[ಕೋವಿಡ್‌] ಹಣಕಾಸಿನ ಮುಗ್ಗಟ್ಟಿನಿಂದ ಎಂಆರ್‌ಐ ಯಂತ್ರ ಖರೀದಿಸಲಾಗಿಲ್ಲ ಎಂದ ರಾಜ್ಯ ಸರ್ಕಾರ; ಹೈಕೋರ್ಟ್‌ ಸಿಡಿಮಿಡಿ

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೆಂಬರ್‌ 8ರ ವಿಚಾರಣೆಯಂದು ಖುದ್ದು ವಿಚಾರಣೆಯಲ್ಲಿ ಭಾಗಿಯಾಗಬೇಕು ಎಂದು ವಿಭಾಗೀಯ ಪೀಠವು ಆದೇಶ ಮಾಡಿದೆ.
DIMHANS, MRI Machines and Karnataka HC
DIMHANS, MRI Machines and Karnataka HC

“ನ್ಯಾಯಾಲಯ ಆದೇಶ ಮಾಡಿ ಒಂದು ವರ್ಷವಾದರೂ ಉತ್ತರ ಕರ್ನಾಟಕದ ಜನರಿಗಾಗಿ ಇರುವ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್‌) ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರಗಳನ್ನು ಅವಳಡಿಸಲಾಗಿಲ್ಲ ಮತ್ತು ವೈದ್ಯಕೀಯ ಮೇಲ್ವಿಚಾರಕರನ್ನು ನೇಮಿಸದಿರುವುದು ದುರದೃಷ್ಟಕರ” ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಮುಂದಿನ ವಿಚಾರಣೆಯ ವೇಳೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಖಡಕ್‌ ಆದೇಶ ಮಾಡಿದೆ.

ಈ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

“ಕಳೆದ ವರ್ಷದ ಮಾರ್ಚ್‌ 5ರಂದು ತಕ್ಷಣ ಡಿಮ್ಹಾನ್ಸ್‌ಗೆ ಎಂಆರ್‌ಐ ಯಂತ್ರಗಳನ್ನು ಪೂರೈಸಬೇಕು ಮತ್ತು ಕಾಯಂ ವೈದ್ಯಕೀಯ ಮೇಲ್ವಿಚಾರಕರನ್ನು ನೇಮಿಸಬೇಕು. ಈ ಪ್ರಕ್ರಿಯೆ ಆರು ವಾರಗಳಲ್ಲಿ ಪೂರ್ಣಗೊಳ್ಳಬೇಕು ಎಂದು ಪೀಠ ಆದೇಶಿಸಿತ್ತು. ಆದರೆ, ಒಂದು ವರ್ಷವಾದರೂ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿಲ್ಲ. ಉತ್ತರ ಕರ್ನಾಟಕದ ಜನರಿಗೆ ವಿಶೇಷವಾಗಿ ಬಡವರಿಗಾಗಿ ಇರುವ ಅತ್ಯಂತ ಮಹತ್ವದ ಸಂಸ್ಥೆ ಡಿಮ್ಹಾನ್ಸ್‌ ಆಗಿದ್ದು, ಇದುವರೆಗೆ ಏನನ್ನೂ ಮಾಡದಿರುವುದು ದುರುದೃಷ್ಟಕರ. ಯಾವುದೇ ತೆರನಾದ ಆದೇಶ ಪಾಲನಾ ವರದಿ ಸಲ್ಲಿಸಲಾಗಿಲ್ಲ. ಎಂಆರ್‌ಐ ಯಂತ್ರ ಅಳವಡಿಸಿಲ್ಲ ಮತ್ತು ವೈದ್ಯಕೀಯ ಮೇಲ್ವಿಚಾರಕರನ್ನು ನೇಮಿಸಲಾಗಿಲ್ಲ. ಹೀಗಾಗಿ, ನವೆಂಬರ್‌ 8ರಂದು ನಿಗದಿಪಡಿಸಿರುವ ವಿಚಾರಣೆಯಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ವಿಚಾರಣೆಯಲ್ಲಿ ಇರಬೇಕು. ಇದರೊಳಗೆ ಇಲಾಖೆಯು ಎಂಆರ್‌ಐ ಯಂತ್ರ ಅಳವಡಿಸಿ, ವೈದ್ಯಕೀಯ ಮೇಲ್ವಿಚಾರಕರನ್ನು ನೇಮಕ ಮಾಡಿದ ಸಂಬಂಧ ಅಫಿಡವಿಟ್‌ ಸಲ್ಲಿಸಿದರೆ ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲಾಗುವುದು. ಅಲ್ಲದೇ, ಕಳೆದ ವರ್ಷದ ಮಾರ್ಚ್‌ 5ರಂದು ಪೀಠ ಮಾಡಿರುವ ಎಲ್ಲಾ ಆದೇಶಗಳಿಗೆ ಸಂಬಂಧಿಸಿದಂತೆ ವಿಸ್ತೃತವಾದ ಆದೇಶ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಪೀಠ ಹೇಳಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ರೇವತಿ ಆದಿನಾಥ್‌ ನಾರ್ದೆ ಅವರು “ಎಂಆರ್‌ಐ ಸ್ಕ್ಯಾನ್‌ ಯಂತ್ರ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. 16 ಸಿ ಟಿ ಸ್ಕ್ಯಾನ್‌ ಯಂತ್ರಗಳನ್ನು ಪೂರೈಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗಿದ್ದರಿಂದ ಎಂಆರ್‌ಐ ಯಂತ್ರಗಳನ್ನು ಖರೀದಿಸಲಾಗಿಲ್ಲ” ಎಂದರು.

ಇದರಿಂದ ಸಿಡಿಮಿಡಿಗೊಂಡ ಪೀಠವು “ಕೋವಿಡ್‌ ಇರುವುದರಿಂದ ಜನರಿಗೆ ಎಂಆರ್‌ಐ ಸ್ಕ್ಯಾನ್‌ ಯಂತ್ರಗಳು ಬೇಕಿಲ್ಲ ಅಲ್ಲವೇ?” ಎಂದು ಖಾರವಾಗಿ ಪ್ರಶ್ನಿಸಿತು. ಇದಕ್ಕೆ ವಕೀಲೆ ರೇವತಿ ಅವರು “ಖರೀದಿ ಪ್ರಕ್ರಿಯೆ ನಡೆಯುತ್ತಿದೆ” ಎಂದರು.

Also Read
ಸರ್ಕಾರ ಕಾಟಾಚಾರದ ನೆರವು ನೀಡಿದರೆ ಉಪಯೋಗವಾಗದು: ಧಾರವಾಡ ಹೈಕೋರ್ಟ್ ಪೀಠ ವಕೀಲರ ಸಂಘದ ಅಧ್ಯಕ್ಷ ಸಿ ಎಸ್ ಪಾಟೀಲ

ಮುಂದುವರೆದು ಅವರು, “ಹಿಂದಿನ ಆದೇಶಕ್ಕೆ ಸಂಬಂಧಿಸಿದಂತೆ ಭಾಗಶಃ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆ. ಡೇ ಕೇರ್‌ ಸೆಂಟರ್‌ಗೆ ಸಿಬ್ಬಂದಿ ನೇಮಿಸಲಾಗಿದೆ. ಕಟ್ಟಡಕ್ಕೆ ಬಣ್ಣ ಹಚ್ಚಲಾಗಿದ್ದು, ನವೀಕರಣ ಪೂರ್ಣಗೊಂಡಿದೆ. ಎಂಆರ್‌ಐ ಯಂತ್ರಗಳ ಪೂರೈಕೆಗೆ ಸಂಬಂಧಿಸಿದಂತೆ ಇನ್ನೂ ಮೂರು ತಿಂಗಳ ಕಾಲಾವಕಾಶ ಬೇಕಿದೆ. ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸರ್ಕಾರದ ಜೊತೆ ಚರ್ಚಿಸಿದ ಬಳಿಕ ಎಲ್ಲಾ ದಾಖಲೆಗಳನ್ನು ಪ್ರಸ್ತುತಪಡಿಸಲಾಗುವುದು” ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಇದಕ್ಕೂ ಮುನ್ನ, “ಹಿಂದಿನ ಆದೇಶದಲ್ಲಿ ಹೇಳಿರುವ ಎಲ್ಲವನ್ನೂ ಪಾಲಿಸುವ ಸಂಬಂಧದ ದಾಖಲೆಗಳನ್ನು ಒಂದು ವಾರದಲ್ಲಿ ನ್ಯಾಯಾಲಯದ ಮುಂದೆ ಇಡಲಾಗುವುದು. ಇದಕ್ಕಾಗಿ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದರಿಂದ ಕೆರಳಿದ ಪೀಠವು,"ಕಳೆದ ವರ್ಷದ ಮಾರ್ಚ್‌ನಿಂದ ಏನು ಮಾಡುತ್ತಿದ್ದಿರಿ?” ಎಂದು ಕಠಿಣವಾಗಿ ಪ್ರಶ್ನಿಸಿತು.

Related Stories

No stories found.
Kannada Bar & Bench
kannada.barandbench.com