ಅಕ್ರಮ ಸಭೆ: ಜಿಗ್ನೇಶ್ ಮೇವಾನಿ ಸೇರಿ 9 ಮಂದಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ ಗುಜರಾತ್ ನ್ಯಾಯಾಲಯ

ಜುಲೈ 2017 ರಲ್ಲಿ ಪೊಲೀಸ್ ಅನುಮತಿಯಿಲ್ಲದೆ ಯಾತ್ರೆ ನಡೆಸಿದ ಆರೋಪದಲ್ಲಿ ಅವರು ತಪ್ಪಿತಸ್ಥರೆಂದು ನ್ಯಾಯಾಲಯ ತಿಳಿಸಿದೆ.
Jignesh Mevani
Jignesh Mevani Facebook
Published on

ಜುಲೈ 2017 ರಲ್ಲಿ ಪೊಲೀಸ್ ಅನುಮತಿಯಿಲ್ಲದೆ ಯಾತ್ರೆ ಆಯೋಜಿಸಿದ್ದಕ್ಕಾಗಿ ಗುಜರಾತ್ ನ್ಯಾಯಾಲಯ ಗುರುವಾರ ವಡಗಾಂವ್‌ ಶಾಸಕಾಂಗ ಶಾಸಕ ಜಿಗ್ನೇಶ್ ಮೇವಾನಿ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ರೇಷ್ಮಾ ಪಟೇಲ್ ಸೇರಿದಂತೆ ಒಂಬತ್ತು ಮಂದಿಗೆ ಮೂರು ತಿಂಗಳ ಶಿಕ್ಷೆ ವಿಧಿಸಲಾಗಿದೆ.

ಅನುಮತಿ ಇಲ್ಲದಿದ್ದರೂ ಮೆರವಣಿಗೆ ನಡೆಸಿದ ಕಾರಣ ದಲಿತ ಹೋರಾಟಗಾರ ಹಾಗೂ ರಾಜಕಾರಣಿ ಜಿಗ್ನೇಶ್‌ ಮೇವಾನಿ ಸೇರಿದಂತೆ ಒಂಬತ್ತುಮಂದಿಯನ್ನು ಐಪಿಸಿ ಸೆಕ್ಷನ್ 143ರ ಅಡಿ ಅಪರಾಧಿಗಳು ಎಂದು ತೀರ್ಪು ನೀಡಲಾಗಿದೆ. ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಜೆ ಎ ಪಾರ್ಮಾರ್ ಅವರು ಎಲ್ಲಾ ಅಪರಾಧಿಗಳಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ₹ 1,000 ದಂಡ ವಿಧಿಸಿದರು.

Also Read
ಮೋದಿ ವಿರುದ್ಧ ಟ್ವೀಟ್: ಜಾಮೀನು ದೊರೆತ ಬೆನ್ನಿಗೇ ಮತ್ತೊಂದು ಪ್ರಕರಣದಲ್ಲಿ ಮೇವಾನಿ ಮರು ಬಂಧನ

"ಯಾತ್ರೆ ನಡೆಸುವುದು ಅಪರಾಧವಲ್ಲ ಆದರೆ ಅನುಮತಿಯಿಲ್ಲದೆ ಯಾತ್ರೆ ನಡೆಸುವುದು ಅಪರಾಧ. ಅಸಹಕಾರವನ್ನು ಎಂದಿಗೂ ಸಹಿಸಲಾಗುವುದಿಲ್ಲ." ನ್ಯಾಯಾಲಯ ಹೇಳಿದೆ. ಎಕ್ಸಿಕ್ಯುಟೀವ್‌ ಮ್ಯಾಜಿಸ್ಟ್ರೇಟ್‌ ಅವರು ನೀಡಿದ್ದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಅನುಮತಿಯೊಂದಿಗೆ ಯಾತ್ರೆ ನಡೆಸಬಹುದಿತ್ತು ಎಂದು ತೀರ್ಪಿನಲ್ಲಿ ಅಭಿಪ್ರಾಯಪಡಲಾಗಿದೆ. ವರದಿಗಳ ಪ್ರಕಾರ ಎಕ್ಸಿಕ್ಯುಟೀವ್‌ ಮ್ಯಾಜಿಸ್ಟ್ರೇಟ್‌ ಅವರು ಅನುಮತಿ ನೀಡಿ ಬಳಿಕ ಹಿಂಪಡೆದಿದ್ದರು. ಆದರೂ ಆಯೋಜಕರು ಯಾತ್ರೆ ನಡೆಸಿದ್ದರು ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಮೆವಾನಿ ಅವರನ್ನು ಅಸ್ಸಾಂ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಅವರು ಆ ಪ್ರಕರಣದಲ್ಲಿ ಜಾಮೀನು ಪಡೆದರೂ ನಂತರ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲೂ ಅವರಿಗೆ ಜಾಮೀನು ದೊರೆತಿತ್ತು.

Kannada Bar & Bench
kannada.barandbench.com