[ಜಾರಕಿಹೊಳಿ ಪ್ರಕರಣ] ವಿಚಾರಣಾಧೀನ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಎಸ್‌ಐಟಿಗೆ ಅನುಮತಿಸಿದ ಹೈಕೋರ್ಟ್‌

ಎಲ್ಲಿಯವರೆಗೆ ಎಸ್‌ಐಟಿ ರಚನೆಯ ಸಿಂಧುತ್ವದ ವಿಚಾರ ನಿರ್ಧಾರವಾಗುವುದಿಲ್ಲವೋ, ಅಲ್ಲಿಯವರೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಎಸ್‌ಐಟಿಗೆ ಅನುಮತಿಸಬಾರದು ಎಂದು ಬಲವಾಗಿ ವಾದಿಸಿದ ಇಂದಿರಾ ಜೈಸಿಂಗ್.
Ramesh Jarakiholi and Karnataka HC
Ramesh Jarakiholi and Karnataka HC
Published on

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯು ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದ ಅತ್ಯಾಚಾರ ಮತ್ತಿತರ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಗುರುವಾರ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ. ಹೀಗಾಗಿ, ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮುನ್ನ ತನ್ನ ಅನುಮತಿ ಪಡೆಯಬೇಕು ಎಂದು ಹೈಕೋರ್ಟ್‌ ಹೇಳಿದ್ದ ಮಧ್ಯಂತರ ತಡೆಯಾಜ್ಞೆಯು ತೆರವಾಗಿದೆ.

ಎಸ್‌ಐಟಿ ರಚನೆಯ ಸಾಂವಿಧಾನಿಕ ಸಿಂಧುತ್ವ ಸೇರಿದಂತೆ ವಿವಿಧ ಕೋರಿಕೆಗಳನ್ನು ಒಳಗೊಂಡು ಸಂತ್ರಸ್ತೆ ಮತ್ತು ಇತರರು ಸಲ್ಲಿಸಿರುವ ಸಂಬಂಧಿತ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಆಕ್ಷೇಪಾರ್ಹವಾದ ಆದೇಶಗಳನ್ನು ಆಧರಿಸಿ ಎಸ್‌ಐಟಿ ರಚಿಸಲಾಗಿದ್ದು, ಎಸ್‌ಐಟಿಯ ಸಿಂಧುತ್ವವನ್ನು ನ್ಯಾಯಾಲಯ ನಿರ್ಧರಿಸಲಿದೆ. ಸಂತ್ರಸ್ತೆಯ ದೂರಿಗೆ ಸಂಬಂಧಿಸಿದ ತನಿಖೆ ಪೂರ್ಣಗೊಂಡಿದ್ದು, ಅದನ್ನು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ಅನುಮೋದಿಸಿದ್ದಾರೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸದಂತೆ ಎಸ್‌ಐಟಿಯನ್ನು ತಡೆಯಲಾಗದು. ತನಿಖಾ ಸಂಸ್ಥೆ ಮತ್ತು ತನಿಖಾಧಿಕಾರಿಯ ಸಮರ್ಥತೆ ಮತ್ತು ವ್ಯಾಪ್ತಿಯ ಕುರಿತಾದ ವಿಚಾರವನ್ನು ವಿಚಾರಣಾಧೀನ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ನಿರ್ಧರಿಸಲಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದ್ದು, ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಸಂಬಂಧ ಅನುಮತಿ ಕೋರಿ ಎಸ್‌ಐಟಿ ಸಲ್ಲಿಸಿದ್ದ ಮನವಿಯನ್ನು ಪೀಠವು ವಿಲೇವಾರಿ ಮಾಡಿತು.

ಇದಕ್ಕೂ ಮುನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅರ್ಜಿದಾರೆ ಗೀತಾ ಮಿಶ್ರಾ ಅವರನ್ನು ಪ್ರತಿನಿಧಿಸಿರುವ ವಕೀಲ ಜಿ ಆರ್‌ ಮೋಹನ್‌ ಮತ್ತು ಸಂತ್ರಸ್ತೆಯನ್ನು ಪ್ರತಿನಿಧಿಸಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು “ರಾಜ್ಯ ಸರ್ಕಾರ ಅಥವಾ ಹೈಕೋರ್ಟ್‌ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿಲ್ಲ. ಇಡೀ ತನಿಖೆಯನ್ನು ಸಮರ್ಥವಾಗಿ ಮತ್ತು ವ್ಯಾಪ್ತಿಗೆ ಅನುಗುಣವಾಗಿ ಮಾಡಿಲ್ಲ. ಸಂತ್ರಸ್ತೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಎಸ್‌ಐಟಿ ರಚಿಸಲಾಗಿತ್ತು. ಸದರಿ ಪ್ರಕರಣದ ವಿಶೇಷ ವಾಸ್ತವಿಕ ಸಂಗತಿಗಳು ಮತ್ತು ಪರಿಸ್ಥಿತಿಗಳನ್ನು ಪರಿಗಣಿಸಿ ತನಿಖೆಯ ಮೇಲೆ ಹೈಕೋರ್ಟ್‌ ನಿಗಾ ಇಟ್ಟಿತ್ತು. ಎಲ್ಲಿಯವರೆಗೆ ಎಸ್‌ಐಟಿ ರಚನೆಯ ಸಿಂಧುತ್ವದ ವಿಚಾರ ನಿರ್ಧಾರವಾಗುವುದಿಲ್ಲವೋ, ಅಲ್ಲಿಯವರೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅನುಮತಿಸಬಾರದು” ಎಂದು ಬಲವಾಗಿ ವಾದಿಸಿದರು.

ಎಸ್‌ಐಟಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಮತ್ತು ವಕೀಲ ಪಿ ಪ್ರಸನ್ನ ಕುಮಾರ್‌ ಅವರು “2021ರ ಮಾರ್ಚ್‌ 29ರಂದು ಸಂತ್ರಸ್ತೆ ದಾಖಲಿಸಿದ್ದ ದೂರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಬೆಂಗಳೂರು ಪೊಲೀಸ್‌ ಆಯುಕ್ತರು ಎಸ್‌ಐಟಿಗೆ ನೀಡಿದ್ದು, ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಎಂ ಸಿ ಕವಿತಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಕವಿತಾ ಅವರು ತನಿಖೆ ಪೂರ್ಣಗೊಳಿಸಿ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರಿಗೆ ತನಿಖಾ ವರದಿ ಸಲ್ಲಿಸಿದ್ದಾರೆ. ಇದನ್ನು ಸೌಮೇಂದು ಮುಖರ್ಜಿ ಅನುಮೋದಿಸಿದ್ದು, ಅದನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ನ್ಯಾಯಾಲಯ ಅನುಮತಿ ಕೋರಲಾಗಿದೆ. ಸಂತ್ರಸ್ತೆಯ ದೂರಿಗೆ ಸಂಬಂಧಿಸಿದ ತನಿಖೆಯಲ್ಲಿ ಕಾನೂನುಬಾಹಿರವಾಗಿ ನಡೆದುಕೊಳ್ಳಲಾಗಿಲ್ಲ” ಎಂದು ಹೇಳಿದರು.

“ಸದಾಶಿವ ನಗರ ಠಾಣೆಯಲ್ಲಿ ಜಾರಕಿಹೊಳಿ ಅವರು ನೀಡಿರುವ ದೂರಿಗೆ ಸಂಬಂಧಿಸಿದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸಂತ್ರಸ್ತೆಯ ತಂದೆಯು ಆರ್‌ ಟಿ ನಗರ ಠಾಣೆಯಲ್ಲಿ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖೆಯು ಪೂರ್ಣಗೊಂಡಿದ್ದು, ʼಬಿʼ ವರದಿ ಸಲ್ಲಿಸಲಾಗಿದೆ” ಎಂದರು.

Also Read
[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ರಚನೆಯ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸದೇ ವರದಿ ಸಲ್ಲಿಸಲು ಅನುಮತಿಸಬಾರದು: ಜೈಸಿಂಗ್‌

ಮುಂದುವರಿದು, “ಸಿಆರ್‌ಪಿಸಿ ಸೆಕ್ಷನ್‌ 176ರ ಪ್ರಕಾರ ಐಪಿಸಿಯ ಸೆಕ್ಷನ್‌ಗಳಾದ 376, 376 (ಎ), (ಬಿ), (ಬಿ), (ಸಿ) (ಡಿ), (ಡಿ) (ಎ), (ಬಿ) (ಡಿ) ಮತ್ತು (ಇ) ಅಡಿ ದಾಖಲಿಸಿರುವ ಪ್ರಕರಣದ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕಿದೆ. ಹೀಗಾಗಿ, ಈ ಪ್ರಕರಣದಲ್ಲಿ ತನಿಖೆಯನ್ನು ಮುಗಿಸಿ, ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಎಸ್‌ಐಟಿ ಮುಖಸ್ಥ ಸೌಮೇಂದು ಮುಖರ್ಜಿ ಅವರು ಸುದೀರ್ಘ ರಜೆಯಲ್ಲಿ ತೆರಳಿದ್ದರು. ನ್ಯಾಯಾಲಯ ತನಿಖಾ ವರದಿ ಸಲ್ಲಿಸಲು ತಡೆ ನೀಡಿತ್ತೇ ವಿನಾ ತನಿಖೆಗೆ ತಡೆ ವಿಧಿಸಿರಲಿಲ್ಲ” ಎಂದರು.

ಅಂತಿಮವಾಗಿ ಪೀಠವು ವಿಚಾರಣೆಯನ್ನು ಮಾರ್ಚ್‌ 9ಕ್ಕೆ ಮುಂದೂಡಿತು.

Kannada Bar & Bench
kannada.barandbench.com