ಜಿಗ್ನೇಶ್ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಪ್ರತಿಕೂಲ ಹೇಳಿಕೆಗಳಿಗೆ ಗುವಾಹಟಿ ಹೈಕೋರ್ಟ್ ತಡೆ: ಜಾಮೀನು ಅಬಾಧಿತ

ಅಸ್ಸಾಂ ಸರ್ಕಾರ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ನೀಡಿದ ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯದ ಪ್ರತಿಕೂಲ ಹೇಳಿಕೆಗಳಿಗೆ ತಡೆ ನೀಡುತ್ತಾ “ಇದನ್ನು ಜಾಮೀನಿಗೆ ತಡೆಯಾಜ್ಞೆ ಎಂಬುದಾಗಿ ವ್ಯಾಖ್ಯಾನಿಸಬಾರದು” ಎಂದಿತು.
ಜಿಗ್ನೇಶ್ ಪ್ರಕರಣದಲ್ಲಿ ಕೆಳ ನ್ಯಾಯಾಲಯ ನೀಡಿದ್ದ ಪ್ರತಿಕೂಲ ಹೇಳಿಕೆಗಳಿಗೆ ಗುವಾಹಟಿ ಹೈಕೋರ್ಟ್ ತಡೆ: ಜಾಮೀನು ಅಬಾಧಿತ
Published on

ಹಲ್ಲೆ ಪ್ರಕರಣದಲ್ಲಿ ಗುಜರಾತ್‌ ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾನಿ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಅಸ್ಸಾಂ ಪೊಲೀಸರ ವಿರುದ್ಧ ಜಿಲ್ಲಾ ನ್ಯಾಯಾಧೀಶರು ನೀಡಿದ ಪ್ರತಿಕೂಲ ಹೇಳಿಕೆಗಳಿಗೆ ಗುವಾಹಟಿ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ [ಅಸ್ಸಾಂ ಸರ್ಕಾರ ಮತ್ತು ಜಿಗ್ನೇಶ್ ಮೇವಾನಿ ಇನ್ನಿತರರ ನಡುವಣ ಪ್ರಕರಣ].

ಅಸ್ಸಾಂ ಸರ್ಕಾರ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್‌ ನೀಡಿದ ನ್ಯಾ. ದೇವಶಿಶ್ ಬರುವಾ, ಜಿಲ್ಲಾ ನ್ಯಾಯಾಲಯದ ಪ್ರತಿಕೂಲ ಹೇಳಿಕೆಗಳಿಗೆ ತಡೆ ನೀಡುತ್ತಾ, “ಇದನ್ನು ಜಾಮೀನಿಗೆ ತಡೆಯಾಜ್ಞೆ ಎಂಬುದಾಗಿ ವ್ಯಾಖ್ಯಾನಿಸಬಾರದು” ಎಂದರು.

“ಮಹಿಳಾ ಅಧಿಕಾರಿಯ ಮೇಲೆ ಜಿಗ್ನೇಶ್‌ ಮೇವಾನಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂಬ ಎಫ್‌ಐಆರ್‌ ಸುಳ್ಳು. ಮೇವಾನಿ ಅವರನ್ನು ದೀರ್ಘಕಾಲ ಜೈಲಿನಲ್ಲಿರಿಸಲು ಅವರ ವಿರುದ್ಧ ಪ್ರಕರಣ ದಾಖಲಿಸಿದಂತೆ ತೋರುತ್ತದೆ” ಎಂದು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಜಾಮೀನು ನೀಡುವ ಸಂದರ್ಭದಲ್ಲಿ ವ್ಯಕ್ತವಾದ ಇಂತಹ ಹೇಳಿಕೆಗಳು ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಮೀರಿವೆ ಎಂದು ಹೈಕೋರ್ಟ್‌ ತಿಳಿಸಿತು. ಅಂತೆಯೇ ಎರಡನೇ ಪ್ರತಿವಾದಿ, ಮೂಲ ದೂರುದಾರರಾದ ಮಹಿಳಾ ಪೊಲೀಸ್ ಸಿಬ್ಬಂದಿ ಹೆಸರನ್ನು ಅರ್ಜಿಯಿಂದ ತೆಗೆದುಹಾಕುವಂತೆ ಆದೇಶದಲ್ಲಿ ಸೂಚಿಸಲಾಯಿತು.

Also Read
ಮೋದಿ ವಿರುದ್ಧ ಟ್ವೀಟ್: ಜಾಮೀನು ದೊರೆತ ಬೆನ್ನಿಗೇ ಮತ್ತೊಂದು ಪ್ರಕರಣದಲ್ಲಿ ಮೇವಾನಿ ಮರು ಬಂಧನ

ಬಾರ್‌ಪೇಟಾ ಸೆಷನ್ಸ್‌ ನ್ಯಾಯಾಲಯ ಅಸ್ಸಾಂ ಪೊಲೀಸರ ಕುರಿತು ನೀಡಿದ್ದ ಹೇಳಿಕೆಗಳಿಗೆ ಯಾವುದೇ ಸಾಕ್ಷ್ಯಾಧಾರದ ಬೆಂಬಲವಿಲ್ಲ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು. ಆದರೆ ಈ ಪ್ರಕರಣದಲ್ಲಿ ಹೈಕೋರ್ಟಿನ ಅವಲೋಕನಗಳು ಮೇವಾನಿ ಅವರಿಗೆ ನೀಡಿದ ಜಾಮೀನಿಗೆ ತಡೆ ಅಲ್ಲ. ಇದಕ್ಕಾಗಿ ಪ್ರತ್ಯೇಕ ತನಿಖೆ ಆರಂಭಿಸಲು ಸರ್ಕಾರ ಸ್ವತಂತ್ರವಾಗಿದೆ ಎಂದು ಪೀಠ ತಿಳಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ ವಡಗಾಂವ್‌ ಶಾಸಕ ಜಿಗ್ನೇಶ್‌ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಅವರು ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಆದರೆ ಮಹಿಳಾ ಪೊಲೀಸ್‌ ಒಬ್ಬರು ಕರ್ತವ್ಯ ನಿರತರಾದ ತಮ್ಮ ಮೇಲೆ ಜಿಗ್ನೇಶ್‌ ಅವರು ಹಲ್ಲೆ ನಡೆಸಿ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಮತ್ತೆ ಅವರನ್ನು ಬಂಧಿಸಲಾಗಿತ್ತು.

Kannada Bar & Bench
kannada.barandbench.com