ಜಾರ್ಖಂಡ್‌ನ ಧನ್‌ಬಾದ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆಯ ಆರೋಪಿಗಳಿಬ್ಬರೂ ದೋಷಿಗಳು ಎಂದು ಧನ್‌ಬಾದ್ ವಿಶೇಷ ನ್ಯಾಯಾಲಯ ಇಂದು (ಕೃತ್ಯ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷ) ಘೋಷಿಸಿದೆ.
ಅಪರಾಧಿಗಳಾದ ಲಖನ್ ಕುಮಾರ್ ವರ್ಮಾ ಮತ್ತು ರಾಹುಲ್ ಕುಮಾರ್ ವರ್ಮಾ ಅವರಿಗೆ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಐಪಿಸಿ ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಸಹ ವಾಚನ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯದ ಕಣ್ಮರೆ) ಅಡಿಯಲ್ಲಿ ಶಿಕ್ಷೆ ವಿಧಿಸಿದ್ದಾರೆ. ಆಗಸ್ಟ್ 6 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ನ್ಯಾಯಾಧೀಶರಾದ ಉತ್ತಮ್ ಆನಂದ್ ಜುಲೈ 28, 2021ರಂದು ವಾಯುವಿಹಾರಕ್ಕೆಂದು ತೆರಳಿದ್ದಾಗ ಆಟೊವೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಆರಂಭದಲ್ಲಿ ಇದನ್ನು ಅಪಘಾತ ಎಂದೇ ನಂಬಲಾಗಿತ್ತಾದರೂ ರಸ್ತೆಯ ಅಂಚಿನಲ್ಲಿ ಬೆಳಗಿನ ವಾಯುವಿಹಾರದಲ್ಲಿ ತೊಡಗಿದ್ದ ಅವರನ್ನು ಉದ್ದೇಶಪೂರ್ವಕವಾಗಿ ವಾಹನವೊಂದು ಡಿಕ್ಕಿ ಹೊಡೆದು ಬೀಳಿಸಿರುವುದು ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿತ್ತು. ಬಳಿಕ ಘಟನೆ ಬಗ್ಗೆ ಜಾರ್ಖಂಡ್ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.