ಜಲ್ಲಿಕಟ್ಟು ಸರ್ಕಾರಿ ಕಾರ್ಯಕ್ರಮ; ಖಾಸಗಿಯವರು ಆಯೋಜಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

ಅವನಿಯಾಪುರಂ, ಅಲಂಗನಲ್ಲೂರು, ಪಾಲಮೇಡುಗಳಲ್ಲಿ ನಡೆಯುವ ಜಲ್ಲಿಕಟ್ಟು ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ರಾಜ್ಯ ಸರ್ಕಾರ ಅದರಲ್ಲಿ ನೇರವಾಗಿ ಭಾಗಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
Madurai Bench of Madras HC and Jallikattu Ai image
Madurai Bench of Madras HC and Jallikattu Ai image
Published on

ಜಲ್ಲಿಕಟ್ಟು ಹಬ್ಬ ತಮಿಳುನಾಡು ಸರ್ಕಾರ ನೇರವಾಗಿ ಆಯೋಜಿಸುವ ಅಂತಾರಾಷ್ಟ್ರೀಯ  ಕಾರ್ಯಕ್ರಮವಾಗಿದ್ದು ರಾಜ್ಯದ ಅವನಿಯಾಪುರಂನಲ್ಲಿ ಆ ಕಾರ್ಯಕ್ರಮ ಆಯೋಜಿಸುವ ಹಕ್ಕು ಖಾಸಗಿ ವ್ಯಕ್ತಿಗಳು ಅಥವಾ ಸ್ವಯಂಘೋಷಿತ ಗ್ರಾಮ ಸಮಿತಿಗಳಿಗೆ ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಮಧುರೈ ಪೀಠ ತೀರ್ಪು ನೀಡಿದೆ [ಪಿ. ಮುರುಗನ್ ಮತ್ತು ಜಿಲ್ಲಾಧಿಕಾರಿ ನಡುವಣ ಪ್ರಕರಣ].

2009ರ ತಮಿಳುನಾಡು ಜಲ್ಲಿಕಟ್ಟು ನಿಯಂತ್ರಣ ಕಾಯಿದೆಯ ಪ್ರಕಾರ, ಈ ಹಬ್ಬವನ್ನು ರಾಜ್ಯದ ಕಂದಾಯ ಇಲಾಖೆ ಅಧಿಕಾರಿಗಳು ಸಲಹಾ ಸಮಿತಿಯ ಭಾಗವಾಗಿರುವ ಗ್ರಾಮಸ್ಥರ ಸಹಾಯದೊಂದಿಗೆ ಆಯೋಜಿಸುತ್ತಾರೆ ಎಂದು ನ್ಯಾಯಮೂರ್ತಿಗಳಾದ ಜಿ ಜಯಚಂದ್ರನ್ ಮತ್ತು ಕೆ ಕೆ ರಾಮಕೃಷ್ಣನ್ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿದೆ.  

Also Read
ಜಲ್ಲಿಕಟ್ಟು ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಪೆಟಾ

ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಯಂತ್ರಣಕ್ಕೆ ಸಂಬಂಧಿಸಿದ 2009ರ ಕಾಯಿದೆ ಹಾಗೂ ಪ್ರಾಣಿ ಕಲ್ಯಾಣ ಇಲಾಖೆಯು 21.11.2025ರಂದು ಹೊರಡಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನದ ಪ್ರಕಾರ, ಅವನಿಯಾಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಕಾರ್ಯಕ್ರಮವನ್ನು ರಾಜ್ಯದ ಆದಾಯ ಇಲಾಖೆ ಅಧಿಕಾರಿಗಳು ಸಲಹಾ ಸಮಿತಿಯ ಭಾಗವಾಗಿರುವ ಗ್ರಾಮಸ್ಥರ ಸಹಾಯದೊಂದಿಗೆ ಆಯೋಜಿಸಬೇಕು” ಎಂದು ನ್ಯಾಯಾಲಯ ವಿವರಿಸಿದೆ.

ಆದ್ದರಿಂದ, ಜನವರಿ 15ರಂದು ನಡೆಯಲಿರುವ ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ಅನುಮತಿ ಹಾಗೂ ಪೊಲೀಸ್ ರಕ್ಷಣೆಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂಬ ಪಿ ಮುರುಗನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಪಾರಂಪರಿಕ ಕ್ರೀಡೆಯಾದ ಎತ್ತುಗಳನ್ನು ಓಡಿಸುವ ಸ್ಪರ್ಧೆಯಾದ ಜಲ್ಲಿಕಟ್ಟನ್ನು ಸಾಮಾನ್ಯವಾಗಿ ಪೊಂಗಲ್‌ ಹಬ್ಬದ ವೇಳೆ ಮದುರೈ, ತಿರುಚಿರಾಪಳ್ಳಿ, ತೇಣಿ ಮತ್ತು ಶಿವಗಂಗೆ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಕೇಕೆ ಹರ್ಷೋದ್ಘಾರಗಳ ನಡುವೆ ಹಗ್ಗ ಬಿಚ್ಚಿ ಬಿಡಲಾದ ಹೋರಿಯ ಡುಬ್ಬವನ್ನು ತಬ್ಬಿ ಹಿಡಿದು ನಿರ್ದಿಷ್ಟ ದೂರದವರೆಗೆ ಸಾಗಬೇಕು ಇಲ್ಲವೇ ಅದಕ್ಕೆ ಕಟ್ಟಿದ ಬಾವುಟವನ್ನು  ಕಿತ್ತುಕೊಳ್ಳಬೇಕು, ಇದು ಆಟದ ವೈಶಿಷ್ಟ್ಯ. ಅವನಿಯಾಪುರಂ, ಅಲಂಗನಲ್ಲೂರು ಮತ್ತು ಪಾಲಮೇಡು ಹಳ್ಳಿಗಳಲ್ಲಿ ನಡೆಸಲಾಗುವ ಈ ಕ್ರೀಡೆಗೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯಿದೆ. ಆಟಕ್ಕೆ ಪರ- ವಿರೋಧದ ಮಾತುಗಳು ಬಹಳ ಹಿಂದಿನಿಂದಲೂ ಕೇಳುತ್ತಲೇ ಬಂದಿವೆ. ತಮಿಳು ಸಂಸ್ಕೃತಿ, ಗ್ರಾಮೀಣ ಗುರುತು ಮತ್ತು ಸ್ಥಳೀಯ ಹೋರಿ ಜಾತಿಗಳನ್ನು ಉಳಿಸಲು ಜಲ್ಲಿಕಟ್ಟು ಮುಖ್ಯ ಎಂದು ಬೆಂಬಲಿಗರು ಹೇಳಿದರೆ ವಿರೋಧಿಗಳು ಪ್ರಾಣಿ ಹಿಂಸೆ, ಸಾರ್ವಜನಿಕ ಭದ್ರತೆಯ ಬಗೆಗಿನ ಕಳವಳಗಳನ್ನು ಮುಂದಿಡುತ್ತಾರೆ.

ಅವನಿಯಾಪುರಂ ಹಳ್ಳಿ ಜಲ್ಲಿಕಟ್ಟು ಸಮಿತಿಯ ಅಧ್ಯಕ್ಷ ಎಂದು ಹೇಳಿಕೊಂಡ ಅರ್ಜಿದಾರ ಪಿ ಮುರುಗನ್, ಸಲಹಾ ಸಮಿತಿಯಲ್ಲಿ ಗ್ರಾಮದ ಎಲ್ಲಾ ಸಮುದಾಯಗಳ ಪ್ರತಿನಿಧಿತ್ವ ಇರಬೇಕೆಂದು ಮನವಿ ಮಾಡಿದ್ದರು.

Also Read
ಕಂಬಳ, ಜಲ್ಲಿಕಟ್ಟು, ಬಂಡಿ ಓಟ ಕ್ರೀಡೆಗಳಿಗೆ ಸುಪ್ರೀಂ ಅನುಮತಿ; ತಿದ್ದುಪಡಿ ಕಾಯಿದೆಗಳನ್ನು ಎತ್ತಿ ಹಿಡಿದ ನ್ಯಾಯಾಲಯ

ಈ ಕಳವಳವನ್ನು ಪರಿಹರಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್, ಹಿಂದಿನ ವರ್ಷಗಳ ಪದ್ಧತಿಯ ಪ್ರಕಾರ ಸಲಹಾ ಸಮಿತಿಯನ್ನು ರಚಿಸಲಾಗುವುದು ಮತ್ತು 2020 ರಲ್ಲಿ ಹೈಕೋರ್ಟ್ ನೀಡಿದ ರಿಟ್ ಅರ್ಜಿಗಳ ಬ್ಯಾಚ್‌ನಲ್ಲಿ ಹೊರಡಿಸಿದ ಮಾರ್ಗಸೂಚಿಗಳನ್ನು ಸಹ ಪರಿಗಣಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಈ ಮನವಿಯನ್ನು ದಾಖಲಿಸಿಕೊಂಡ ನ್ಯಾಯಾಲಯ ರಿಟ್‌ ಅರ್ಜಿ ತಿರಸ್ಕರಿಸಿತು. ಅವನಿಯಾಪುರಂ, ಅಲಂಗನಲ್ಲೂರು ಮತ್ತು ಪಾಲಮೇಡುಗಳಲ್ಲಿ ನಡೆಯುವ ಜಲ್ಲಿಕಟ್ಟು ಕಾರ್ಯಕ್ರಮಗಳು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಾಗಿದ್ದು, ಅವುಗಳಲ್ಲಿ ರಾಜ್ಯ ಸರ್ಕಾರ ನೇರವಾಗಿ ಭಾಗಿಯಾಗಿದೆ ಎಂದು ಅದು ಹೇಳಿತು.  

[ತೀರ್ಪಿನ ಪ್ರತಿ]

Attachment
PDF
Jallikattu_judgment_
Preview
Kannada Bar & Bench
kannada.barandbench.com