ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಕೋರಿಕೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ. ಈ ಕುರಿತ ಮಾಹಿತಿಯನ್ನು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ನೀಡಿತು.
ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ತುರ್ತಾಗಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಸಿಬಿಐ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಈ ವೇಳೆ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು “ಸಿಬಿಐ ಕೋರಿಕೆಯಂತೆ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆದೇಶ ಮಾಡಿದೆ” ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮೊದಲ ಆರೋಪಿಯಾಗಿದ್ದಾರೆ. ಇಂದು ನಡೆದ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರ ಮತ್ತು ಕೇಂದ್ರೀಯ ತನಿಖಾ ದಳದ (ಸಿಬಿಐ) ನಡುವಿನ ಭಿನ್ನಮತ ಹಾಗೂ ವೈರುಧ್ಯಗಳು ಕೂಡ ಬಹಿರಂಗವಾಯಿತು. ಪ್ರಕರಣದ ವಿಚಾರಣೆಯಲ್ಲಿ ಸಿಬಿಐ ಕಡೆಯಿಂದ ಉಂಟಾಗಿರುವ ಲೋಪವನ್ನು ಸಹ ನ್ಯಾಯಾಲಯವು ವಿಶೇಷವಾಗಿ ಗಮನಿಸಿತು.
ವಿಚಾರಣೆ ಸಂದರ್ಭದಲ್ಲಿ ಧ್ಯಾನ್ ಚಿನ್ನಪ್ಪ ಅವರು “ನಾಲ್ಕು ತಿಂಗಳಾದರೂ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿಸಿಲ್ಲ ಎಂದು ಸಿಬಿಐ ಹಾಲಿ ಅರ್ಜಿಯಲ್ಲಿ ಆರೋಪ ಮಾಡಿದೆ. 2015ರಲ್ಲಿ ರಾಜ್ಯ ಸರ್ಕಾರವು ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡಿದ್ದರೂ 2021ರವರೆಗೆ ಆ ಅರ್ಜಿಯ ಕುರಿತು ಯಾವುದೇ ಕ್ರಮವನ್ನು ಸಿಬಿಐ ಕೈಗೊಂಡಿಲ್ಲ. ಸೂಕ್ತ ಸಂದರ್ಭದಲ್ಲಿ ಸಂಬಂಧಿತ ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ. ತಡವಾಗಿರುವುದಕ್ಕೆ ಹಲವು ವರ್ಷಗಳಾದರೂ ಸಿಬಿಐ ಯಾವುದೇ ಅರ್ಜಿ ಸಲ್ಲಿಸಿಲ್ಲ. ಇಂದಿನವರೆಗೂ ಜಪ್ತಿ ಆದೇಶವಾಗಿಲ್ಲ. ಈಗ ರಾಜ್ಯ ಸರ್ಕಾರವು ನಾಲ್ಕು ತಿಂಗಳಾದರೂ ಜಪ್ತಿ ಆದೇಶ ಪ್ರಕ್ರಿಯೆ ಮುಂದುವರಿಸಲು ಅನುಮತಿಸಿಲ್ಲ ಎಂದು ಸಿಬಿಐ ಅರ್ಜಿ ಸಲ್ಲಿಸಿದೆ. ಹಾಗಾದರೆ, ಈ ಹಿಂದೆ ಜಪ್ತಿ ಆದೇಶಕ್ಕೆ ಸಂಬಂಧಿಸಿದಂತೆ ಸಂಬಂಧಿತ ನ್ಯಾಯಾಲಯದಲ್ಲಿನ ಅರ್ಜಿಯ ಕುರಿತು 6-7 ವರ್ಷ ಸಿಬಿಐ ಏನು ಮಾಡುತ್ತಿತ್ತು?” ಎಂದು ಆಕ್ಷೇಪಿಸಿದರು.
ಆಗ ಪೀಠವು ಮೌಖಿಕವಾಗಿ “ಹಿಂದೆ ರಾಜ್ಯ ಸರ್ಕಾರ ನೀಡಿರುವ ಅನುಮತಿಗೆ ಸಂಬಂಧಿಸಿದಂತೆ ಜಪ್ತಿ ಆದೇಶ ಎಲ್ಲಿದೆ? 2015ರಲ್ಲಿ ಸಿಬಿಐಯು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. 2022ರಲ್ಲಿ ಅರ್ಜಿಗೆ ಸಂಖ್ಯೆ ನಿಗದಿಪಡಿಸಲಾಗಿದೆ. ಏಳು ವರ್ಷಗಳ ಕಾಲ ಪ್ರಕರಣಕ್ಕೆ ನಂಬರ್ ಸಹ ಆಗಿರಲಿಲ್ಲವೇ? ಏಳು ವರ್ಷಗಳಾದರೂ ಪ್ರಕರಣಕ್ಕೆ ಸಂಖ್ಯೆ ಏಕೆ ನಿಗದಿಯಾಗಿರಲಿಲ್ಲ. ನೀವು (ಸಿಬಿಐ) ಅದನ್ನು ಕೈಗೆತ್ತುಕೊಂಡಿರಲಿಲ್ಲವೇ? ಏಳು ವರ್ಷ ತಡವಾಗಿರುವುದನ್ನು ಹೇಗೆ ಸಮರ್ಥಿಸುತ್ತೀರಿ. ನಂಬರ್ ಆಗುವುದಕ್ಕೇ ಏಳು ವರ್ಷ ತೆಗೆದುಕೊಳ್ಳಬೇಕಾ. ನೀವು ಆ ಪ್ರಕರಣವನ್ನೇ ಕೈಗೆತ್ತುಕೊಂಡಿಲ್ಲ. ಆದರೆ, ರಾಜ್ಯ ಸರ್ಕಾರದ ಮೇಲೆ ತಡವಾಗಿದೆ ಎಂದು ದೂರು ಹೇಳುತ್ತಿದ್ದೀರಿ. ರೆಡ್ಡಿಯ 65 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಆಗಿಲ್ಲವೇ? ತಡವಾಗಿರುವುದರ ಹಿಂದಿನ ಉದ್ದೇಶವೇನು? ಪ್ರಕರಣಕ್ಕೆ ನಂಬರ್ ಆಗಲು ಏಳು ವರ್ಷಗಳು ಹಿಡಿದಿದೆ ಎಂಬುದು ಆಘಾತ ಉಂಟು ಮಾಡಿದೆ. ಎಲ್ಲಾ ಅರ್ಜಿಗಳಲ್ಲಿಯೂ ಈ ತರಹವೇ ಆಗುತ್ತದಾ? ಅಥವಾ ಇದೊಂದರಲ್ಲಿ ಮಾತ್ರ ಈ ರೀತಿಯೇ?” ಎಂದು ಸಿಬಿಐಗೆ ಚಾಟಿ ಬೀಸಿತು.
ಈ ನಡುವೆ ಮಧ್ಯಪ್ರವೇಶಿಸಿದ ಧ್ಯಾನ್ ಚಿನ್ನಪ್ಪ ಅವರು “ದೂರು ಸಲ್ಲಿಸುವ ವ್ಯಕ್ತಿ (ಸಿಬಿಐ) ತಮ್ಮಲ್ಲಿಯೇ ಸಾಕಷ್ಟು ಸಮಸ್ಯೆಗಳನ್ನು ಉಳಿಸಿಕೊಂಡಿದ್ದಾರೆ. ಏಳು ವರ್ಷ ತನಿಖೆ ನಡೆಸುತ್ತಿದ್ದೆವು ಎಂದು ಹೇಳುತ್ತಾರೆ. ಜನಾರ್ದನ ರೆಡ್ಡಿ ಆಸ್ತಿಗಳೆಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ ಎಂದು ಪೀಠದ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ ಸಿಬಿಐ ಉಲ್ಲೇಖಿಸಿದೆ. ಹೀಗಾದರೆ ಏಳು ವರ್ಷಗಳಲ್ಲಿ ಯಾವ ಆಸ್ತಿ ಉಳಿದಿದೆ” ಎಂದು ಪ್ರಶ್ನಿಸಿದರು.
ಇದನ್ನು ಆಲಿಸಿದ ಪೀಠವು “ಅರ್ಜಿಯಲ್ಲಿ ಸಿಬಿಐಯು ರಾಜ್ಯ ಸರ್ಕಾರದ ಕುರಿತು ಉಲ್ಲೇಖಿಸಿರುವ ವಿಚಾರಗಳು ವಿರುದ್ಧ ಮತ್ತು ಅನಗತ್ಯವಾಗಿವೆ. ಮೊದಲ ಜಪ್ತಿ ಆದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅನುಮತಿ ನೀಡಿದ ಬಳಿಕ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಏಳು ವರ್ಷಗಳಾದರೂ ನಂಬರ್ ಆಗಿಲ್ಲ. ಇದರರ್ಥ ಏಳು ವರ್ಷಗಳಾದರೂ ಅರ್ಜಿದಾರರಾಗಿರುವ ಸಿಬಿಐಯು ಸಂಬಂಧಿತ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಿಲ್ಲ. ಈಗ ರಾಜ್ಯ ಸರ್ಕಾರದ ಮೇಲೆ ಜವಾಬ್ದಾರಿ ಹೊರಿಸಿ, ರಾಜ್ಯ ಸರ್ಕಾರ ಯಾವುದೇ ಆದೇಶ ಮಾಡಿಲ್ಲ ಹಾಗೂ ಆರೋಪಿಯನ್ನು ರಕ್ಷಿಸುತ್ತಿದೆ ಎಂದು ವಾದಿಸಲಾಗಿದೆ. ರಾಜ್ಯ ಸರ್ಕಾರವು ಈಗ ಆದೇಶ ಮಾಡಿರುವುದರಿಂದ ಹಿಂದಿನ ಆದೇಶದಲ್ಲಿ ರಾಜ್ಯ ಸರ್ಕಾರದ ವಿರುದ್ದ ವ್ಯಕ್ತಪಡಿಸಿರುವ ವಿಚಾರಗಳನ್ನು ತೆಗೆಯಬೇಕಿದೆ. ಸಿಬಿಐ ಪ್ರಕರಣವನ್ನು ಮುಂದುವರಿಸಿ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆ ವಿನಾ ಏಳು ವರ್ಷಗಳ ನಂತರ ನಿದ್ರೆಯಿಂದ ಎದ್ದು ಅರ್ಜಿಗಳನ್ನು ಸಲ್ಲಿಸಬಾರದು. ರಾಜ್ಯ ಸರ್ಕಾರ ಜಪ್ತಿ ಅನುಮತಿ ಆದೇಶ ಮಾಡಿರುವುದರಿಂದ ಅರ್ಜಿ ವಿಲೇವಾರಿ ಮಾಡಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.
ಸಿಬಿಐ ಅನ್ನು ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಪ್ರತಿನಿಧಿಸಿದ್ದರು.