High Court of Jammu & Kashmir and Ladakh, Srinagar Wing
High Court of Jammu & Kashmir and Ladakh, Srinagar Wing

ಅರ್ನಾಬ್ ಗೋಸ್ವಾಮಿ ಹಾಗೂ ಕೌಲ್ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಜಮ್ಮು- ಕಾಶ್ಮೀರ ಹೈಕೋರ್ಟ್

ಮಾನನಷ್ಟ ದೂರುಗಳ ಸಂದರ್ಭದಲ್ಲಿ ಕೂಲಂಕಷವಾಗಿ ದಾಖಲೆ ಪರಿಶೀಲಿಸುವ ಜವಾಬ್ದಾರಿ ಮ್ಯಾಜಿಸ್ಟ್ರೇಟ್‌ ಅವರದ್ದಾಗಿದೆ ಎಂದು ಹೈಕೋರ್ಟ್ ಹೇಳಿದೆ.
Published on

ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಪತ್ರಕರ್ತ ಆದಿತ್ಯ ರಾಜ್ ಕೌಲ್ ವಿರುದ್ಧ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಹಿರಿಯ ನಾಯಕ ನಯೀಮ್ ಅಖ್ತರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ರದ್ದುಗೊಳಿಸಿದೆ. (ಆದಿತ್ಯ ರಾಜ್ ಕೌಲ್ ಮತ್ತು ಆರ್. ವಿ. ನಯೀಮ್ ಅಖ್ತರ್ ನಡುವಣ ಪ್ರಕರಣ).

ಶ್ರೀನಗರದ ಸಿಜೆಎಂ ನ್ಯಾಯಾಲಯದಲ್ಲಿ ಬಾಕಿ ಇರುವ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಮೂರ್ತಿ ಸಂಜಯ್ ಧರ್ ಅವರಿದ್ದ ಏಕಸದಸ್ಯ ಪೀಠ ರದ್ದುಗೊಳಿಸಿತು. ಸುದ್ದಿ ಕಾರ್ಯಕ್ರಮವನ್ನು ಎಚ್ಚರಿಕೆಯಿಂದ ವೀಕ್ಷಿಸಲಾಗಿದ್ದು ನಿರೂಪಕರು ಯಾವುದೇ ಆರೋಪ ಅಥವಾ ಆಪಾದನೆ ಮಾಡಿಲ್ಲ. ಕಾರ್ಯಕ್ರಮ ಉದ್ಘೋಷಕರು ಮತ್ತು ನಿರೂಪಕರು ಪದೇ ಪದೇ ಖಾಲಿದ್‌ ಜಹಾಂಗೀರ್‌ ಅವರ ಪತ್ರ ಉಲ್ಲೇಖಿಸಿದ್ದಾರೆ ಹಾಗೂ ಅದರಲ್ಲಿದ್ದ ವಿಚಾರಗಳನ್ನು ಓದಿದ್ದಾರೆ ಎಂದು ನ್ಯಾಯಾಲಯ ಹೇಳಿತು.

Also Read
ರಾಹುಲ್ ಗಾಂಧಿ ಮಾನನಷ್ಟ ಭಾಷಣ: ಆರ್‌ಎಸ್‌ಎಸ್‌ ಕಾರ್ಯಕರ್ತನ ಮನವಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ರಿಪಬ್ಲಿಕ್‌ ಟಿವಿ ವಾಹಿನಿಯಲ್ಲಿ ತಮ್ಮ ವಿರುದ್ಧ ಮಾನನಷ್ಟಕರ ಮತ್ತು ದುರುದ್ದೇಶಪೂರ್ವಕ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ ಎಂದು 2018ರಲ್ಲಿ ಅಖ್ತರ್‌ ಅವರು ಆರ್‌ಪಿಸಿ ಸೆಕ್ಷನ್‌ 499 ಮತ್ತು 500 ಅಡಿ ಪ್ರಕರಣ ದಾಖಲಿಸಿದ್ದರು.

ಅಲ್ಲದೆ ಆರೋಪ ಇನ್ನೂ ಸಾಬೀತಾಗಬೇಕಿದೆ ಎಂದು ನಿರೂಪಕರು ಕಾರ್ಯಕ್ರಮ ಪ್ರಸಾರದ ವೇಳೆ ತಿಳಿಸಿದ್ದಾರೆ ಹಾಗೂ ಇಂಥದ್ದೇ ಸುದ್ದಿಯನ್ನು ಇತರೆ ಸುದ್ದಿ ಸಂಸ್ಥೆಗಳು ಕೂಡ ಪ್ರಸಾರ ಮಾಡಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

“ಮಾನನಷ್ಟ ದೂರುಗಳ ಸಂದರ್ಭದಲ್ಲಿ ಉನ್ನತ ಮಟ್ಟದಲ್ಲಿ ದಾಖಲೆಗಳನ್ನು ಪರಿಶೀಲಿಸುವ ಜವಾಬ್ದಾರಿ ಮ್ಯಾಜಿಸ್ಟ್ರೇಟ್‌ ಅವರದ್ದಾಗಿದೆ. ಆಪಾದಿತರು/ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೊರಡಿಸಿದ ಆದೇಶ ಕಾನೂನು ಪ್ರಕಾರ ಸಮರ್ಥನೀಯವಲ್ಲ. ಆದ್ದರಿಂದ ವಿಚಾರಣೆ ರದ್ದುಪಡಿಸಲಾಗುತ್ತಿದೆ” ಎಂದು ಅದು ತಿಳಿಸಿತು.

Kannada Bar & Bench
kannada.barandbench.com