಆದರೆ ಪಾಲಿಸಿಯಲ್ಲಿ ಎಸ್‌ಟಿಎಫ್‌ಐ (ಬಿರುಗಾಳಿ, ಚಂಡಮಾರುತ, ಪ್ರವಾಹ, ಜಲಾವೃತ) ಅಪಾಯಗಳನ್ನು ಹೊರತುಪಡಿಸಲಾಗಿದೆ ಎಂಬ ಕಾರಣ ನೀಡಿ ವಿಮಾ ಕಂಪನಿ ದಾವಿಯನ್ನು ತಿರಸ್ಕರಿಸಿತ್ತು. ಆಯೋಗವು ವಿಮಾ ಸಂಸ್ಥೆಯ ನಿರ್ಲಕ್ಷ್ಯವನ್ನು ಗಮನಿಸಿ ನಷ್ಟವನ್ನು ಶೇ 25ರಷ್ಟು ಕಡಿತಗೊಳಿಸಿ ಪರಿಹಾರ ನೀಡಲು ಸೂಚಿಸಿತ್ತು.
ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್, ವಿಮಾ ಒಪ್ಪಂದಗಳು ಸಾಮಾನ್ಯವಾಗಿ ವಿಮಾ ಸಂಸ್ಥೆಗಳೇ ಏಕಪಕ್ಷೀಯವಾಗಿ ರೂಪಿಸುವ “ಹೆಚ್ಚುವರಿ ಒಪ್ಪಂದ” ಆಗಿದ್ದು, ಗ್ರಾಹಕರಿಗೆ ಮಾತುಕತೆ ನಡೆಸುವ ಅವಕಾಶ ಇರುವುದಿಲ್ಲ ಎಂದು ತಿಳಿಸಿತು. ಇಂತಹ ಪಾಲಿಸಿಗಳು ಸಾಮಾನ್ಯವಾಗಿ ಪ್ರವಾಹ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳನ್ನು ಒಳಗೊಂಡಿರುತ್ತವೆ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿತು.
ಪಾಲಿಸಿಗೆ “ಸ್ಟ್ಯಾಂಡರ್ಡ್ ಫೈರ್ ಅಂಡ್ ಸ್ಪೆಷಲ್ ಪೆರಿಲ್ಸ್ ಪಾಲಿಸಿ” ಎಂದು ಹೆಸರಿಡಲಾಗಿರುವುದರಿಂದ, ಎಲ್ಲಾ ಅಪಾಯಗಳಿಗೂ ಪಾಲಿಸಿ ಅನ್ವಯಿಸುತ್ತದೆ ಎಂದು ಗ್ರಾಹಕರು ನಿರೀಕ್ಷಿಸುವುದು ನ್ಯಾಯಸಮ್ಮತವಾಗಿದೆ. ಎಸ್‌ಟಿಎಫ್‌ಐ ಎಂಬ ಸಂಕ್ಷಿಪ್ತ ಪದವನ್ನು ಸ್ಪಷ್ಟವಾಗಿ ವಿವರಿಸಿಲ್ಲ ಎಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿತು.
ಅಂತಿಮವಾಗಿ ಎಸ್‌ಟಿಎಫ್‌ಐ ಅಪಾಯಗಳನ್ನು ಹೊರಗಿಡಲಾಗುತ್ತಿದೆ ಎಂದು ವಿಮೆ ಪಡೆದವರಿಗೆ ನ್ಯಾಯಸಮ್ಮತವಾಗಿ ತಿಳಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ವಿಮಾ ಸಂಸ್ಥೆಗೆ ಸಾಧ್ಯವಾಗಿಲ್ಲ ಎಂದ ನ್ಯಾಯಾಲಯ ಮೇಲ್ಮನವಿ ವಜಾಗೊಳಿಸಿದೆ.