ನ್ಯಾಯಾಧೀಶರು ತಮ್ಮ ಸ್ವಾತಂತ್ರ್ಯ ನಿರೂಪಿಸಲು ಸದಾ ಸರ್ಕಾರದ ವಿರುದ್ಧ ತೀರ್ಪು ನೀಡಬೇಕಿಲ್ಲ: ನಿವೃತ್ತ ಸಿಜೆಐ ಗವಾಯಿ

ನ್ಯಾ. ವಿಪುಲ್ ಪಾಂಚೋಲಿ ಅವರ ಪದೋನ್ನತಿಗೆ ಸಂಬಂಧಿಸಿದಂತೆ ಕೊಲಿಜಿಯಂನಲ್ಲಿ ನ್ಯಾ. ಬಿ.ವಿ. ನಾಗರತ್ನ ಅವರ ಭಿನ್ನಾಭಿಪ್ರಾಯದ ಬಗ್ಗೆ ನಿವೃತ್ತಿಗೆ ಕೆಲವು ಗಂಟೆಗಳ ಮೊದಲು ಸಿಜೆಐ ಗವಾಯಿ ಅವರು ಮಾತನಾಡಿದರು.
Former CJI BR Gavai
Former CJI BR Gavai
Published on

ನ್ಯಾಯಾಂಗ ಸ್ವಾತಂತ್ರ್ಯ ಎಂಬುದು ಅತಿ ಮುಖ್ಯವಾದರೂ ನ್ಯಾಯಾಧೀಶರು ತಮ್ಮ ಸ್ವಾತಂತ್ರ್ಯವನ್ನು ಸಾಬೀತುಪಡಿಸಲು ಯಾವಾಗಲೂ ಸರ್ಕಾರದ ವಿರುದ್ಧ ತೀರ್ಪು ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಭಾನುವಾರ ತಿಳಿಸಿದರು.

ಭಾನುವಾರ ತಮ್ಮ ನಿವೃತ್ತಿಗೂ ಕೆಲ ಗಂಟೆಗಳ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕರಣಗಳಲ್ಲಿ ನ್ಯಾಯಾಧೀಶರ ತೀರ್ಪು ನ್ಯಾಯಾಲಯದ ಎದುರು ಇರುವ ದಾಖಲೆಗಳನ್ನೇ ಕಟ್ಟುನಿಟ್ಟಾಗಿ ಆಧರಿಸಿರಬೇಕು. ನ್ಯಾಯಾಂಗ ಸದಾ ಸರ್ಕಾರದ ವಿರುದ್ಧ ತೀರ್ಪು ನೀಡಬೇಕಾಗುತ್ತದೆ ಎನ್ನುವುದು ತಪ್ಪು ಎಂದು ವಿವರಿಸಿದರು.

Also Read
ಮಹಿಳಾ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಲಾಗಲಿಲ್ಲ ಎಂಬ ವಿಷಾದವಿದೆ: ಸಿಜೆಐ ಗವಾಯಿ

ನ್ಯಾ. ವಿಪುಲ್ ಪಾಂಚೋಲಿ ಅವರ ಪದೋನ್ನತಿಗೆ ಸಂಬಂಧಿಸಿದಂತೆ ಕೊಲಿಜಿಯಂನಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಭಿನ್ನಾಭಿಪ್ರಾಯದ ಬಗ್ಗೆ  ಹಾಗೂ ಕೊಲಿಜಿಯಂನ ಉಳಿದ ಸದಸ್ಯರು ಅದನ್ನು ಒಪ್ಪದ ಕುರಿತು ನ್ಯಾ. ಗವಾಯಿ ಮಾತನಾಡಿದರು.

ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಗುಪ್ತಚರ ದಳ ಮತ್ತು ಕಾನೂನು ಇಲಾಖೆಯ ಅಭಿಪ್ರಾಯಗಳನ್ನು ಪರಿಗಣಿಸುವ ವೇಳೆ ಕೊಲಿಜಿಯಂ ವ್ಯವಸ್ಥೆ ನ್ಯಾಯಾಂಗ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವುದನ್ನು ಮುಂದುವರೆಸಿದೆ ಎಂದು ಅವರು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದ್ವೇಷ ಭಾಷಣವನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.

ದ್ವೇಷ ಭಾಷಣ ನಿಯಂತ್ರಣಕ್ಕೆ ಕಾನೂನು ರೂಪಿಸುವ ಅಗತ್ಯವಿದೆ.
ಸಿಜೆಐ ಬಿ.ಆರ್. ಗವಾಯಿ

ತಾನು ಬೌದ್ಧ ಧರ್ಮದ ಮೊದಲ ಹಾಗೂ ದಲಿತ ಸಮುದಾಯದ ಎರಡನೇ ಸಿಜೆಐ ಎಂದು ಹೆಮ್ಮೆ ವ್ಯಕ್ತಪಡಿಸಿದರು.  ನಿರ್ದೇಶಕ ತತ್ವಗಳು ಮತ್ತು ಸಂವಿಧಾನದ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನ ತಮ್ಮಅನೇಕ ತೀರ್ಪುಗಳಿಗೆ ಮಾರ್ಗದರ್ಶನ ನೀಡಿದೆ ಎಂದುಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ನ್ಯಾಯಮೂರ್ತಿಗಳ ವರ್ಗಾವಣೆಗಳನ್ನು ಪರಿಶೀಲನೆಯ ನಂತರವೇ ಮಾಡಲಾಗಿದೆ ವೈಯಕ್ತಿಕ ಕಾರಣಕ್ಕೆ ಅಲ್ಲ ಎಂದರು.

ಕೊಲಿಜಿಯಂನಲ್ಲಿ ಒಮ್ಮತ ಮೂಡದ ಕಾರಣ ತಮ್ಮ ಅವಧಿಯಲ್ಲಿ ಮಹಿಳಾ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಲು ಸಾಧ್ಯವಾಗಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

Also Read
'ತರ್ಕಕ್ಕಿಂತ ರಾಜಕಾರಣ ಹೆಚ್ಚಿನ ಪಾತ್ರವಹಿಸುತ್ತದೆ!ʼ ಕೆನೆ ಪದರದ ಕುರಿತ ತಮ್ಮ ತೀರ್ಪು ಸಮರ್ಥಿಸಿಕೊಂಡ ಸಿಜೆಐ ಗವಾಯಿ

ಮಸೂದೆಗೆ ಅಂಕಿತ ಹಾಗಲು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಗಡುವು ಇರದು ಎಂದು  ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ತೀರ್ಪಿನ ಕುರಿತು ಪ್ರಶ್ನಿಸಿದಾಗ ಸಂವಿಧಾನದಲ್ಲಿ ಇಲ್ಲದಿರುವುದನ್ನು ನಾವು ಹೇಳಲಾಗದು. ಸೀಮಿತ ನ್ಯಾಯಾಂಗ ಪರಿಶೀಲನೆಗೆ ನಾವು ಅವಕಾಶ ನೀಡಿದ್ದೇವೆ ಎಂಬುದಾಗಿ ಪ್ರತಿಕ್ರಿಯಿಸಿದರು.

ಕೆನೆಪದರ ಕುರಿತಾದ ತೀರ್ಪನ್ನು ಕಾನೂನು ಮಾಡಬೇಕೋ ಬೇಡವೋ ಎಂಬುದು ಸರ್ಕಾರದ ನಿರ್ಧಾರ ಆದರೆ ವಂಚಿತರಿಗೆ ಸಮಾನತೆ ನೀಡುವುದು ತೀರ್ಪಿನ ಉದ್ದೇಶವಾಗಿತ್ತು ಎಂದರು. ಇದೇ ವೇಳೆ ತಾನು ಸರ್ಕಾರದಿಂದ ಯಾವುದೇ ಒತ್ತಡ ಎದುರಿಸಿಲ್ಲ ಎಂದು ಹೇಳಿದರು.

ನಾನು ಯಾವುದೇ ಒತ್ತಡ ಎದುರಿಸಲಿಲ್ಲ.
ಸಿಜೆಐ ಬಿ.ಆರ್. ಗವಾಯಿ

ಕೊಲಿಜಿಯಂನಲ್ಲಿ ನ್ಯಾ. ಬಿ ವಿ ನಾಗರತ್ನ ಅವರ ಭಿನ್ನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಅವರು ಹೀಗೆ ನಡೆದಿರುವುದು ಇದೇ ಮೊದಲ ಬಾರಿಗೆ ಅಲ್ಲ. ಭಿನ್ನಾಭಿಪ್ರಾಯಕ್ಕೆ ಅರ್ಹತೆ ಇದ್ದಿದ್ದರೆ ಉಳಿದ ನಾಲ್ವರು ನ್ಯಾಯಮೂರ್ತಿಗಳು ಅಂತಿಮ ನಿರ್ಧಾರ ಒಪ್ಪುತ್ತಿರಲಿಲ್ಲ ಎಂದರು.

ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ. ಅಲ್ಲದೆ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕಠ್ಮುಲ್ಲಾ ಎಂಬ ಪದ ಬಳಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧದ ಕ್ರಮದ ಕುರಿತು ಮಾತನಾಡಿದ ಅವರು ನಾವು ಪ್ರಯತ್ನಿಸಿದೆವು ಆದರೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೊಸ ಮುಖ್ಯ ನ್ಯಾಯಮೂರ್ತಿಗಳ ಅವಧಿಯಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ ಎಂದರು.

ನ್ಯಾಯಾಂಗದಲ್ಲಿ ಸ್ವಜನ ಪಕ್ಷಪಾತ ಎಂಬುದಿಲ್ಲ. ಅದೊಂದು ತಪ್ಪು ಕಲ್ಪನೆ. ಗರಿಷ್ಠ ಶೇ 10–20 ಮಂದಿ ಮಾತ್ರ ಸಂಬಂಧಿಕರು ಇರುತ್ತಾರೆ. ಆದರೆ ಅವರು ಅರ್ಹರಿದ್ದಾಗ ಅವರನ್ನು ತಿರಸ್ಕರಿಸಲು ಸಾಧ್ಯವೇ? ಪರಿಚಿತರೋ ಸಂಬಂಧಿಕರೋ ಇದ್ದರೂ ಅವರಿಗೆ ಹೆಚ್ಚಿನ ಮಾನದಂಡಗಳನ್ನು ವಿಧಿಸಲಾಗುತ್ತದೆ ಎಂದರು.

ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ತಿಳಿದಿದ್ದೂ ನೀವು ಅಸಹಾಯಕರಾಗಿರಬೇಕಾದ ಪ್ರಕರಣಗಳಿವೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ನ್ಯಾ. ಗವಾಯಿ ನ್ಯಾಯಾಧೀಶರು ತೀರ್ಪು ನೀಡಬಾರದು ಬದಲಿಗೆ ನ್ಯಾಯ ನೀಡಬೇಕು ಎಂದರು.

Also Read
ಗವಾಯಿ ಅವರು ಸಿಜೆಐ ಆದ ಬಳಿಕ ತೀರ್ಪುಗಳಿಗೆ ಭಾರತೀಯತೆಯ ತಂಗಾಳಿ: ಎಸ್ ಜಿ ಮೆಹ್ತಾ

ನೀವು ಪ್ರಧಾನ ಮಂತ್ರಿಯವರನ್ನು ನಿಮ್ಮ ಮನೆಗೆ ಆಹ್ವಾನಿಸಿದಿರೆ? ಅದು ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ಹೃದಯಕ್ಕೆ ಹತ್ತಿರವಾದ ವಿಷಯ ಎಂದರೆ ಬಾಂಬೆ ಹೈಕೋರ್ಟ್‌ನ ಕೊಲ್ಹಾಪುರ ಪೀಠ ಸ್ಥಾಪನೆ. ಬಾಂಬೆ ಹೈಕೋರ್ಟ್‌ಗೆ ಹಲವು ನ್ಯಾಯಮೂರ್ತಿಗಳನ್ನೂ ನಾವು ನೇಮಿಸಿದ್ದೇವೆ ಎಂದರು.

ನಿಮ್ಮ ತಂದೆ ರಾಜ್ಯಪಾಲರಾಗಿದ್ದವರು. ನೀವು ರಾಜ್ಯಪಾಲರ ಹುದ್ದೆಗೇರಲು ಬಯಸುವಿರಾ ಎಂದಾಗ ಸಿಜೆಐ ಗವಾಯಿ ಅವರು ʼ ಇಲ್ಲ ಶಿಷ್ಟಾಚಾರದ ಪ್ರಕಾರ ಸಿಜೆಐ ಹುದ್ದೆ ರಾಜ್ಯಪಾಲರ ಹುದ್ದೆಗಿಂತಲೂ ಮಿಗಿಲಾದದ್ದುʼ ಎಂದರು.

Kannada Bar & Bench
kannada.barandbench.com