ಜಮ್ಮು ಪ್ರಕರಣ ಶ್ರೀನಗರ ವಿಭಾಗದಲ್ಲಿ, ಶ್ರೀನಗರದ ಕೇಸ್ ಜಮ್ಮು ವಿಭಾಗದಲ್ಲಿ ದಾಖಲಿಸಲು ಅನುಮತಿ ಬೇಡ ಎಂದ ಹೈಕೋರ್ಟ್

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಎರಡೂ ವಿಭಾಗಗಳಲ್ಲಿ ಇ ಫೈಲಿಂಗ್‌ಗೆ ಅನುಮತಿ ನೀಡಲಾಗಿದ್ದು ಈ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲು ಪ್ರಾಯೋಗಿಕ ತೊಂದರೆಗಳು ಎದುರಾಗುತ್ತಿಲ್ಲ ಎಂಬ ಅಂಶವನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಮ್ಮು ಪ್ರಕರಣ ಶ್ರೀನಗರ ವಿಭಾಗದಲ್ಲಿ, ಶ್ರೀನಗರದ ಕೇಸ್ ಜಮ್ಮು ವಿಭಾಗದಲ್ಲಿ ದಾಖಲಿಸಲು ಅನುಮತಿ ಬೇಡ ಎಂದ ಹೈಕೋರ್ಟ್
Published on

ಜಮ್ಮು ವಿಭಾಗದ ಪ್ರಕರಣಗಳನ್ನು ಶ್ರೀನಗರದಲ್ಲಿ ಹಾಗೂ ಶ್ರೀನಗರದ ಕೇಸ್‌ಗಳನ್ನು ಜಮ್ಮು ವಿಭಾಗದಲ್ಲಿ ದಾಖಲಿಸಲು ಅನುಮತಿ ನೀಡುವ ಪರಿಪಾಠಕ್ಕೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಇತಿಶ್ರೀ ಹಾಡಿದೆ.

ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಎರಡೂ ವಿಭಾಗಗಳಲ್ಲಿ ಇ-ಫೈಲಿಂಗ್‌ಗೆ ಅನುಮತಿ ನೀಡಲಾಗಿದ್ದು ಈ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲು ಪ್ರಾಯೋಗಿಕ ತೊಂದರೆಗಳು ಎದುರಾಗುತ್ತಿಲ್ಲ ಎಂಬ ಅಂಶ ಆಧರಿಸಿ ಮೇ 20 ರಂದು ಮುಖ್ಯ ನ್ಯಾಯಮೂರ್ತಿಪಂಕಜ್ ಮಿತ್ತಲ್‌ ಅವರು ಈ ಆದೇಶ ಹೊರಡಿಸಿದ್ದಾರೆ.

ಈ ಮೊದಲು, ಪ್ರಾಯೋಗಿಕ ತೊಂದರೆಗಳಿಂದಾಗಿ ಒಂದು ವಿಭಾಗಕ್ಕೆ ಸೇರಿದ ವ್ಯಕ್ತಿ ಮತ್ತೊಂದು ವಿಭಾಗದಲ್ಲಿ ಪ್ರಕರಣ ದಾಖಲಿಸಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆಯಬೇಕಿತ್ತು.

ಕೋವಿಡ್‌ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಎರಡೂ ವಿಭಾಗಗಳು ಪ್ರಕರಣ ದಾಖಲಿಸುವುದು ಮತ್ತು ಆಲಿಸುವುದಕ್ಕೆ ಹೈಬ್ರಿಡ್‌ ವಿಧಾನ ಆಯ್ಕೆ ಮಾಡಿಕೊಂಡಿವೆ. ಇದರಿಂದಾಗಿ ಪ್ರಕರಣಗಳನ್ನು ಇ- ವಿಧಾನದಲ್ಲಿ ದಾಖಲಿಸಲಾಗುತ್ತಿದೆ. ಈ ಸೌಲಭ್ಯ ಈಗ ದೊರೆಯುತ್ತಿರುವುದರಿಂದ ಮತ್ತೊಂದು ವಿಭಾಗದಲ್ಲಿ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸಲ್ಲಿಸುವ ಯಾವುದೇ ಅರ್ಜಿಯನ್ನು ಪುರಸ್ಕರಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಭಿನ್ನ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಅಗತ್ಯ ಎಂಬ ನಿಯಮ 2010ರಲ್ಲಿ ಜಾರಿಗೆ ಬಂದಿತ್ತು.

Also Read
ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ಜಾಮೀನು ರದ್ದತಿ ಕೋರಿ ಜಮ್ಮು ಕಾಶ್ಮೀರ ಹೈಕೋರ್ಟ್ ಮೊರೆಹೋದ ವಾಯುಪಡೆ ಮಹಿಳಾ ಪೈಲಟ್

ಆದರೆ ಕಳೆದ ವರ್ಷ ಇ- ಫೈಲಿಂಗ್‌ಗೆ ಅನುಮತಿ ದೊರೆತ ಬಳಿಕವೂ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣಗಳ ರಾಶಿಯೇ ಮುಖ್ಯ ನ್ಯಾಯಮೂರ್ತಿಗಳ ಎದುರು ಇತ್ತು. ಇದು ಮೇ 20ರ ಆದೇಶ ಹೊರಡಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರೇರಣೆ ಒದಗಿಸಿದ್ದು ಈ ಸಂಬಂಧ ಅವರು ವಿವಿಧ ನಿರ್ದೇಶನಗಳನ್ನು ನೀಡಿದ್ದಾರೆ.

ಉಚ್ಚ ನ್ಯಾಯಾಲಯಕ್ಕೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎಂಬ ಎರಡು ನ್ಯಾಯವ್ಯಾಪ್ತಿಗಳು ಇವೆ. ಹೈಕೋರ್ಟ್‌ ಜಮ್ಮು ಮತ್ತು ಶ್ರೀನಗರದಲ್ಲಿ ಎರಡು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದೇ ನ್ಯಾಯಾಲಯವಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಜಮ್ಮು ವಿಭಾಗ ಮತ್ತು ಶ್ರೀನಗರ ವಿಭಾಗದ ನ್ಯಾಯಮೂರ್ತಿಗಳಿಗೆ ಕೆಲಸ ಹಂಚಿಕೆ ಮಾಡುತ್ತಾರೆ. ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಚಳಿಗಾಲದಲ್ಲಿ ಜಮ್ಮುವಿನಲ್ಲಿ ಹಾಗೂ ಬೇಸಿಗೆಯಲ್ಲಿ ಶ್ರೀನಗರದಲ್ಲಿ ಕಾರ್ಯ ನಿರ್ವಹಿಸುತ್ತದೆ.

Kannada Bar & Bench
kannada.barandbench.com