ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಾವಳಿಗೆ ಇತ್ತೀಚೆಗೆ ಮಾಡಿದ ತಿದ್ದುಪಡಿ ಪ್ರಶ್ನಿಸಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಸಲ್ಲಿಸಿದ್ದ ಅರ್ಜಿ ನಿರ್ವಹಣಾ ಯೋಗ್ಯವಾಗಿದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ತಿಳಿಸಿದೆ.
ಅರ್ಜಿಯು ಸಂವಿಧಾನದ 19 (1) (ಎ) ವಿಧಿಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಧರಿಸಿದ್ದು, ಹೀಗಾಗಿ ಅರ್ಜಿದಾರರ ದಾವೆ ಹೂಡಿಕೆಯ ಹಕ್ಕು ಪರಿಶೀಲಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಜೊತೆಗೆ ವ್ಯಂಗ್ಯ ವಿಡಂಬನೆಯಂತಹ ನ್ಯಾಯಯುತ ಟೀಕೆಗಳಿಗೆ ರಕ್ಷಣೆ ನೀಡುವಂತೆ ತೋರುತ್ತಿಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ತಿಳಿಸಿತು.
“ವ್ಯಂಗ್ಯ ವಿಡಂಬನೆ ಮೇಲೆ (ತಿದ್ದುಪಡಿ) ಪ್ರಭಾವ ಬೀರುವುದಿಲ್ಲ ಎಂದು ನಿಮ್ಮ ಅಫಿಡವಿಟ್ ಹೇಳುತ್ತಿದೆ. ಆದರೆ ನಿಮ್ಮ (ತಿದ್ದುಪಡಿ) ನಿಯಮಾವಳಿ ಹಾಗೆ ಹೇಳುತ್ತಿಲ್ಲ. (ವ್ಯಂಗ್ಯ ವಿಡಂಬನೆಗೆ ಸಂಬಂಧಿಸಿದಂತೆ) ಯಾವುದೇ ರಕ್ಷಣೆ ಒದಗಿಸಿಲ್ಲ. ಅದರ ಬಗ್ಗೆ ಪರಿಶೀಲಿಸಬೇಕಿದೆ” ಎಂದು ನ್ಯಾಯಾಲಯ ಹೇಳಿತು. ನಿಯಮಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿರುವುದಿಂದ ಅರ್ಜಿದಾರರ ಸವಾಲು ಅಕಾಲಿಕ ಎಂಬ ಸರ್ಕಾರದ ವಾದವೂ ಸರಿಯಲ್ಲ ಎಂದಿತು. ಪ್ರಕರಣವನ್ನು ಏಪ್ರಿಲ್ 27 ರಂದು ಬೆಳಿಗ್ಗೆ 10 ಗಂಟೆಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
ಕೇಂದ್ರ ಸರ್ಕಾರದ ಯಾವುದೇ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತನಗೆ ಸುಳ್ಳು ಅಥವಾ ನಕಲಿ ಆನ್‌ಲೈನ್ ಸುದ್ದಿ ಎನಿಸುವುದನ್ನು ಪತ್ತೆ ಹಚ್ಚಿ ಟ್ಯಾಗ್ ಮಾಡುವ ಅಧಿಕಾರ ಉಳ್ಳ ಸತ್ಯ ಪರಿಶೀಲನಾ ಸಮಿತಿಯ ರಚನೆಗೆ ಸಚಿವಾಲಯ ಸೂಚಿಸಬಹುದು ಎಂದು ನಿಯಮಾವಳಿ 3ಕ್ಕೆ ಮಾಡಲಾದ ತಿದ್ದುಪಡಿಗಳನ್ನು ಅರ್ಜಿದಾರ ಕಮ್ರಾ ವಿಶೇಷವಾಗಿ ಪ್ರಶ್ನಿಸಿದ್ದಾರೆ.