MLA Ramesh Jarakiholi

MLA Ramesh Jarakiholi

[ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಪ್ರಕರಣ] ವಿಚಾರಣಾಧೀನ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಕೆ

ಕಳೆದ ವರ್ಷದ ಮಾರ್ಚ್‌ನಲ್ಲಿ ಸಂತ್ರಸ್ತೆಯು ಜಾರಕಿಹೊಳಿ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ದೂರಿಗೆ ಸಂಬಂಧಿಸಿದ ಸುಮಾರು 300 ಪುಟಗಳ ತನಿಖಾ ವರದಿಯನ್ನು ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ಸಲ್ಲಿಸಲಾಗಿದೆ.
Published on

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ಸಂತ್ರಸ್ತ ಯುವತಿಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ದೂರಿಗೆ ಸಂಬಂಧಿಸಿದಂತೆ ಸುಮಾರು 300 ಪುಟಗಳ ಅಂತಿಮ ತನಿಖಾ ವರದಿಯನ್ನು ತನಿಖಾಧಿಕಾರಿ ಎಂ ಸಿ ಕವಿತಾ ಅವರು ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾಧೀನ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದ್ದಾರೆ.

ಬೆಂಗಳೂರಿನ ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರ ರಜೆಯ ಹಿನ್ನೆಲೆಯಲ್ಲಿ ಉಸ್ತುವಾರಿ ನ್ಯಾಯಾಧೀಶೆ ರೇಷ್ಮಾ ರೋಡ್ರಿಗ್ಸ್ ಅವರಿಗೆ ಶುಕ್ರವಾರ ಅಂತಿಮ ತನಿಖಾ ವರದಿಯನ್ನು ಪ್ರಕರಣದ ತನಿಖಾಧಿಕಾರಿಯಾದ ಪಶ್ಚಿಮ ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಅಧಿಕಾರಿ (ಎಸಿಪಿ) ಎಂ ಸಿ ಕವಿತಾ ಮತ್ತು ಹೈಕೋರ್ಟ್‌ನಲ್ಲಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ಪ್ರತಿನಿಧಿಸಿರುವ ವಕೀಲ ಪಿ ಪ್ರಸನ್ನ ಕುಮಾರ್‌ ಅವರು ಸಲ್ಲಿಸಿದರು.

ನಿನ್ನೆಯಷ್ಟೇ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ಅನುಮತಿಸಿತ್ತು.

Also Read
[ಜಾರಕಿಹೊಳಿ ಪ್ರಕರಣ] ವಿಚಾರಣಾಧೀನ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಎಸ್‌ಐಟಿಗೆ ಅನುಮತಿಸಿದ ಹೈಕೋರ್ಟ್‌

ಕಳೆದ ವರ್ಷದ ಮಾರ್ಚ್‌ನಲ್ಲಿ ಸಂತ್ರಸ್ತೆಯು ರಮೇಶ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354ಎ (ಲೈಂಗಿಕ ದೌರ್ಜನ್ಯ), 506 (ಕ್ರಿಮಿನಲ್‌ ಬೆದರಿಕೆ), 504 (ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಶಾಂತಿಗೆ ಭಂಗ ಉಂಟು ಮಾಡುವುದು), 376ಸಿ (ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂಭೋಗ ನಡೆಸುವುದು), 417 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 67ಎ (ಆಕ್ಷೇಪಾರ್ಹ ವಿಡಿಯೊ ಮತ್ತು ಮಾಹಿತಿಯ ಪ್ರಸಾರ) ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಸದರಿ ಪ್ರಕರಣವನ್ನು ತನಿಖೆ ನಡೆಸಲು ಕವಿತಾ ಅವರನ್ನು ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ನೇಮಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಕವಿತಾ ಅವರು ಇಡೀ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ದಳದ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರಿಗೆ ವರದಿ ಸಲ್ಲಿಸಿದ್ದರು. ವರದಿಯನ್ನು ಪರಿಶೀಲಿಸಿರುವ ಸೌಮೇಂದು ಮುಖರ್ಜಿ ಅವರು ಅದಕ್ಕೆ ಅನುಮೋದನೆ ನೀಡಿದ್ದರು. ಈ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಈಗ ಸಲ್ಲಿಸಲಾಗಿದೆ.

Kannada Bar & Bench
kannada.barandbench.com