

ಪ್ರಸ್ತುತ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಹೊರಗಿನ ಜೈಲುಗಳಲ್ಲಿರುವ ಜಮ್ಮು ಕಾಶ್ಮೀರದ ವಿಚಾರಣಾಧೀನ ಕೈದಿಗಳನ್ನು ಕೇಂದ್ರಾಡಳಿತ ಪ್ರದೇಶದ ಜೈಲುಗಳಿಗೆ ವಾಪಸ್ ಕರೆಸಿಕೊಳ್ಳುವಂತೆ ಕೋರಿ ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ [ಮೆಹಬೂಬಾ ಮುಫ್ತಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ನಿರ್ದಿಷ್ಟ ಸಮುದಾಯದ ಪರ ಹೋರಾಟಗಾರ್ತಿಯಾಗಿ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ರಾಜಕೀಯ ಲಾಭ ಪಡೆಯುವುದಕ್ಕಾಗಲಿ ಅಥವಾ ಚುನಾವಣಾ ಅಭಿಯಾನ ಕೈಗೊಳ್ಳುವುದಕ್ಕಾಗಲಿ ನ್ಯಾಯಾಲಯಗಳನ್ನು ವೇದಿಕೆಯನ್ನು ಮಾಡಿಕೊಳ್ಳಲು ಪಿಐಎಲ್‌ಗಳನ್ನು ಬಳಸಿಕೊಳ್ಳಬಾರದು ಎಂದು ಮುಖ್ಯ ನ್ಯಾಯಮೂರ್ತಿ ಅರುಣ್ ಪಲ್ಲಿ ಮತ್ತು ನ್ಯಾಯಮೂರ್ತಿ ರಾಜ್ನೇಶ್ ಓಸ್ವಾಲ್ ಅವರಿದ್ದ ಪೀಠ ಕಿವಿ ಹಿಂಡಿದೆ.
“ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪಕ್ಷಪಾತ ಅಥವಾ ರಾಜಕೀಯ ಉದ್ದೇಶಗಳನ್ನು ಮುಂದುವರಿಸಲು ಇಲ್ಲವೇ ನ್ಯಾಯಾಲಯವನ್ನು ರಾಜಕೀಯ ವೇದಿಕೆಯಾಗಿಸಲು ಬಳಸುವುದಕ್ಕೆ ಅವಕಾಶ ನೀಡಲಾಗದು. ಪಿಐಎಲ್ ರಾಜಕೀಯ ಹಿಡಿತ ಸಾಧಿಸುವ ಸಾಧನವೂ ಅಲ್ಲ, ನ್ಯಾಯಾಲಯಗಳು ಚುನಾವಣಾ ಅಭಿಯಾನಗಳ ವೇದಿಕೆಯಾಗುವುದೂ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಮತದಾರರೊಂದಿಗೆ ಸಂವಹನ ನಡೆಸಲು ಅನೇಕ ನ್ಯಾಯಸಮ್ಮತ ಮಾರ್ಗಗಳಿದ್ದರೂ, ಚುನಾವಣಾ ಲಾಭ ಪಡೆಯಲು ನ್ಯಾಯಾಲಯಗಳನ್ನು ಸಾಧನವಾಗಿ ಬಳಸಲಾಗದು” ಎಂದು ನ್ಯಾಯಾಲಯ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಹೊರಗಿನ ಜೈಲುಗಳಲ್ಲಿ ಬಂಧಿತರಾಗಿರುವ ಎಲ್ಲಾ ವಿಚಾರಣಾಧೀನ ಕೈದಿಗಳನ್ನು ತಕ್ಷಣವೇ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸುವಂತೆ ನಿರ್ದೇಶನ ನೀಡಬೇಕು ಎಂದು ಮೆಹಬೂಬಾ ಮುಫ್ತಿ ಮನವಿ ಮಾಡಿದ್ದರು. ವಿಚಾರಣಾಧೀನ ಕೈದಿಗಳ ಹಲವು ಕುಟುಂಬಗಳು ಈ ವಿಷಯವನ್ನು ತಮ್ಮ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತಾವು ಮನವಿ ಸಲ್ಲಿಸಿದ್ದಾಗಿ ಮುಫ್ತಿ ವಾದಿಸಿದ್ದರು.
ಆದರೆ, ಯಾವುದೇ ನಿರ್ದಿಷ್ಟ ವಿಚಾರಣಾಧೀನ ಕೈದಿಯ ವಿವರಗಳು, ಸಂಬಂಧಿತ ಪ್ರಕರಣಗಳ ಸ್ವರೂಪ, ಅಥವಾ ಯಾವುದೇ ಖಾಸಗಿ ವರ್ಗಾವಣೆ ಆದೇಶಗಳನ್ನು ಅವರು ಪ್ರಶ್ನಿಸಿಲ್ಲ ಎಂದ ನ್ಯಾಯಾಲಯ ವಿಚಾರಣಾಧೀನ ಕೈದಿಗಳನ್ನು ಕೇಂದ್ರಾಡಳಿತ ಪ್ರದೇಶದ ಹೊರಗೆ ಬಂಧಿಸಿಡುವುದು ಸಾರಾಸಗಟಾಗಿ ಮಾಡಿರುವ ಕಾರ್ಯವಲ್ಲ ಬದಲಿಗೆ ಅಂತಹ ವರ್ಗಾವಣೆಗಳು ಪ್ರತಿಯೊಂದು ಪ್ರಕರಣವನ್ನೂ ಆಧರಿಸಿ ಸಕ್ಷಮ ಅಧಿಕಾರಿಗಳು ಹೊರಡಿಸಿರುವ ಆದೇಶಗಳಾಗಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಮಾಜದಂಚಿನಲ್ಲಿರುವವರನ್ನು, ಶೋಷಿತರನ್ನು ರಕ್ಷಿಸಲೆಂದು ಜೀವತಳೆದ ಪಿಐಎಲ್‌ಗಳನ್ನು ಕಾಲ ಕ್ರಮೇಣ ವೈಯಕ್ತಿಕ ಲಾಭ, ಪ್ರತೀಕಾರ ಅಥವಾ ಇತರ ಗುಪ್ತ ರಾಜಕೀಯ ಉದ್ದೇಶಗಳಿಗಾಗಿ ಬಳಸಲು ಪ್ರಾರಂಭಿಸಲಾಗಿದೆ ಎಂದು ನ್ಯಾಯಾಲಯ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿತು.
ಸ್ವತಃ ನ್ಯಾಯಾಲಯವನ್ನು ಸಂಪರ್ಕಿಸದ ಅಥವಾ ಲಭ್ಯವಿರುವ ಕಾನೂನು ಪರಿಹಾರಗಳನ್ನು ಬಳಸಿಕೊಳ್ಳದ ವಿಚಾರಣಾಧೀನ ಕೈದಿಗಳ ಪರವಾಗಿ ಮನವಿ ಸಲ್ಲಿಸಲು ಮೆಹಬೂಬಾ ಮುಫ್ತಿ ಕಾನೂನು ರೀತ್ಯಾ ಅಧಿಕಾರ ಹೊಂದಿಲ್ಲ ಎಂದು ನ್ಯಾಯಾಲಯ ನುಡಿಯಿತು. ಅರ್ಜಿಯು ರಾಜಕೀಯ ಸ್ವರೂಪ ಹೊಂದಿದ್ದು, ತಪ್ಪು ಭಾವನೆಯಿಂದ ದಾಖಲಿಸಲ್ಪಟ್ಟಿದೆ ಎಂದು ತರಾಟೆಗೆ ತೆಗೆದುಕೊಂಡು ಅರ್ಜಿ ವಜಾಗೊಳಿಸಿತು.