ಇಂದು ಶಿಕ್ಷಕರಿಗೆ ಭಾರಿ ಸಂಬಳವಿದೆ: ಪ್ರಾಥಮಿಕ ಶಿಕ್ಷಕರ 'ಖಾಸಗಿ ಪಾಠ'ದ ನಿಷೇಧ ಎತ್ತಿಹಿಡಿದ ಜಮ್ಮು-ಕಾಶ್ಮೀರ ಹೈಕೋರ್ಟ್

"ರಾಷ್ಟ್ರ ನಿರ್ಮಾಣಕ್ಕಾಗಿ ಕೊಡುಗೆ ನೀಡಲು ದೇವರು ಶಿಕ್ಷಕರನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಆದರೆ, ಅವರು ತಮ್ಮ ದುರಾಸೆ ಈಡೇರಿಕೆಗಾಗಿ ತಮ್ಮ ಮನೆ ಅಥವಾ ಖಾಸಗಿ ಕೇಂದ್ರಗಳಲ್ಲಿ ಟ್ಯೂಷನ್‌ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ"
ಇಂದು ಶಿಕ್ಷಕರಿಗೆ ಭಾರಿ ಸಂಬಳವಿದೆ: ಪ್ರಾಥಮಿಕ ಶಿಕ್ಷಕರ 'ಖಾಸಗಿ ಪಾಠ'ದ ನಿಷೇಧ ಎತ್ತಿಹಿಡಿದ ಜಮ್ಮು-ಕಾಶ್ಮೀರ ಹೈಕೋರ್ಟ್
Jammu & Kashmir High Court

ಖಾಸಗಿ ಕೋಚಿಂಗ್‌ ಕೇಂದ್ರಗಳಲ್ಲಿ ಸರ್ಕಾರಿ ಶಿಕ್ಷಕರು ಟ್ಯೂಷನ್‌ ನಡೆಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಈಚೆಗೆ ಭಾಗಶಃ ಎತ್ತಿಹಿಡಿದಿದೆ. ಕಿಶ್ತ್ವಾರ್‌ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ ಹೊರಡಿಸಿರುವ ಸುತ್ತೋಲೆಯು 8ನೇ ತರಗತಿ ವರೆಗೆ ಬೋಧಿಸುವ ಸರ್ಕಾರಿ ಶಿಕ್ಷಕರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ನ್ಯಾಯಮೂರ್ತಿ ಸಂಜೀವ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠವು ಸ್ಪಷ್ಟಪಡಿಸಿದೆ.

“ಕಿಶ್ತ್ವಾರ್‌ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ ಹೊರಡಿಸಿರುವ ಆಕ್ಷೇಪಾರ್ಹವಾದ ಸುತ್ತೋಲೆಯು 2009ರ ಕಾಯಿದೆಯ, ವಿಶೇಷವಾಗಿ ಸೆಕ್ಷನ್‌ 28ರ ವ್ಯಾಪ್ತಿ, ಎಲ್ಲೆಯನ್ನು ಮೀರಿದ್ದಾಗಿದೆ. ಹೀಗಾಗಿ ಅದನ್ನು ಪ್ರೌಢಶಾಲೆ ಮತ್ತು ಕಾಲೇಜುಗಳ ಸರ್ಕಾರಿ ಬೋಧಕ ವರ್ಗಕ್ಕೆ ಅನ್ವಯಿಸಲಾಗದು. ಆಕ್ಷೇಪಿತ ಸುತ್ತೋಲೆಯು ಪ್ರಾಥಮಿಕ ಅಂದರೆ 8ನೇ ತರಗತಿಗೆ ಬೋಧಿಸುವ ಶಿಕ್ಷಕರಿಗೆ ಅನ್ವಯಿಸುತ್ತದೆ. ಹೀಗಾಗಿ ಸದರಿ ಸುತ್ತೋಲೆಯನ್ನು ಎತ್ತಿ ಹಿಡಿಯಲಾಗಿದೆ” ಎಂದು ಪೀಠ ಹೇಳಿದೆ.

“ಈಗ ಸರ್ಕಾರವು ಶಿಕ್ಷಕರಿಗೆ ಕೈತುಂಬಾ ವೇತನ ಪಾವತಿ ಮಾಡುತ್ತಿರುವುದರಿಂದ ಅವರು ಖಾಸಗಿ ಟ್ಯೂಷನ್ ಮಾಡುವ ಅಗತ್ಯತೆ ಕಾಣುವುದಿಲ್ಲ. ಅದರಲ್ಲೂ ಸರ್ಕಾರಿ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಅವಗಣನೆ ಮಾಡಿ ಟ್ಯೂಷನ್‌ ಮಾಡುವ ಅಗತ್ಯವಿಲ್ಲ. ಸರ್ಕಾರಿ ಸಂಸ್ಥೆಗಳಲ್ಲಿ ಅತ್ಯುತ್ತಮ ಬೋಧಕರು ಇದ್ದರೂ ಸರ್ಕಾರಿ ಸಂಸ್ಥೆಗಳಲ್ಲಿ ಬೋಧನೆಯ ಗುಣಮಟ್ಟವು ಗಣನೀಯವಾಗಿ ಕುಸಿದಿದೆ” ಎಂದು ಪೀಠ ಹೇಳಿದೆ.

“ಸರ್ಕಾರಿ ಶಿಕ್ಷಕರಿಗೆ ಸರ್ಕಾರವು ಸಾಕಷ್ಟು ವೆಚ್ಚ ಮಾಡಿ ಅತ್ಯುತ್ತಮ ತರಬೇತಿ ನೀಡುವುದರಿಂದ ಅವರು ಉತ್ತಮ ಶೈಕ್ಷಣಿಕ ತಂತ್ರಗಾರಿಕೆ ಮತ್ತು ಬೋಧನಾ ವಿಧಾನಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ತಮ್ಮ ಪವಿತ್ರವಾದ ವೃತ್ತಿಯ ಮೇಲೆ ಗಮನಕೇಂದ್ರೀಕರಿಸುವುದರ ಜೊತೆಗೆ ರಾಷ್ಟ್ರ ನಿರ್ಮಾಣಕ್ಕಾಗಿ ಕೊಡುಗೆ ನೀಡಲು ದೇವರು ಅವರನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಆದರೆ, ಅವರು ತಮ್ಮ ತೀರದ ದುರಾಸೆಯ ಈಡೇರಿಕೆಗಾಗಿ ತಮ್ಮ ಮನೆ ಅಥವಾ ಖಾಸಗಿ ಕೇಂದ್ರಗಳಲ್ಲಿ ಟ್ಯೂಷನ್‌ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ…

Also Read
ವಿವಾದಾತ್ಮಕ ಪೊಕ್ಸೊ ತೀರ್ಪು: ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರೆದ ನ್ಯಾ. ಪುಷ್ಪಾ ಗನೇದಿವಾಲಾ; ಪ್ರಮಾಣ ಬೋಧನೆ

…ಹಲವು ಸಂದರ್ಭದಲ್ಲಿ ತಮ್ಮ ಸರ್ಕಾರಿ ಶಾಲೆಗಳಲ್ಲಿ ತರಗತಿಗಳನ್ನು ತಪ್ಪಿಸಿ, ಖಾಸಗಿ ಟ್ಯೂಷನ್‌ ಕೇಂದ್ರಗಳಲ್ಲಿ ಹಾಜರಾಗುತ್ತಾರೆ ಖಾಸಗಿ ಟ್ಯೂಷನ್‌ ಕೇಂದ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸರ್ಕಾರಿ ಶಾಲೆಗಳಲ್ಲಿ ಅವರ ಕಾರ್ಯಕ್ಷಮತೆ ಕುಸಿಯುತ್ತದೆ. ಈ ದ್ವಂದ್ವ ಸ್ಥಿತಿಯನ್ನು ತಪ್ಪಿಸಲು ಮತ್ತು ಸರ್ಕಾರಿ ಅಧಿಕಾರಿಗಳನ್ನು ಖಾಸಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಲು ಆ ಮೂಲಕ ಉದ್ಭವಿಸಬಹುದಾದ ನೇರ ಅಥವಾ ಪರೋಕ್ಷ ಸಂಘರ್ಷಗಳನ್ನು ತಪ್ಪಿಸಲು ಉದ್ಯೋಗಿಗಳ ನಡತೆ ನೀತಿಗಳನ್ನು ರೂಪಿಸಲಾಗಿದೆ” ಎಂದು ಪೀಠ ಹೇಳಿದೆ.

ಕಳೆದ ವರ್ಷದ ನವೆಂಬರ್‌ 21ರಂದು ಹೊರಡಿಸಲಾದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೇಲಿನ ಆದೇಶ ಹೊರಡಿಸಿದೆ. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009ರ ಸೆಕ್ಷನ್‌ 28 ಅನ್ನು ಆಧರಿಸಿ ಸರ್ಕಾರವು ಸುತ್ತೋಲೆ ಹೊರಡಿಸಿತ್ತು. ಇದರ ಪ್ರಕಾರ ಶಿಕ್ಷಕರು ಖಾಸಗಿ ಟ್ಯೂಷನ್‌ನಲ್ಲಿ ಭಾಗವಹಿಸುವುದರ ಮೇಲೆ ನಿಷೇಧ ಹೇರಲಾಗಿದೆ.

No stories found.
Kannada Bar & Bench
kannada.barandbench.com