ವಿಚ್ಛೇದನಕ್ಕಾಗಿ ಒಮರ್ ಅಬ್ದುಲ್ಲಾ ಮನವಿ: ಪಾಯಲ್ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅವರು ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ 2023ರ ಡಿಸೆಂಬರ್‌ನಲ್ಲಿ ತಿರಸ್ಕರಿಸಿತ್ತು.
Omar Abdullah
Omar Abdullah Facebook
Published on

ತಮ್ಮ ಪರಿತ್ಯಕ್ತ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಂದ ವಿಚ್ಛೇದನ ಕೋರಿ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪಾಯಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ [ಒಮರ್‌ ಅಬ್ದುಲ್ಲಾ ಮತ್ತು ಪಾಯಲ್‌ ಅಬ್ದುಲ್ಲಾ ನಡುವಣ ಪ್ರಕರಣ].

ಅರ್ಜಿಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಸೂಚಿಸಿದೆ.

Also Read
ವಿಚ್ಛೇದಿತ ಪತ್ನಿಗೆ ₹1.5 ಲಕ್ಷ ಮಾಸಿಕ ಜೀವನಾಂಶ: ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾಗೆ ದೆಹಲಿ ಹೈಕೋರ್ಟ್ ಆದೇಶ

ಒಮರ್ ಅಬ್ದುಲ್ಲಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಕಳೆದ 15 ವರ್ಷಗಳಿಂದ ದಂಪತಿ ನಡುವೆ  ವೈವಾಹಿಕ ನಂಟು  ಇಲ್ಲ ಎಂದು ಇಂದು ತಿಳಿಸಿದರು.

ಹೀಗಾಗಿ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅವರು ಕೋರಿದರು. ಪ್ರಕರಣವೊಂದರಲ್ಲಿ ಸಂಪೂರ್ಣ ನ್ಯಾಯ ಒದಗಿಸುವುದಕ್ಕಾಗಿ ಅಗತ್ಯವಾದ ಎಂಥದ್ದೇ ಆದೇಶ ಹೊರಡಿಸಲು ಈ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಅಧಿಕಾರ ನೀಡಲಾಗಿದೆ. ವಿವಾಹ ವಿಸರ್ಜನೆಗೆ ಈ ಹಿಂದೆ ಸುಪ್ರೀಂ ಕೋರ್ಟ್‌ ಈ ವಿಧಿಯನ್ನು ಬಳಸಿದ್ದಿದೆ.

ಕ್ರೌರ್ಯದ ಆಧಾರದಲ್ಲಿ ವಿಚ್ಛೇದನ ನೀಡದಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅಬ್ದುಲ್ಲಾ ಸಲ್ಲಿಸಿದ ಮನವಿಯಲ್ಲಿ ನೋಟಿಸ್ ನೀಡಲಾಗಿದೆ.

ಪಾಯಲ್ ವಿರುದ್ಧ ಒಮರ್ ಅಬ್ದುಲ್ಲಾ ಮಾಡಿರುವ ಕ್ರೌರ್ಯದ ಆರೋಪಗಳು ಅಸ್ಪಷ್ಟವಾಗಿವೆ ಎಂಬ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಒಪ್ಪಿ ವಿಚ್ಛೇದನಕ್ಕೆ ಅನುಮತಿಸದೆ ಹೈಕೋರ್ಟ್‌ ನೀಡಿದ್ದ  ಆದೇಶವನ್ನು ಒಮರ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

 ಸೆಪ್ಟೆಂಬರ್ 1994 ರಲ್ಲಿ ವಿವಾಹವಾದ ಒಮರ್ ಮತ್ತು ಪಾಯಲ್ ಅಬ್ದುಲ್ಲಾ ದೀರ್ಘಕಾಲದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.ಅಬ್ದುಲ್ಲಾ ಅವರ ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ಆಗಸ್ಟ್ 30, 2016ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅಬ್ದುಲ್ಲಾ ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮ ದಾಂಪತ್ಯ ಸರಿಪಡಿಸಲಾಗದಷ್ಟು ಮುರಿದುಬಿದ್ದಿದೆ. ತಾವು ಅವರು 2009 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ಅವರು ಹೇಳಿದ್ದರು.

Also Read
ವಿಚ್ಛೇದಿತ ಪತ್ನಿಗೆ ₹1.5 ಲಕ್ಷ ಮಾಸಿಕ ಜೀವನಾಂಶ: ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾಗೆ ದೆಹಲಿ ಹೈಕೋರ್ಟ್ ಆದೇಶ

ಪಾಯಲ್ ಅಬ್ದುಲ್ಲಾಗೆ ಒಮರ್ ಪಾವತಿಸಬೇಕಿದ್ದ ಜೀವನಾಂಶದ ಮೊತ್ತವನ್ನು ಹೈಕೋರ್ಟ್ ಇತ್ತೀಚೆಗೆ ಹೆಚ್ಚಿಸಿತ್ತು. ಪಾಯಲ್‌ ಅವರಿಗೆ ಜೀವನಾಂಶ ರೂಪದಲ್ಲಿ ತಿಂಗಳಿಗೆ ₹1.5 ಲಕ್ಷ, ಇಬ್ಬರು ಪುತ್ರರ ವಿದ್ಯಾಭ್ಯಾಸಕ್ಕಾಗಿ ತಲಾ ₹60,000 ರೂ.ಗಳನ್ನು ನೀಡುವಂತೆ ಸೂಚಿಸಲಾಗಿತ್ತು.

ವಿಚಾರಣಾ ನ್ಯಾಯಾಲಯವು ಪಾಯಲ್ ಅಬ್ದುಲ್ಲಾಗೆ ತಿಂಗಳಿಗೆ ₹ 75,000 ಮತ್ತು ಅವರ ಮಗನಿಗೆ 18 ವರ್ಷ ತುಂಬುವವರೆಗೆ ₹ 25,000 ಮಧ್ಯಂತರ ಜೀವನಾಂಶವನ್ನು ನೀಡಿತ್ತು.

Kannada Bar & Bench
kannada.barandbench.com