ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಅಥವಾ ಅರೆಸೇನಾ ಪಡೆಗಳು ದೇಶದ ಸಶಸ್ತ್ರ ಪಡೆಗಳಾಗಿದ್ದು ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಸಿಬ್ಬಂದಿಗೆ ಒದಗಿಸುತ್ತಿರುವ ಹಳೆಯ ಪಿಂಚಣಿ ಸೌಲಭ್ಯವನ್ನು (ಒಪಿಎಸ್) ಅವುಗಳಿಗೂ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಕೂಡ ಕೇಂದ್ರ ಸಶಸ್ತ್ರ ಪಡೆ ವ್ಯಾಪ್ತಿಗೆ ಬರುತ್ತವೆ.
ಅರೆಸೇನಾ ಪಡೆಗಳ ಸಿಬ್ಬಂದಿಗೆ ಒಪಿಎಸ್ ಪ್ರಯೋಜನಗಳನ್ನು ನಿರಾಕರಿಸುವ ಸರ್ಕಾರಿ ಆದೇಶ ಮತ್ತು ಅಧಿಕಾರಿ ಜ್ಞಾಪನಪತ್ರಗಳನ್ನು (ಆಫೀಸರ್ ಮೆಮೋರಾಂಡಮ್) ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ರದ್ದುಗೊಳಿಸಿತು.
ಹಳೆ ಪಿಂಚಣಿ ಯೋಜನೆ ಅರ್ಜಿದಾರರಿಗೆ ಮಾತ್ರವಲ್ಲದೆ ಎಲ್ಲಾ ಸಿಎಪಿಎಫ್ ಸಿಬ್ಬಂದಿಗೂ ಅನ್ವಯಿಸಲಿದ್ದು ಅದರಂತೆ ಎಂಟು ವಾರಗಳಲ್ಲಿ ಅಗತ್ಯ ಆದೇಶ ಹೊರಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಫೆಬ್ರವರಿ 17, 2020ರಂದು ಹೊರಡಿಸಿದ್ದ ಒಎಂ ಪ್ರಶ್ನಿಸಿ ಸಿಎಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಸಲ್ಲಿಸಿದ್ದ 80ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.
“…ನಮ್ಮ ದೇಶ ರಕ್ಷಿಸುವಲ್ಲಿ ಸಶಸ್ತ್ರ ಪಡೆಗಳ ಪಾತ್ರವನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಸದಾ ಶ್ಲಾಘಿಸಿದ್ದು ಯಾವುದೇ ನೀತಿ ನಿರ್ಧಾರ ಆ ಪಡೆಗಳ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.
ʼಸಶಸ್ತ್ರ ಪಡೆಗಳನ್ನು ಹೊರತುಪಡಿಸಿʼ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಬರುತ್ತಾರೆ ಎಂದು ಅಧಿಸೂಚನೆಗಳು ಮತ್ತು ಒಎಂನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಕೂಡ ಪೀಠ ತಿಳಿಸಿದೆ.
ಕೇಂದ್ರ ಸರ್ಕಾರವು ತನ್ನ ವಾದದ ವೇಳೆ ಅಧಿಸೂಚನೆಯಲ್ಲಿ ಬಳಸಲಾಗಿರುವ 'ಸಶಸ್ತ್ರ ಪಡೆಗಳು' ಎನ್ನುವ ಪದವು ಭೂಸೇನೆ, ನೌಕಾದಳ, ವಾಯುಸೇನೆಗೆ ಮಾತ್ರ ಅನ್ವಯಿಸುತ್ತದೆ ಎಂದು ವಾದಿಸಿತ್ತು. ಹಾಗಾಗಿ, ಅರೆ ಸೇನಾ ಪಡೆಗಳಿಗೆ ಹಳೆಯ ಪಿಂಚಣಿ ಯೋಜನೆಯ ಸೌಲಭ್ಯ ಒದಗಿಸಲಾಗದು ಎಂದಿತ್ತು.