ವಿಜಯ್ ಚಿತ್ರ 'ಜನ ನಾಯಗನ್' ಬಿಡುಗಡೆ ವಿವಾದ: ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಜನವರಿ 20 ರೊಳಗೆ ಪ್ರಕರಣ ನಿರ್ಧರಿಸುವಂತೆ ಮದ್ರಾಸ್‌ ಹೈಕೋರ್ಟ್‌ಗೆ ಸೂಚಿಸಿದ ಪೀಠ.
Jana Nayagan Movie
Jana Nayagan Movie
Published on

ತಮಿಳು ನಟ, ರಾಜಕಾರಣಿ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರ ಬಿಡುಗಡೆಗೆ ಸೆನ್ಸಾರ್ ಅನುಮತಿ ಪಡೆಯುವಲ್ಲಿನ ವಿಳಂಬದ ಕುರಿತು ಆ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯ  ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಈ ಹಿಂದೆ ಜನವರಿ 9 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಬಾಕಿ ಇರುವ ಮದ್ರಾಸ್ ಹೈಕೋರ್ಟ್‌ನಲ್ಲಿಯೇ ಪ್ರಕರಣ ಮುಂದುವರೆಸುವಂತೆ ಚಲನಚಿತ್ರ ನಿರ್ಮಾಪಕರಿಗೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ತಿಳಿಸಿದೆ.

"ನಾವು ಮಧ್ಯಪ್ರವೇಶಿಸಲು ಬಯಸುವುದಿಲ್ಲ... (ಮದ್ರಾಸ್‌ ಹೈಕೋರ್ಟ್‌) ವಿಭಾಗೀಯ ಪೀಠ 20 ರಂದು ಮೇಲ್ಮನವಿಯನ್ನು ನಿರ್ಧರಿಸಲು ಯತ್ನಿಸಬಹುದು" ಎಂದು ನ್ಯಾಯಾಲಯ ಹೇಳಿದೆ.

ಚಿತ್ರದ ನಿರ್ಮಾಪಕರ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರು, ಬಿಡುಗಡೆ ದಿನಾಂಕ ನಿಗದಿಯಾಗಿದ್ದು ಸಾವಿರಾರು ಚಿತ್ರಮಂದಿರಗಳನ್ನು ಬುಕ್ ಮಾಡಲಾಗಿತ್ತು. ಇದು ನಿಜಕ್ಕೂ ದುರುದ್ದೇಶದಿಂದ ಕೂಡಿದೆ ಎಂದರು. ಆದರೂ ತಾನು ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್‌ ಅರ್ಜಿ ವಜಾಗೊಳಿಸಿತು.̤

ಹಿನ್ನೆಲೆ

ನಿರ್ಮಾಪಕರು 2025 ಡಿಸೆಂಬರ್ 18ರಂದು ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಿಬಿಎಫ್‌ಸಿ ಪರಿಶೀಲನಾ ಸಮಿತಿಯು ವೈಯಕ್ತಿಕ ವಿಚಾರಣೆಯ ನಂತರ, ಹಿಂಸಾಚಾರ, ಹೋರಾಟದ ದೃಶ್ಯಗಳು, ರಕ್ತಪಾತದ ದೃಶ್ಯಗಳು ಹಾಗೂ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಉಲ್ಲೇಖಗಳನ್ನು ಉಲ್ಲೇಖಿಸಿ ಕೆಲವು ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಹಾಗೆ ಮಾಡಿದರೆ ಚಿತ್ರಕ್ಕೆ ಯುಎ 16+ ಪ್ರಮಾಣ ಪತ್ರ ನೀಡುವಂತೆ ಶಿಫಾರಸ್ಸು ಮಾಡಿತ್ತು. ಸೂಚಿಸಿದ್ದ ಎಲ್ಲಾ ತಿದ್ದುಪಡಿ ಮಾಡಿದ್ದ ನಿರ್ಮಾಪಕರು ಚಿತ್ರದ ಹೊಸ ಆವೃತ್ತಿಯನ್ನು ಸಲ್ಲಿಸಿದ್ದರು. ನಂತರ ಚಿತ್ರಕ್ಕೆ ಯುಎ 16+ ಪ್ರಮಾಣಪತ್ರ ನೀಡಲಾಗುವುದು ಎಂದು ಅವರಿಗೆ ತಿಳಿಸಲಾಗಿತ್ತು.

ಇಷ್ಟೆಲ್ಲಾ ಆದರೂ ಧಾರ್ಮಿಕ ಭಾವನೆಗಳು ಮತ್ತು ಸಶಸ್ತ್ರ ಪಡೆಗಳ ಚಿತ್ರಣಕ್ಕೆ ಸಂಬಂಧಿಸಿದ ದೂರು ಬಂದಿರುವುದರಿಂದ ಚಲನಚಿತ್ರ (ಪ್ರಮಾಣೀಕರಣ) ನಿಯಮಾವಳಿ 24ರ ಅಡಿ ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಲಾಗಿದೆ ಎಂಬ ಇಮೇಲ್‌ ತಮಗೆ ಬಂದಿರುವುದನ್ನು ನಿರ್ಮಾಪಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮದ್ರಾಸ್‌ ಹೈಕೋರ್ಟ್‌ ಏಕಸದಸ್ಯ ಪೀಠ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸಿಬಿಎಫ್‌ಸಿ ಶಿಫಾರಸಿಗೆ ಅನುಗುಣವಾಗಿ ಚಿತ್ರ ಬಿಡುಗಡೆಗೆ ಸಿಬಿಎಫ್‌ಸಿ ಕೂಡಲೇ ಅನುಮತಿ ನೀಡಬೇಕೆಂದು ಜನವರಿ 9ರ ಬೆಳಿಗ್ಗೆ ಆದೇಶಿಸಿತ್ತು. ಚಿತ್ರ ನಿರ್ಮಾಪಕರು ಈಗಾಗಲೇ ಸಿಬಿಎಫ್‌ಸಿ ಸೂಚಿಸಿದಂತೆ ಕೆಲ ದೃಶ್ಯಗಳನ್ನು ತೆಗೆದು ಹಾಕಿರುವುದರಿಂದ ನ್ಯಾಯಾಲಯ ಸಿಬಿಎಫ್‌ಸಿಗೆ ಯು/ಎ 16 ಪ್ರಮಾಣಪತ್ರವನ್ನು ತಕ್ಷಣವೇ ನೀಡುವಂತೆ ನ್ಯಾ. ಪಿ ಟಿ ಆಶಾ ಅವರಿದ್ದ ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು.

ಇದಾದ ಕೆಲವೇ ಗಂಟೆಗಳಲ್ಲಿ ಸಿಬಿಎಫ್‌ಸಿಯು ಆದೇಶವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ವಿಭಾಗೀಯ ಪೀಠವನ್ನು ಕೋರಿತ್ತು. ವಾದ ಆಲಿಸಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಎಂ ಎಂ ಶ್ರೀವಾಸ್ತವ ನೇತೃತ್ವದ ವಿಭಾಗೀಯ ಪೀಠ  ಏಕಸದಸ್ಯ ಪೀಠದ ತೀರ್ಪಿಗೆ ತಡೆ ನೀಡಿ ಮಧ್ಯಂತರ ಆದೇಶ ಪ್ರಕಟಿಸಿತ್ತು.  ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂಬ ಕಾರಣ ಆಧರಿಸಿ ತಡೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳ ತಲುಪಿತ್ತು.

Kannada Bar & Bench
kannada.barandbench.com