ತನ್ನ ಪೂರ್ವಾನುಮತಿ ಇಲ್ಲದೆ ಪರೀಕ್ಷಾ ದಿನಗಳಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸದಂತೆ ಸರ್ಕಾರಿ ಅಧಿಕಾರಿಗಳಿಗೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಿದೆ [[ರಾಜೇಂದ್ರ ಕೃಷ್ಣ ಮತ್ತು ಜಾರ್ಖಂಡ್ ಸರ್ಕಾರ ನಡುವಣ ಪ್ರಕರಣ] .
ಸೆಪ್ಟೆಂಬರ್ 21 ಮತ್ತು 22 ರಂದು ರಾಜ್ಯದಲ್ಲಿ ಮೊಬೈಲ್ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಸೇನ್ ಮತ್ತು ನ್ಯಾಯಮೂರ್ತಿ ಅನುಭಾ ರಾವತ್ ಚೌಧರಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಜಾರ್ಖಂಡ್ ಸಾಮಾನ್ಯ ಪದವಿ ಹಂತದ ಸಂಯೋಜಿತ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮೋಸ, ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಬೇರೆ ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಲು ಅಂತರ್ಜಾಲ ಸೇವೆ ಸ್ಥಗಿತಗೊಳಿಸುವುದು ಅಗತ್ಯ ಎಂದು ತನ್ನ ಆದೇಶದಲ್ಲಿ ಸರ್ಕಾರ ತಿಳಿಸಿತ್ತು. ಆದರೆ ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮೊಬೈಲ್ ಅಂತರ್ಜಾಲವನ್ನಷ್ಟೇ ನಿರ್ಬಂಧಿಸಲಾಗಿದೆ ಎಂಬ ಮಾಹಿತಿ ಸ್ವೀಕರಿಸಿದ್ದ ನ್ಯಾಯಾಲಯ ಅಂತರ್ಜಾಲ ಅಮಾನತಿಗೆ ತಡೆ ನೀಡಲು ಮೊದಲು ನಿರಾಕರಿಸಿತ್ತಾದರೂ ನಂತರ ಬ್ರಾಡ್‌ಬ್ಯಾಂಡ್ ಸೇರಿದಂತೆ ಇಡೀ ಅಂತರ್ಜಾಲ ಸೇವೆಯನ್ನೇ ರಾಜ್ಯ ಸರ್ಕಾರ ಸ್ಥಗಿತಗೊಳಿಸುತ್ತಿರುವುದನ್ನು ಅರಿತು ಭಾನುವಾರ ತುರ್ತು ವಿಚಾರಣೆ ನಡೆಸಿ ಈ ಆದೇಶ ನೀಡಿತು.
ಪಿಐಎಲ್ ವಿಚಾರಣೆ ಬಾಕಿ ಇರುವಾಗಲೇ ಇಡೀ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ನ್ಯಾಯಾಂಗದ ಆದೇಶವನ್ನು ಮೀರಿದ್ದಾಗಿದೆ ಎಂದು ಪೀಠ ನುಡಿಯಿತು.
ಇದು ನ್ಯಾಯಾಲಯಕ್ಕೆ ಮಾಡಿದ ವಂಚನೆ ಮತ್ತು ಮೋಸ. ಈ ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶ ಕಕ್ಷಿದಾರರ ನಡುವಿನ ಅನುಕೂಲತೆಯ ಸಮತೋಲನವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸುತ್ತದೆ, ಅಂದರೆ, ಸಾರ್ವಜನಿಕರ ನಡುವಿನ ಅನುಕೂಲತೆಯ ಸಮತೋಲನ ಮತ್ತು ಸೂಕ್ತ ರೀತಿಯಲ್ಲಿ ಪರೀಕ್ಷೆ ನಡೆಸುವ ಸರ್ಕಾರದ ಕಾಳಜಿಯನ್ನು ಪರಿಗಣಿಸಲಾಗಿದೆ ಎಂದರ್ಥ. ಆದರೆ ಸರ್ಕಾರದ ಹೊಸದಾಗಿ ತೆಗೆದುಕೊಂಡ ಕ್ರಮದಿಂದಾಗಿ ಈ ಸಂತುಲನಕ್ಕೆ ಧಕ್ಕೆಯಾಗಿದೆ ಎಂಬುದಾಗಿ ನ್ಯಾಯಾಲಯ ವಿವರಿಸಿದೆ.
ಅಂತರ್ಜಾಲವನ್ನು ಸಂಪೂರ್ಣ ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸುತ್ತದೆ. ಮೇಲ್ನೋಟಕ್ಕೆ ಇದು ನ್ಯಾಯಾಂಗ ನಿಂದನೆ ಎಂದು ನ್ಯಾಯಾಲಯ ಹೇಳಿದೆ.