ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾಂಸಾಹಾರ ಮತ್ತು ಮಾಂಸ ಉತ್ಪನ್ನಗಳ ಜಾಹೀರಾತುಗಳ ಮೇಲೆ ನಿರ್ಬಂಧ ಇಲ್ಲವೇ ನಿಷೇಧ ಹೇರುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಮಕ್ಕಳು ಸೇರಿದಂತೆ ತಮ್ಮ ಕುಟುಂಬ ಇಂತಹ ಜಾಹಿರಾತುಗಳನ್ನು ವೀಕ್ಷಿಸುವಂತೆ ಒತ್ತಾಯಿಸಲಾಗಿದೆ ಎಂದು ಮೂರು ಜೈನ ಧಾರ್ಮಿಕ ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಜೈನ ಧರ್ಮದ ಅನುಯಾಯಿಯಾದ ಮುಂಬೈ ನಿವಾಸಿಯೊಬ್ಬರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅರ್ಜಿಯು ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ರಾಜ್ಯ ಸರ್ಕಾರ, ಭಾರತೀಯ ಪತ್ರಿಕಾ ಮಂಡಳಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆ ಹಾಗೂ ಭಾರತೀಯ ಜಾಹೀರಾತು ಮಾನದಂಡಗಳ ಮಂಡಳಿಯಿಂದ (ಎಎಸ್‌ಸಿಐ) ಪರಿಹಾರ ಕೋರಿದೆ. ಅಲ್ಲದೆ ಅರ್ಜಿದಾರರು ಲೈಸಿಯಸ್, ಫ್ರೆಶ್ ಟು ಹೋಮ್ ಫುಡ್ಸ್ ಮತ್ತು ಮೀಟಿಗೊ ಕಂಪನಿಗಳನ್ನು ಪ್ರಕರಣದ ಪ್ರತಿವಾದಿಗಳನ್ನಾಗಿಸಿದ್ದಾರೆ.
ಜಾಹೀರಾತುಗಳು ಶಾಂತಿಯುತವಾಗಿ ಬದುಕುವ ತಮ್ಮ ಹಕ್ಕನ್ನು ಮತ್ತು ಮಕ್ಕಳ ಮನಸ್ಸನ್ನು ಹಾಳು ಮಾಡುತ್ತವೆ.
ಎಲ್ಲಾ ಮಾಧ್ಯಮಗಳಲ್ಲಿ ಮಾಂಸಾಹಾರ ಕುರಿತ ಜಾಹೀರಾತುಗಳನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ಮಾರ್ಗಸೂಚಿಗಳನ್ನು ರೂಪಿಸಿ ಜಾರಿಗೆ ತರಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಬೇಕು.
ಜಾಹೀರಾತುಗಳು ಸಸ್ಯಾಹಾರಿಗಳಿಗೆ ತೊಂದರೆ ಮತ್ತು ಕಿರುಕುಳ ನೀಡುವುದಲ್ಲದೆ ಅವರ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತವೆ.
ಇದು ಜೀವಿಗಳ ಬಗ್ಗೆ ಸಹಾನುಭೂತಿ ತೋರುವುದು ಮೂಲಭೂತ ಕರ್ತವ್ಯ ಎಂದಿರುವ ಸಂವಿಧಾನದ 51 ಎ (ಜಿ) ವಿಧಿಗೆ ವಿರುದ್ಧ.
ಮಾಂಸ ಉತ್ಪನ್ನಗಳ ಜಾಹೀರಾತುಗಳು ಜೀವಿಗಳ ವಿರುದ್ಧ ಕ್ರೌರ್ಯವನ್ನು ಉತ್ತೇಜಿಸುತ್ತಿವೆ.
ಶೋಷಣೆಯಿಂದ ಮುಕ್ತವಾಗಿ ಮಾನವ ಘನತೆಯಿಂದ ಬದುಕುವುದು ಈ ದೇಶದ ಪ್ರತಿಯೊಬ್ಬರ ಮೂಲಭೂತ ಹಕ್ಕು. ಆದರೆ, ಆಕ್ಷೇಪಾರ್ಹ ಜಾಹೀರಾತುಗಳು ಮಾಂಸಾಹಾರವನ್ನು ಸೇವಿಸುವಂತೆ ಪ್ರಚೋದಿಸುವ, ಉತ್ತೇಜಿಸುವ ಮತ್ತು ಬೆದರಿಸುವ ಮೂಲಕ ಮಕ್ಕಳು ಮತ್ತು ಯುವಕರ ಮನಸ್ಸನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ.
ಮದ್ಯ ಮತ್ತು ಸಿಗರೇಟ್ ಜಾಹೀರಾತುಗಳನ್ನು ಸರ್ಕಾರ ಈಗಾಗಲೇ ನಿಷೇಧಿಸಿದ್ದು ಅವುಗಳಂತೆಯೇ ಮಾಂಸಾಹಾರ ಆರೋಗ್ಯಕರವಲ್ಲ. ಜೊತೆಗೆ ಪರಿಸರಕ್ಕೂ ಹಾನಿಕಾರಕ. ಅಲ್ಲದೆ ಯುವಕರನ್ನು ಸೇವಿಸುವಂತೆ ಪ್ರಚೋದಿಸುತ್ತವೆ.
ಅಂತಹ ಆಹಾರದ ಮಾರಾಟ ಅಥವಾ ಸೇವನೆಯನ್ನು ತಾವು ವಿರೋಧಿಸುವುದಿಲ್ಲ. ಆದರೆ ಆಕ್ಷೇಪ ಇರುವುದು ಆ ರೀತಿಯ ಜಾಹೀರಾತುಗಳ ಬಗ್ಗೆ ಮಾತ್ರ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಅವರಿರುವ ಪೀಠ ಈ ವಾರ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.