[ನ್ಯಾಯಾಲಯ ನಿರ್ಮಾಣ] ಹಣಕಾಸಿನ ಕೊರತೆ ನೆಪವೊಡ್ಡಿ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು: ಹೈಕೋರ್ಟ್‌

ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 10 ಎಕರೆ 32 ಗುಂಟೆ ಭೂಮಿಯನ್ನು ಮಂಜೂರು ಮಾಡಿದೆ. ಅಲ್ಲದೇ 2017-18ರ ಆಯವ್ಯಯದಲ್ಲಿ 10 ಕೋಟಿ ರೂಪಾಯಿ ಅನುದಾನವನ್ನೂ ಹಂಚಿಕೆ ಮಾಡಿದೆ.
Karnataka High Court and Chief Justice Ritu Raj Awasthi
Karnataka High Court and Chief Justice Ritu Raj Awasthi

ರಾಯಚೂರು ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಿಸಲು ಹಣಕಾಸಿನ ಕೊರತೆಯ ಕಾರಣ ನೀಡಿದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌, ನೂತನ ಕಟ್ಟಡ ನಿರ್ಮಿಸಲು ಸಂಬಂಧಪಟ್ಟವರಿಗೆ ಅನುದಾನ ಬಿಡುಗಡೆ ಮಾಡಲು ತಿಳಿಸುವಂತೆ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮಂಗಳವಾರ ನಿರ್ದೇಶಿಸಿದೆ. ಅಲ್ಲದೇ, ಅಡ್ವೊಕೇಟ್‌ ಜನರಲ್‌ ಅವರು ಸರ್ಕಾರಕ್ಕೆ ಈ ಸಂಬಂಧ ಸೂಕ್ತ ಸಲಹೆ ನೀಡಬೇಕು ಎಂದು ಮನವಿ ಮಾಡಿದೆ.

ವಕೀಲರಾದ ಪಿ ಬಸವರಾಜ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಹಣಕಾಸು ಇಲಾಖೆಯ ಮುಂದೆ ಇಡಲಾಗಿತ್ತು. ಇದನ್ನು 2022-23ರ ಆಯವ್ಯಯದಲ್ಲಿ ಪರಿಗಣಿಸಲಾಗುವುದು ಎಂದು ಹೇಳಿ ಆಗ ಪ್ರಸ್ತಾವ ಸಲ್ಲಿಸುವಂತೆ ವಾಪಸ್‌ ಮಾಡಲಾಗಿದೆ” ಎಂದು ಸರ್ಕಾರಿ ವಕೀಲರು ಪೀಠಕ್ಕೆ ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಾಲಯವು “ಪ್ರಕರಣದ ಗಂಭೀರತೆಯ ಕುರಿತು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಸಂಬಂಧಪಟ್ಟ ಸರ್ಕಾರದ ಇಲಾಖೆಗೆ ಮನವರಿಕೆ ಮಾಡಿಕೊಡುವ ಮೂಲಕ ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ತಡವಾಗದಂತೆ ನೋಡಿಕೊಳ್ಳಬೇಕು. ಹಾಲಿ ಕಟ್ಟಡ ಶಿಥಿಲವಾಗಿದ್ದು, ಅದು ಕುಸಿದು ಸಮಸ್ಯೆಯಾದರೆ ಅನಗತ್ಯ ಸಮಸ್ಯೆ ಎದುರಾಗಲಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿರುವುದಿಲ್ಲ” ಎಂದು ನ್ಯಾಯಾಲಯ ಎಚ್ಚರಿಸಿದೆ.

“ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಲಯದ ತುರ್ತನ್ನು ಅರಿತು ರಾಜ್ಯ ಸರ್ಕಾರವು ಜಮೀನು ಹಂಚಿಕೆ ಮಾಡಿ ಬಜೆಟ್‌ನಲ್ಲಿ ಅನುದಾನವನ್ನೂ ಮೀಸಲಿಟ್ಟಿದೆ ಎಂಬುದು ನಮಗೆ ದಾಖಲೆಗಳಿಂದ ತಿಳಿದಿದೆ. ಆದರೆ, ಆನಂತರ ಅನುದಾನ ಬಿಡುಗಡೆ ಮಾಡುವ ಸಂಬಂಧ ಸೂಕ್ತ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳದಿರುವುದರಿಂದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ” ಎಂದು ಆದೇಶದಲ್ಲಿ ಹೇಳಿದೆ.

ನ್ಯಾಯಾಲಯಗಳ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂಬುದನ್ನು ನಾವು ನೆನಪಿಸಲು ಬಯಸುತ್ತೇವೆ. ನ್ಯಾಯಿಕ ಕಾರ್ಯನಿರ್ವಹಣೆ ರಾಜ್ಯದಲ್ಲಿ ಅತ್ಯಂತ ಪ್ರಮುಖ ಎಂದು ನಾವು ಭಾವಿಸಿದ್ದೇವೆ. ಹಣಕಾಸಿನ ಕೊರತೆಯ ನೆಪವೊಡ್ಡಿ ನೂತನ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದೆ ತನ್ನ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ನುಣಿಚಿಕೊಳ್ಳಲಾಗದು. ಹಣಕಾಸು ಇಲಾಖೆಯು ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ನಿಲುವನ್ನು ಮೆಚ್ಚಲಾಗದು” ಎಂದು ಹೇಳಿರುವ ಪೀಠವು ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.

Also Read
[ಕೋವಿಡ್‌] ಹಣಕಾಸಿನ ಮುಗ್ಗಟ್ಟಿನಿಂದ ಎಂಆರ್‌ಐ ಯಂತ್ರ ಖರೀದಿಸಲಾಗಿಲ್ಲ ಎಂದ ರಾಜ್ಯ ಸರ್ಕಾರ; ಹೈಕೋರ್ಟ್‌ ಸಿಡಿಮಿಡಿ

ಹಾಲಿ ನ್ಯಾಯಾಲಯದ ಕಟ್ಟಡದ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಛಾವಣಿ ಶಿಥಿಲಾವಸ್ಥೆಯಲ್ಲಿದೆ ಎಂಬುದು ಸೇರಿದಂತೆ ಸಮಸ್ಯೆಗಳನ್ನು ಉಲ್ಲೇಖಿಸಿ ಕಳೆದ ವರ್ಷದ ಮಾರ್ಚ್‌ 3ರಂದು ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ವರದಿ ಸಲ್ಲಿಸಿದ್ದರು. ಈ ಕುರಿತು ಕಳೆದ ವರ್ಷದ ಮಾರ್ಚ್‌ 6ರಂದು ನ್ಯಾಯಾಲಯವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು.

ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 10 ಎಕರೆ 32 ಗುಂಟೆ ಭೂಮಿಯನ್ನು ಮಂಜೂರು ಮಾಡಿತ್ತು. ಅಲ್ಲದೇ 2017-18ರ ಆಯವ್ಯಯದಲ್ಲಿ 10 ಕೋಟಿ ರೂಪಾಯಿ ಅನುದಾನವನ್ನೂ ಹಂಚಿಕೆ ಮಾಡಿದೆ.

Related Stories

No stories found.
Kannada Bar & Bench
kannada.barandbench.com