
ಸೇನಾ ನೆಲೆ ಕಾಂಪೌಂಡ್ ಬಳಿ ಆಸ್ಪತ್ರೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿರುವ ಅರ್ಜಿ ಕ್ಷುಲ್ಲಕ ಎಂದು ಈಚೆಗೆ ತಿಳಿಸಿರುವ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ ₹10,000 ದಂಡ ವಿಧಿಸಿದೆ.
ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣವಾಗುತ್ತಿರುವ ಆಸ್ಪತ್ರೆ ಸೇನಾ ನೆಲೆಗೆ ಅಪಾಯಕಾರಿ ಎಂಬುದನ್ನು ಸಾಬೀತುಪಡಿಸುವಂತಹ ಪುರಾವೆಗಳನ್ನು ಅರ್ಜಿದಾರರು ಪ್ರಸ್ತುತಪಡಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ರಾಜೇಶ್ ಸೆಖ್ರಿ ಅವರಿದ್ದ ಪೀಠ ತಿಳಿಸಿತು.
ಭಯೋತ್ಪಾದಕರು ಮತ್ತಿತರ ಕಾನೂನುಬಾಹಿರ ಶಕ್ತಿಗಳು ಆಸ್ಪತ್ರೆಯನ್ನು ಬಳಕೆ ಮಾಡಿಕೊಳ್ಳಬಹುದು ಎಂಬ ಆರೋಪ ಅಸಂಬದ್ಧವಾಗಿದ್ದು ಅಂತಹ ಆಕ್ಷೇಪಣೆ ಎತ್ತಬೇಕಿರುವುದು ಸೇನೆ ಎಂದು ನ್ಯಾಯಾಲಯ ಹೇಳಿತು.
ರಾಷ್ಟ್ರೀಯ ಹಿತಾಸಕ್ತಿಗಾಗಿ ರಕ್ಷಣಾ ಸಚಿವಾಲಯ ಆಕ್ಷೇಪಣೆ ಎತ್ತದೇ ಇರುವುದರಿಂದ ತಾನು ಅರ್ಜಿ ಸಲ್ಲಿಸುತ್ತಿರುವುದಾಗಿ ಮನವಿದಾರರು ಮಂಡಿಸಿದ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು.
ರಾಷ್ಟ್ರೀಯ ಭದ್ರತೆ ಮತ್ತು ಸೇನಾ ನೆಲೆ ಸುರಕ್ಷತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತೆ ಖಾತರಿಪಡಿಸುವ ಜವಾಬ್ದಾರಿಯನ್ನು ನೇರವಾಗಿ ಹೊತ್ತಿರುವ ರಕ್ಷಣಾ ಸಚಿವಾಲಯಕ್ಕಿಂತ ಅರ್ಜಿದಾರರ ಆಸಕ್ತಿ ಮಿಗಿಲಾದುದು ಎಂದು ಊಹಿಸಲಾಗದು ಎಂಬುದಾಗಿ ನ್ಯಾಯಾಲಯ ಹೇಳಿದೆ.
ಪ್ರೆಸ್ ಕೋರ್ ಕೌನ್ಸಿಲ್ ಎಂಬ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ವಕೀಲರಾದ ಇಂದು ಭೂಷಣ್ ಬಾಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದರು.
ದಾವೆದಾರರ ಆತಂಕದಲ್ಲಿ ಹುರುಳಿಲ್ಲ ಎಂದ ನ್ಯಾಯಾಲಯ ಅರ್ಜಿ ವಜಾಗೊಳಿಸಿತು. ಅಲ್ಲದೆ ಸೇನಾ ಕಲ್ಯಾಣ ನಿಧಿಗೆ ₹10,000 ದಂಡ ಪಾವತಿಸುವಂತೆ ಫೆಬ್ರುವರಿ 7ರಂದು ನೀಡಿದ ಆದೇಶದಲ್ಲಿ ಸೂಚಿಸಿತು.