2021ರ ಐಟಿ ನಿಯಮ ಪಾಲನೆ ಕೋರಿದ್ದ ಅರ್ಜಿ: ಟ್ವಿಟರ್ ಬಯಸಿದಷ್ಟು ಸಮಯ ತೆಗೆದುಕೊಳ್ಳಲು ಬಿಡಲಾಗದು ಎಂದ ದೆಹಲಿ ಹೈಕೋರ್ಟ್

ಹಿಂದಿನ ವಿಚಾರಣೆ ವೇಳೆ ನೀಡಿದ್ದ ಆಶ್ವಾಸನೆಯಂತೆ ಟ್ವಿಟರ್ ಕುಂದುಕೊರತೆ ಅಧಿಕಾರಿಯನ್ನು ಇನ್ನೂ ನೇಮಿಸಿಲ್ಲ ಎಂದು ನ್ಯಾ. ರೇಖಾ ಪಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
2021ರ ಐಟಿ ನಿಯಮ ಪಾಲನೆ ಕೋರಿದ್ದ ಅರ್ಜಿ: ಟ್ವಿಟರ್ ಬಯಸಿದಷ್ಟು ಸಮಯ ತೆಗೆದುಕೊಳ್ಳಲು ಬಿಡಲಾಗದು ಎಂದ ದೆಹಲಿ ಹೈಕೋರ್ಟ್
Published on

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಗಳು 2021ರ ಅಡಿಯಲ್ಲಿ ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ಎಂದು ನೇಮಕ ಮಾಡುತ್ತೀರಿ ಎಂದು ಬಹಿರಂಗಪಡಿಸುವಂತೆ ಟ್ವಿಟರ್‌ನ ಭಾರತೀಯ ಸಂಸ್ಥೆಗೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವುದನ್ನು ತೋರಿಸುವ ಗಾಜಿಯಾಬಾದ್‌ ವಿಡಿಯೋ ಟ್ವೀಟ್ ಮಾಡಿದ ಬಳಕೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ಅಮಿತ್ ಆಚಾರ್ಯ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ರೇಖಾ ಪಲ್ಲಿ ಅವರಿದ್ದ ಪೀಠದೆದುರು ನಡೆಯಿತು. 2021ರ ಐಟಿ ನಿಯಮಾವಳಿಗಳ 4ನೇ ನಿಯಮದ ಪ್ರಕಾರ ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸುವಂತೆ ಟ್ವಿಟರ್‌ಗೆ ನಿರ್ದೇಶಿಸಬೇಕು ಎಂದು ಕೂಡ ಅರ್ಜಿಯಲ್ಲಿ ಕೋರಲಾಗಿತ್ತು.

ಹಿಂದಿನ ವಿಚಾರಣೆ ವೇಳೆ ನೀಡಿದ್ದ ಆಶ್ವಾಸನೆಯಂತೆ ಟ್ವಿಟರ್‌ ಕುಂದುಕೊರತೆ ಅಧಿಕಾರಿಯನ್ನು ಇನ್ನೂ ನೇಮಿಸಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಆಗ ಟ್ವಿಟರ್‌ ಭಾರತೀಯ ಸಂಸ್ಥೆ ಪರ ಹಾಜರಾದ ಹಿರಿಯ ನ್ಯಾಯವಾದಿ ಸಜನ್‌ ಪೂವಯ್ಯ ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ಹೊಂದಿರದ ಕಾರಣ 2021ರ ಐಟಿ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಒಪ್ಪಿಕೊಂಡರು. ಆದರೆ ಮಧ್ಯಂತರ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಜೂನ್‌ 21ರಂದು ಅವರನ್ನು ತೆಗೆದುಹಾಕಲಾಯಿತು ಎಂದು ತಿಳಿಸಿದರು.

ಇದನ್ನು ಒಪ್ಪದ ನ್ಯಾಯಾಲಯ "ಜೂನ್ 21 ರಿಂದ ಜುಲೈ 6 ರವರೆಗೆ, ನೀವು ಕನಿಷ್ಟಪಕ್ಷ ಇನ್ನೊಬ್ಬ ವ್ಯಕ್ತಿಯನ್ನು ನೇಮಿಸಬಹುದಿತ್ತು. ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆ? ನಮ್ಮ ದೇಶದಲ್ಲಿ ಟ್ವಿಟರ್ ತನಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಭಾವಿಸಿದರೆ ಅದಕ್ಕೆ ಅನುಮತಿ ನೀಡುವುದಿಲ್ಲ” ಎಂದಿತು.

Also Read
ಟ್ವಿಟರ್‌ ನೂತನ ಐಟಿ ನಿಯಮಾವಳಿಗಳನ್ನು ಅನುಸರಿಸುತ್ತಿಲ್ಲ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಅಫಿಡವಿಟ್‌

ನಂತರ ಹೊಸ ನೇಮಕಾತಿ ಯಾವಾಗ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಪಡೆಯಲು ಪೂವಯ್ಯ ಸಮಯ ಕೋರಿದರು. ಅದಕ್ಕಾಗಿ ನ್ಯಾಯಾಲಯ ಎರಡು ದಿನಗಳ ಕಾಲಾವಕಾಶ ನೀಡಿತು. "ಸ್ಪಷ್ಟ ಪ್ರತಿಕ್ರಿಯೆಯೊಂದಿಗೆ ಬನ್ನಿ, ಇಲ್ಲದಿದ್ದರೆ ತೊಂದರೆಗೆ ಸಿಲುಕುವಿರಿ" ಎಂದು ಕೂಡ ಪೀಠ ಎಚ್ಚರಿಸಿತು. ಮುಂದಿನ ವಿಚಾರಣೆ ಜುಲೈ 8ರಂದು ನಡೆಯಲಿದೆ.

"ಟ್ವಿಟರ್‌ನಲ್ಲಿ ಮುಖ್ಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸಿಕೊಂಡಿಲ್ಲ, ಸ್ಥಳೀಯ ಕುಂದುಕೊರತೆ ಅಧಿಕಾರಿ ಹುದ್ದೆ ಖಾಲಿ ಇದೆ. ನೋಡಲ್‌ ಸಂಪರ್ಕಾಧಿಕಾರಿ ಹುದ್ದೆ ಕೊರತೆ ಇದೆ. 2021ರ ಮೇ 29ರಂದು ಟ್ವಿಟರ್‌ ಜಾಲತಾಣದಲ್ಲಿ ಕಂಡುಬಂದಿದ್ದ ಭೌತಿಕ ಸಂಪರ್ಕ ವಿಳಾಸ ಮತ್ತೊಮ್ಮೆ ಲಭಿಸುತ್ತಿಲ್ಲ" ಎಂದು ಈ ಹಿಂದೆ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿತ್ತು.

Kannada Bar & Bench
kannada.barandbench.com