ಹೇಗ್ ದತ್ತು ಒಪ್ಪಂದದ ಪ್ರಕಾರ ದತ್ತು ಪಡೆದಿರುವ ಮಗುವಿನ ತಂದೆಯು ತಾನು ನೆಲೆಸಿರುವ ದೇಶದ ಸಕ್ಷಮ ಪ್ರಾಧಿಕಾರದಿಂದ ಭಾರತದ ಸಕ್ಷಮ ಪ್ರಾಧಿಕಾರಕ್ಕೆ ಇಮೇಲ್ ಮೂಲಕ ಮಾಹಿತಿ ದಾಟಿಸಿದರೆ 10 ದಿನಗಳಲ್ಲಿ ನಿರಾಕ್ಷೇಪಣಾ ಪತ್ರ ಮತ್ತು ಖಾತರಿ ಸರ್ಟಿಫಿಕೇಟ್ ವಿತರಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
ಬೆಂಗಳೂರಿನವರಾದ ಸದ್ಯ ಜರ್ಮನಿಯ ಫ್ರಾಂಕಫರ್ಟ್‌ನಲ್ಲಿ ನೆಲೆಸಿರುವ ಯು ಅಜಯ್ ಕುಮಾರ್ ಮತ್ತು ಅವರ ಪತ್ನಿ ವಿದ್ಯಾರಣ್ಯಪುರದ ನಿವಾಸಿ ಟಿ ವಿ ಮೈತ್ರಾ ಅವರು ತಮ್ಮ ಸಂಬಂಧಿಯನ್ನು ದತ್ತು ಪಡೆಯಲು ದತ್ತು ನಿಯಂತ್ರಣ 2022ರ ಅನ್ವಯ ನಿರಾಕ್ಷೇಪಣಾ ಪತ್ರ ಮತ್ತು ಖಾತರಿ ಪ್ರಮಾಣ ಪತ್ರ ವಿತರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ.
“ಅಂತಾರಾಷ್ಟ್ರೀಯ ದತ್ತುವಿಗೆ ಸಂಬಂಧಿಸಿದಂತೆ ಹೇಗ್ ದತ್ತು ಒಪ್ಪಂದದ 5 ಅಥವಾ 7ನೇ ವಿಧಿಯ ಅಡಿ ದತ್ತು ಸ್ವೀಕರಿಸುವ ದೇಶದಿಂದ ಅನುಮತಿ ಅಗತ್ಯ. ಆ ದೇಶದ ಸಂವಹನದ ಬಳಿಕ ಹೇಗ್ ಸಮಾವೇಶದ 23ನೇ ವಿಧಿಯ ಅಡಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರವು (ಸಿಎಆರ್‌ಎ) ನಿರಾಕ್ಷೇಪಣಾ ಪತ್ರವನ್ನು ನೀಡುತ್ತದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.
“ಹಾಲಿ ಪ್ರಕರಣದಲ್ಲಿ ಮಗು ತಲುಪಬೇಕಿರುವ ಸ್ಥಳ ಜರ್ಮನಿಯಾಗಿದ್ದು, ಭಾರತವು ನಿರಾಕ್ಷೇಪಣಾ ಮತ್ತು ಖಾತರಿ ಪ್ರಮಾಣ ಪತ್ರ ನೀಡಬೇಕಿದೆ. ಇಡೀ ಪ್ರಕ್ರಿಯೆ 68 ಮತ್ತು 69ನೇ ದತ್ತು ನಿಯಂತ್ರಣದ ಪ್ರಕಾರ ನಡೆಯುತ್ತದೆ. ಕೇಂದ್ರ ಸರ್ಕಾರವು 2022ರ ಸೆಪ್ಟೆಂಬರ್ 23ರಂದು ದತ್ತು ನಿಯಂತ್ರಣಗಳನ್ನು ಜಾರಿಗೊಳಿಸಿದೆ. 2023ರ ಮಾರ್ಚ್ 29ರಂದು ಅರ್ಜಿದಾರ ದಂಪತಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ನಿಯಂತ್ರಣ ಕ್ರಮಗಳು ಅಸ್ತಿತ್ವಕ್ಕೆ ಬಂದ ಬಳಿಕ ಮಗು ದತ್ತು ಪಡೆಯಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯು ಪರಿಶೀಲನಾ ಪ್ರಮಾಣ ಪತ್ರ ನೀಡಿದ್ದಾರೆ. ಇದನ್ನು ಆಧರಿಸಿ ಅರ್ಜಿದಾರ ದಂಪತಿಯು ನಿರಾಕ್ಷೇಪಣಾ ಪತ್ರ ಮತ್ತು ಖಾತರಿ ಪ್ರಮಾಣ ಪತ್ರವನ್ನು ಕೋರಿದ್ದಾರೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.
“ನಿಯಮದ ಪ್ರಕಾರ ಅರ್ಜಿದಾರರು ಜರ್ಮನಿಯಲ್ಲಿನ ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಬೇಕು. ಅವರು ಭಾರತ ಸರ್ಕಾರಕ್ಕೆ ಈ ಕುರಿತು ಮಾಹಿತಿ ನೀಡಲಿದ್ದಾರೆ. ಅಲ್ಲಿಂದ ಸಂವಹನ ನಡೆದ 10 ದಿನಗಳಲ್ಲಿ ಭಾರತವು ನಿರಾಕ್ಷೇಪಣಾ ಪತ್ರ ಮತ್ತು ಖಾತರಿ ಪ್ರಮಾಣ ಪತ್ರವನ್ನು ನೀಡಲಿದೆ. ಅರ್ಜಿದಾರರು ಪ್ರಕ್ರಿಯೆ ಪಾಲಿಸದಿರುವುದರಿಂದ ಎನ್‌ಒಸಿ ನೀಡಲಾಗಿಲ್ಲ. ಇದರಲ್ಲಿ ತಪ್ಪು ಹುಡುಕಲಾಗದು. ಈ ವಿಚಾರವನ್ನು ಪ್ರತಿವಾದಿಗಳು ಅರ್ಜಿದಾರರಿಗೆ ಈಗಾಗಲೇ ತಿಳಿಸಿದ್ದಾರೆ. ನಿಯಂತ್ರಣವು ಉದ್ದೇಶಪೂರ್ವಕವಾಗಿದ್ದು, ಅರ್ಜಿದಾರರ ಪ್ರಕರಣಕ್ಕಾಗಿ ಅದನ್ನು ಉಲ್ಲಂಘಿಸಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
“ಭಾರತದಂತೆ ಜರ್ಮನಿಯೂ ಹೇಗ್ ಸಮಾವೇಶಕ್ಕೆ ಸಹಿ ಹಾಕಿದ್ದು, ಅಂತಾರಾಷ್ಟ್ರೀಯ ದತ್ತು ಪಡೆಯುವಿಕೆಗೆ ಜರ್ಮಿನಿಯೂ ಪ್ರಧಾನ ಕೇಂದ್ರೀಯ ಪ್ರಾಧಿಕಾರ ಸ್ಥಾಪಿಸಿದೆ. ಭಾರತಕ್ಕೆ ಎನ್‌ಒಸಿ ಮತ್ತು ಖಾತರಿ ಪ್ರಮಾಣ ಪತ್ರ ಕಳುಹಿಸಿಕೊಡುವಂತೆ ಅರ್ಜಿದಾರರು ಜರ್ಮನಿಯ ಸಕ್ಷಮ ಪ್ರಾಧಿಕಾರಕ್ಕೆ ಕೋರಬೇಕು. ಜರ್ಮಿಯ ಸಕ್ಷಮ ಪ್ರಾಧಿಕಾರವು ಅಂಥ ಸಂವಹನ ಕಳುಹಿಸಿದ ತಕ್ಷಣ ತಡ ಮಾಡದೇ ಸಿಎಆರ್‌ಎ ಎನ್‌ಒಸಿ ಮತ್ತು ಖಾತರಿ ಪ್ರಮಾಣ ಪತ್ರ ಒದಗಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿದಾರರ ಪರವಾಗಿ ವಕೀಲ ಎಸ್ ರೋಹನ್ ಮತ್ತು ಕೇಂದ್ರ ಸರ್ಕಾರದ ಪರವಾಗಿ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ವಾದಿಸಿದ್ದರು.