ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಹೂಡಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಮ್ಮು , ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ [ಅಶಾನ್ ಅಹ್ಮದ್ ಮಿರ್ಜಾ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರ ನ್ಯಾಯಾಲಯ 2020ರಲ್ಲಿ ನಿಗದಿಪಡಿಸಿದ್ದ ಆರೋಪಗಳನ್ನು ನ್ಯಾ. ಸಂಜೀವ್ ಕುಮಾರ್ ಅವರು ಬದಿಗೆ ಸರಿಸಿದರು.
ಆದರೆ ಆರೋಪ ರದ್ದುಗೊಂಡಿದ್ದರೂ ಪ್ರಕರಣವನ್ನು ಹೊಸದಾಗಿ ದಾಖಲಿಸಿ ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಆರಂಭಿಸಲು ಇ ಡಿ ಮುಕ್ತವಾಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಿಬಿಐ ದಾಖಲಿಸಿದ ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧವು (ಪ್ರೆಡಿಕೇಟ್ ಅಫೆನ್ಸ್) ಅಕ್ರಮ ಹಣ ವರ್ಗಾವಣೆ ಆರೋಪ ಕಾಯಿದೆ (ಪಿಎಂಎಲ್ಎ) ಅಡಿ ಬರುವ ಯಾವುದೇ ವರ್ಗೀಕೃತ ಅಪರಾಧವನ್ನು ಒಳಗೊಂಡಿಲ್ಲ ಎಂಬ ತಾಂತ್ರಿಕ ಆಧಾರದ ಮೇಲೆ ನ್ಯಾಯಾಲಯ ಆರೋಪಿ ಫಾರೂಕ್ ಅವರಿಗೆ ಪರಿಹಾರ ನೀಡಿತು.
ಪ್ರಸ್ತುತ ಪ್ರಕರಣದಲ್ಲಿ ಫಾರೂಕ್ ಅರ್ಜಿದಾರರಾಗಿರಲಿಲ್ಲ. ಸಹ ಆರೋಪಿಗಳಾದ ಅಹ್ಸಾನ್ ಅಹ್ಮದ್ ಮಿರ್ಜಾ ಮತ್ತು ಮಂಜೂರ್ ಗಜಾನ್ಫರ್ ಅವರು ಅರ್ಜಿ ಸಲ್ಲಿಸಿದ್ದರು.
ಪಿಎಂಎಲ್‌ಎ ಅಡಿ ಅರ್ಜಿದಾರರ ವಿರುದ್ಧ ಪ್ರಾಸಿಕ್ಯೂಷನ್ ಆರಂಭಿಸಲು ಕಾರಣವಾದ ಮೂಲ ಅಂಶವೆಂದರೆ ರಣಬೀರ್ ದಂಡ ಸಂಹಿತೆಯ (ಆರ್‌ಬಿಸಿ-ಕಾಶ್ಮೀರಕ್ಕೆ ಪ್ರತ್ಯೇಕವಾದ ಅಪರಾಧಿಕ ಕಾನೂನು) ಸೆಕ್ಷನ್ 120-ಬಿಯು ಪಿಎಂಎಲ್‌ಎ ಅಡಿ ಬರುವ ವರ್ಗೀಕೃತ ಅಪರಾಧಕ್ಕೆ ಸೇರುತ್ತದೆ ಎನ್ನುವುದಾಗಿದೆ. ಆದರೆ, ಸುಪ್ರೀಂ ಕೋರ್ಟ್ ಪವನ್ ದಿಬ್ಬೂರು ಮತ್ತು ಇ ಡಿ ನಡುವಣ ಪ್ರಕರಣದಲ್ಲಿ ಸೆಕ್ಷನ್ 120-ಬಿಯು ತನ್ನಷ್ಟಕ್ಕೇ ಪ್ರತ್ಯೇಕವಾಗಿ ಪಿಎಂಎಲ್‌ಎ ಅಡಿ ಬರುವ ವರ್ಗೀಕೃತ ಅಪರಾಧದ ಪಟ್ಟಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.
ಪಿಎಂಎಲ್‌ಎ ವರ್ಗೀಕೃತ ಪಟ್ಟಿಯಲ್ಲಿ (ಪಿಎಂಎಲ್‌ಎ) ಬರುವ ಅಪರಾಧಗಳ ಅಡಿಯಲ್ಲಿ ಅಪರಾಧದ ಉದ್ದೇಶ ಬರದೆ ಹೋದಲ್ಲಿ ಸೆಕ್ಷನ್ 120 ಬಿ ಆರ್‌ಪಿಸಿ ಅಥವಾ ಐಪಿಸಿ ಅಡಿಯಲ್ಲಿ ದಾಖಲಾದ ಪ್ರಕರಣವನ್ನು ವರ್ಗೀಕೃತ ಅಪರಾಧ ಎಂದು ಪರಿಗಣಿಸಲಾಗದು ಎಂದು ಪವನ ದಿಬ್ಬೂರು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತಿಳಿಸಿತ್ತು.