
ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್ ಹಾಗೂ ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆಗೆ ಕೇಂದ್ರ ಸರ್ಕಾರ ಒಪ್ಪಿದರೆ ವೈದ್ಯಕೀಯ ನೆರವು ಪಡೆಯಲು ಡಲ್ಲೇವಾಲ್ ಸಮ್ಮತಿಸಬಹುದು ಎಂದು ಪಂಜಾಬ್ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಪ್ರತಿಭಟನೆ ದುರ್ಬಲಗೊಳಿಸಬಹುದು ಎಂಬ ಕಳವಳದಿಂದಾಗಿ ಡಲ್ಲೇವಾಲ್ ಅವರು ವೈದ್ಯಕೀಯ ನೆರವು ಪಡೆಯಲು ನಿರಾಕರಿಸುತ್ತಿದ್ದ ಬಗ್ಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಈ ಹಿಂದೆ ಆತಂಕ ವ್ಯಕ್ತಪಡಿಸಿತ್ತು.
ಡಿಸೆಂಬರ್ 29 ರಂದು, ಪಂಜಾಬ್ ಸರ್ಕಾರದ ಅಧಿಕಾರಿಗಳ ತಂಡ ವೈದ್ಯಕೀಯ ನೆರವು ಪಡೆಯುವಂತೆ ಡಲ್ಲೇವಾಲ್ ಅವರ ಮನವೊಲಿಸಲು ಯತ್ನಿಸಿತಾದರೂ ಅವರು ಪ್ರತಿಭಟನಾ ಸ್ಥಳದಿಂದ ತಮ್ಮನ್ನು ಬಲವಂತದಿಂದ ಕರೆದೊಯ್ಯಬಹುದು ಎಂಬ ಕಾರಣಕ್ಕೆ ನಿರಾಕರಿಸಿದ್ದರು.
ನ್ಯಾಯಾಲಯ ಇನ್ನಷ್ಟು ಕಾಲಾವಕಾಶ ನೀಡಿದರೆ ಬಿಕ್ಕಟ್ಟಿಗೆ ಇತಿಶ್ರೀ ಹಾಡಬಹುದು ಎಂದು ಇಂದಿನ ವಿಚಾರಣೆ ವೇಳೆ ಪಂಜಾಬ್ ಅಡ್ವೊಕೇಟ್ ಜನರಲ್ (ಎಜಿ) ಗುರ್ಮಿಂದರ್ ಸಿಂಗ್ ತಿಳಿಸಿದರು.
ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಕೆಲವು ಸಂಧಾನಕಾರರು ತೆರಳಿದ್ದರು. ನಿನ್ನೆ ಎರಡು ಸಂಗತಿಗಳು ನಡೆದವು. ಮೊದಲನೆಯದು ಪಂಜಾಬ್ ಬಂದ್ ಘೋಷಣೆ. ಇದರಿಂದಾಗಿ ಪಂಜಾಬ್‌ನ ಎಲ್ಲೆಡೆ ನಿರ್ಬಂಧ ಉಂಟಾಯಿತು. ಎರಡನೆಯದು ತಮಗೆ ಕೇಂದ್ರದೊಂದಿಗೆ ಮಾತನಾಡಲು ಅವಕಾಶ ದೊರೆತರೆ ತಾವು ವೈದ್ಯಕೀಯ ನೆರವು ಪಡೆಯಲು ಸಿದ್ಧರಿರುವುದಾಗಿ ಡಲ್ಲೇವಾಲ್ ತಿಳಿಸಿದ್ದಾರೆ ಎಂದು ಎಜಿ ಮಾಹಿತಿ ನೀಡಿದರು.
ಪ್ರಕರಣದ ಮುಂದಿನ ವಿಚಾರಣೆಗೆ ಸ್ವಲ್ಪ ಸಮಯಾವಕಾಶ ಕೋರಿರುವುದನ್ನು ಗಮನಿಸಿದ ನ್ಯಾಯಾಲಯ ಎಲ್ಲಾ ಪಕ್ಷಕಾರರಿಗೂ ಸ್ವೀಕಾರಾರ್ಹವಾಗುವಂತಹ ಪರಿಹಾರ ಮೂಡಬಹುದೇ ಎಂಬುದನ್ನು ನೋಡಲು ಸಮಯಾವಕಾಶ ನೀಡಿತು.
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿ ಮುಂದೂಡಿಕೆ ವಿರೋಧಿಸಲಿಲ್ಲ, ಈ ಅಂಶದ ಬಗ್ಗೆ ತನಗೆ (ಕೇಂದ್ರ ಸರ್ಕಾರದಿಂದ) ಯಾವುದೇ ಸೂಚನೆಗಳಿಲ್ಲ ಎಂದು ಹೇಳಿದರು. ಪ್ರಕರಣದ ತುರ್ತು ಪರಿಗಣಿಸಿ, ಜನವರಿ 2 ಅಥವಾ 3ರಂದು ಅದನ್ನು ಆಲಿಸಬಹುದು ಎಂದು ಅವರು ತಿಳಿಸಿದರು. ಅದರಂತೆ ನ್ಯಾಯಾಲಯವು ಮೂರು ದಿನಗಳ ಕಾಲಾವಕಾಶ ನೀಡಿ ಜನವರಿ 2, 2025ಕ್ಕೆ ವಿಚಾರಣೆ ನಿಗದಿಪಡಿಸಿತು.
ಉಪವಾಸ ನಿರತ ಡಲ್ಲೇವಾಲ್ ಅವರನ್ನು ಆಸ್ಪತ್ರೆಗೆ ಕಳುಹಿಸಲು ಮನವೊಲಿಸುವಂತೆ ಪಂಜಾಬ್ ಸರ್ಕಾರಕ್ಕೆ ಡಿಸೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಸಂಗತಿಗಳನ್ನು ತಿಳಿಸಿದೆ.
ಪ್ರತಿಭಟನೆಯನ್ನು ದುರ್ಬಲಗೊಳಿಸಬಹುದು ಎಂಬ ಆತಂಕದ ಮೇಲೆ ರೈತ ಮುಖಂಡ ವೈದ್ಯಕೀಯ ನೆರವು ನಿರಾಕರಿಸಿದ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು.