ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಗೆ ಆಕ್ಷೇಪಿಸಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರ, ಎಸ್‌ಐಟಿ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ.
ಎಸ್‌ಐಟಿ ತನಿಖೆಯು ಪಾರದರ್ಶಕವಾಗಿಲ್ಲ ಎಂದು ಆರೋಪಿಸಿ ಸಂತ್ರಸ್ತೆ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕದಸ್ಯ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿದೆ.
“ಎಸ್‌ಐಟಿ ಮುಖ್ಯಸ್ಥರು ಹಲವು ದಿನಗಳಿಂದ ವೈದ್ಯಕೀಯ ರಜೆಯ ಮೇಲಿದ್ದಾರೆ. ತನಿಖಾ ತಂಡದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಗೃಹ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತಿದ್ದು, ಆರೋಪಿ ಜಾರಕಿಹೊಳಿ ಅವರು ಗೃಹ ಸಚಿವರಿಗೆ ಆಪ್ತರಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಎಸ್‌ಐಟಿಯಿಂದ ನ್ಯಾಯಯುತ ತನಿಖೆ ನಿರೀಕ್ಷಿಸಲಾಗದು” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
“ಅಲ್ಲದೇ, ಆರೋಪಿ ಜಾರಕಿಹೊಳಿ ಅವರ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಸಂಬಂಧ ಮಾತ್ರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅತ್ಯಾಚಾರದಂಥ ಗುರುತರ ಆರೋಪ ಎದುರಿಸುತ್ತಿರುವ ಆರೋಪಿಯ ವೀರ್ಯ, ಉಗುರು, ಕೂದಲು ಮತ್ತಿತರ ಮಾದರಿಯ ಪರೀಕ್ಷೆ ನಡೆಸಲಾಗಿಲ್ಲ” ಎಂದು ಅರ್ಜಿಯಲ್ಲಿ ವಿವರಿಸಿಲಾಗಿದೆ.
ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿ.ಡಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಚಾರಣೆಗೆ ವಹಿಸಬೇಕು ಎಂದು ಕೋರಿ ವಕೀಲ ಜಿ ಆರ್ ಮೋಹನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಈಚೆಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತ್ತು. ಈ ಸಂದರ್ಭದಲ್ಲಿ ಎಸ್‌ಐಟಿ ಮುಖ್ಯಸ್ಥ ಸೌಮೇಂಧು ಮುಖರ್ಜಿ ಅವರ ಸಹಿ ಇಲ್ಲದ ಸ್ಥಿತಿಗತಿ ವರದಿಯನ್ನು ಅಧಿಕಾರಿಗಳು ಪೀಠಕ್ಕೆ ಸಲ್ಲಿಸಿದ್ದರು. ಇದನ್ನು ಒಪ್ಪದ ಪೀಠವು ಸಂಬಂಧಪಟ್ಟ ಅಧಿಕಾರಿಯ ಸಹಿ ಒಳಗೊಂಡ ವರದಿಯನ್ನು ಜೂನ್ 17ರ ಒಳಗೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸಲ್ಲಿಸುವಂತೆ ಆದೇಶಿಸಿ, ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿತ್ತು.
ವಿಚಾರಣೆಯ ಸಂದರ್ಭದಲ್ಲಿ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಸಿಬಿಐ ವಿಚಾರಣೆಯ ಕುರಿತು ಮೂರನೇ ವ್ಯಕ್ತಿ ನಿರ್ಧರಿಸಬಾರದು. ಹೀಗಾಗಿ, ಅರ್ಜಿ ನಿರ್ವಹಣೆಗೆ ಅರ್ಹವಾಗಿಲ್ಲ” ಎಂದಿದ್ದರು.
ಇದಕ್ಕೆ ಪೀಠವು “ನ್ಯಾಯಯುತವಾಗಿ ತನಿಖೆ ನಡೆಯಬೇಕಿದೆ ಎಂಬುದು ನಮ್ಮ ಉದ್ದೇಶ. ನಿಮಗೆ ನ್ಯಾಯಸಮ್ಮತ ತನಿಖೆ ಬೇಕಿಲ್ಲವೇ? ನೀವು ಆಕ್ಷೇಪಿಸಿದರೆ ನಾವು ಹಾಗೆ ಭಾವಿಸಬೇಕಾಗುತ್ತದೆ” ಎಂದಿತ್ತು.